More

    ಇಬ್ರಾಹಿಂಪುರ ಗ್ರಾಪಂಗೆ ಬೀಗ ಜಡಿದ ವೃದ್ಧೆ

    ನವಲಗುಂದ: ಮಲಪ್ರಭಾ ಕಾಲುವೆ ನೀರನ್ನು ಗ್ರಾಮದ ಕೆರೆಗೆ ತುಂಬಿಸಿಕೊಳ್ಳುವಾಗ ನನ್ನ ಎರಡೂವರೆ ಎಕರೆ ಜಮೀನಿನಲ್ಲಿ ನೀರು ನಿಂತು ಜೋಳ ಬೆಳೆ ಹಾನಿಯಾಗಿದೆ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ವೃದ್ಧೆಯೊಬ್ಬಳು ತಾಲೂಕಿನ ಇಬ್ರಾಹಿಂಪುರ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

    ಇಬ್ರಾಹಿಂಪುರ ಗ್ರಾಮದ ಯಲ್ಲಮ್ಮ ಚಿಪ್ಪಾಡಿ ಅವರು ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದವರು. ಕೊಯ್ಲಿಗೆ ಬಂದ ಜೋಳದ ಬೆಳೆ ಕೈಗೆ ಸಿಗದಂತಾಗಿದೆ. ಇದಕ್ಕೆ ಗ್ರಾಪಂ ಸದಸ್ಯರು, ಪಿಡಿಒ ಗಂಗಾಧರ ಮಲ್ಲಾಪುರ ಕಾರಣ ಎಂದು ಆರೋಪಿಸಿ ಯಲ್ಲಮ್ಮ ಚಿಪ್ಪಾಡಿ ಅವರ ಪುತ್ರ ಸುರೇಶ ಚಿಪ್ಪಾಡಿ ಅವರು ಬುಧವಾರ ನವಲಗುಂದ ತಾಪಂ ಇಒ ಪವಿತ್ರಾ ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಇಬ್ರಾಹಿಂಪುರ ಕುಡಿಯುವ ನೀರಿನ ಕೆರೆ ತುಂಬಿಸಿಕೊಳ್ಳಲು ಮಲಪ್ರಭಾ ಕಾಲುವೆಯಿಂದ ನೀರು ತೆಗೆದುಕೊಳ್ಳಲಾಗುತ್ತಿದೆ. ಕೆರೆ ತುಂಬಿದ ಮೇಲೆ ನೀರು ಹೊರಗಡೆ ಹೋಗಲು ಹಳ್ಳಕ್ಕೆ ಸೇರಲು ದಾರಿ ಇದೆ. ಆದರೆ, ಗೇಟ್ ತೆಗೆಯದ ಕಾರಣ ಕಾಲುವೆ ನೀರು ಸಂಪೂರ್ಣವಾಗಿ ನಮ್ಮ ಜಮೀನಿನಲ್ಲಿ ಜಮಾವಣೆಗೊಂಡು ಜೋಳದ ಬೆಳೆ ಹಾನಿ ಮಾಡಿದೆ. ಸತತ ಐದು ವರ್ಷಗಳಿಂದ ಬೆಳೆ ನಷ್ಟ ಅನುಭವಿಸುತ್ತಿದ್ದೇವೆ. ಗ್ರಾಪಂನವರು ಬೆಳೆ ನಷ್ಟ ಪರಿಹಾರ ನೀಡುವುದಾಗಲಿ ಅಥವಾ ಹೊಲದಲ್ಲಿ ನೀರು ನಿಲ್ಲದಂತೆ ಕೆರೆಗೆ ನೀರು ತುಂಬಿಸಿಕೊಳ್ಳಲು ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಕೂಡಲೇ ನಮಗೆ ಬೆಳೆ ಹಾನಿ ಪರಿಹಾರ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

    ಮಲಪ್ರಭಾ ಕಾಲುವೆಯಿಂದ ಕೆರೆಗೆ ನೀರು ತುಂಬಿಸಿಕೊಳ್ಳುವಾಗ ಒತ್ತೇರಿ ಹೊಲದಲ್ಲಿ ನೀರು ನಿಂತಿದ್ದು, ಇದೀಗ ನೀರು ಪಂಪ್​ಸೆಟ್ ಮೂಲಕ ಖುಲ್ಲಾ ಮಾಡುತ್ತಿದ್ದೇವೆ. ಹಾನಿ ಬಗ್ಗೆ ಪರಿಶೀಲನೆ ನಡೆಸಿ ಅಜ್ಜಿಗೆ ಬೆಳೆ ಹಾನಿ ಪರಿಹಾರವನ್ನು ಗ್ರಾಪಂದಿಂದಲೇ ಭರಿಸಲು ಮುಂದಾಗುತ್ತೇವೆ. ಗೇಟ್ ಮುಚ್ಚಿದ್ದರಿಂದ ನೀರು ಹೋಗಲು ಸಾಧ್ಯವಾಗಿಲ್ಲ. ಅದಕ್ಕೆ ನೀರಾವರಿ ಇಲಾಖೆಯಿಂದ ಕಾಂಕ್ರೀಟ್ ಕಾಲುವೆ ನಿರ್ವಿುಸುವ ಅಗತ್ಯವಿದೆ. ನೀರಾವರಿಗೆ ಇಲಾಖೆಯವರಿಗೆ ಸಮಸ್ಯೆ ಬಗೆಹರಿಸುವ ಬಗೆಗೆ ಮನವರಿಕೆ ಮಾಡುತ್ತೇವೆ. | ಗಂಗಾಧರ ಮಲ್ಲಾಪೂರ ಪಿಡಿಒ, ಇಬ್ರಾಂಹಿಪುರ

    ಹೊಲದವರು ತಮ್ಮ ಜಮೀನು ಅಳತೆ ಮಾಡಿ ಒಡ್ಡು ನಿರ್ವಿುಸಿದ್ದರೆ, ನೀರು ಹೊಲಕ್ಕೆ ನುಗ್ಗುತ್ತಿರಲಿಲ್ಲ. ಹಿಂದಿನಿಂದಲೂ ಜನತಾ ಪ್ಲಾಟ್​ನಲ್ಲಿಯೇ ನೀರು ಹರಿದು ಹೋಗುತ್ತಿತ್ತು. ಈಗ ಪ್ಲಾಟ್ ನಿರ್ವಣವಾಗಿದ್ದರಿಂದ ಜನತಾ ಪ್ಲಾಟ್ ಸುತ್ತುಹಾಕಿ ನೀರು ಸಾಗಬೇಕಿದೆ. ಹೊಲಕ್ಕೆ ನೀರು ಒತ್ತೇರಿ ನುಗ್ಗುತ್ತಿದೆ. ಅವರಿಗೆ ಬೇಕಾದರೆ ಹೊಲಕ್ಕೆ ಗ್ರಾಪಂನಿಂದ ಒಡ್ಡು ನಿರ್ವಿುಸಲಾಗುವುದು. ಅವರ ಹೊಲದಲ್ಲೇ ನೀರು ಹೋಗಲು ಸರ್ಕಾರಿ ಜಾಗವಿದೆ. ಈ ಬಗ್ಗೆ ತಾಪಂ ಮೇಲಧಿಕಾರಿಗಳು ಪರಿಶೀಲಿಸಿದ್ದಾರೆ. |ಎಂ.ಎಚ್. ದೊಡ್ಡಮನಿ ಇಬ್ರಾಂಹಿಪುರ ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts