More

    ಇತಿಹಾಸ ಪ್ರಸಿದ್ಧ ಕೋಡಿಹಳ್ಳಿ ಅಭಿವೃದ್ಧಿ ಮರೀಚಿಕೆ

    ಮುಳಬಾಗಿಲು: ವಿಜಯನಗರ ಸಾಮ್ರಾಜ್ಯದ ಕಾಲದಿಂದ ಮೈಸೂರು ಮಹಾರಾಜರ ಕಾಲದವರೆಗೂ ಪ್ರಸಿದ್ಧಿಯಾಗಿದ್ದ ಮುಳಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಪಂ ವ್ಯಾಪ್ತಿಯ ಎಚ್.ಕೋಡಿಹಳ್ಳಿ ಅಭಿವೃದ್ಧಿಯಲ್ಲಿ ಮಾತ್ರ ಹಿಂದೆಯೇ ಉಳಿದಿದೆ. 700ಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ಕೋಡಿಹಳ್ಳಿ ಮಧ್ಯೆ ಹಾದುಹೋಗಿರುವ ಪಿಡಬ್ಲ್ಯುಡಿ ರಸ್ತೆ ಬದಿ ಚರಂಡಿಗಳಿಲ್ಲದೆ, ಕೊಳಚೆ ನೀರು ರಸ್ತೆ ಮಧ್ಯೆ ಹರಿಯುತ್ತಿದೆ.

    ಇತಿಹಾಸ ಸಾರುವ ಗ್ರಾಮ: ಗ್ರಾಮದ ಅಶ್ವತ್ಥಕಟ್ಟೆ ಬಳಿ ವಿಜಯನಗರ ಸಾಮ್ರಾಜ್ಯದ ಶಾಸನವಿದೆ, ಮಧ್ಯಭಾಗದಲ್ಲಿ ಕಾವಲು ಗೋಪುರವಿದೆ. ಇದರ ಒಳಗಡೆ ದಾಳಿಯ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಮತ್ತು ಸಂಪತ್ತು ಸಂರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ರಚಿತವಾದ ಗೋಪುರ ಇದೆ. ಗ್ರಾಮದ ಹೊರಭಾಗದಲ್ಲಿ ಮತ್ತೊಂದು ಶಾಸನ, ಕಲ್ಯಾಣಿ ಇದ್ದು, ಶಿಥಿಲಾವಸ್ಥೆ ತಲುಪಿದೆ. ಇತ್ತೀಚೆಗೆ ನರೇಗಾ ಯೋಜನೆಯಿಂದ ಅಭಿವೃದ್ಧಿಪಡಿಸಿದ್ದು, ತಡೆಗೋಡೆ ಇಲ್ಲದೆ ಮತ್ತೆ ಗಿಡ-ಗಂಟಿ ಬೆಳೆಯುತ್ತಿದೆ.

    ರಾ.ಹೆದ್ದಾರಿ 75ರ ನಂಗಲಿ ಮುದಿಗೆರೆ ಕ್ರಾಸ್‌ನಿಂದ ಹೆಬ್ಬಣಿಗೆ ಹೋಗುವ ರಸ್ತೆಯಲ್ಲಿ ಬರುವ ಕೋಡಿಹಳ್ಳಿಯಲ್ಲಿ ಈ ಹಿಂದೆ ಸುತ್ತಲೂ ಕೋಟೆ ಇದ್ದು, ಪ್ರಸ್ತುತ ನಿರ್ವಹಣೆಯಿಲ್ಲದೆ ಸಂಪೂರ್ಣವಾಗಿ ಮರೆಯಾಗಿದೆ. ಈಗಿರುವ ಪುರಾತನ ಕಟ್ಟಡ, ಶಾಸನಗಳನ್ನು ಸಂರಕ್ಷಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

    ಸ್ವಾಗತ ಕೋರುವ ತಿಪ್ಪೆಗಳು: ಕೋಡಿಹಳ್ಳಿಗೆ ಭೇಟಿ ನೀಡುವವರಿಗೆ ತಿಪ್ಪೆಗಳೇ ಸ್ವಾಗತ ಕೋರುತ್ತಿವೆ. ರಸ್ತೆಯ ಬದಿಯಲ್ಲಿ ತಿಪ್ಪೆಗಳೇ ಹೆಚ್ಚಾಗಿದ್ದು, ತಾಜ್ಯ ನಿರ್ವಹಣೆ ಸಮರ್ಪಕವಾಗಿಲ್ಲ. ಗ್ರಾಮದ ಡೇರಿ ಮುಂಭಾಗದ ರಸ್ತೆ ಬದಿಯಲ್ಲೇ ಅಳವಡಿಸಿರುವ ಟಿಸಿ ಕೆಳಭಾಗದಲ್ಲಿದ್ದು, ರಸ್ತೆಯಲ್ಲಿ ಸಂಚರಿಸುವವರು ಎಚ್ಚರ ತಪ್ಪಿದರೆ ಅನಾಹುತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.

    ಪ್ರವಾಸಿ ತಾಣವಾಗಲಿ: ಸಂಸದರ, ಶಾಸಕರ ಆದರ್ಶ ಗ್ರಾಮಗಳನ್ನಾಗಿ ಇಂತಹ ಕುಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಿದರೆ ಪುರಾತನ ಕಟ್ಟಡಗಳು, ಶಾಸನಗಳ ಸಂರಕ್ಷಣೆಯಾಗಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬಹುದು. ಇದರಿಂದ ಗ್ರಾಮಾಭಿವೃದ್ಧಿ ಜತೆಗೆ ಪ್ರವಾಸೋದ್ಯಮವೂ ಬೆಳೆಯುತ್ತದೆ. ಕೋಡಿಹಳ್ಳಿಯು ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು, ಸ್ವಚ್ಛತೆ ಸೇರಿ ಇನ್ನಿತರ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಶೀಘ್ರ ಮೂಲಸೌಲಭ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

    ಗ್ರಾಮದ ಪಿಡಬ್ಲ್ಯುಡಿ ರಸ್ತೆ ಮಧ್ಯೆದಲ್ಲೇ ಚರಂಡಿ ನೀರು ಎಸ್ಸಿ ಕಾಲನಿಗೆ ಹರಿದು ಬರುತ್ತಿದೆ. ಮಳೆಯಾದರೆ ಮತ್ತಷ್ಟು ನೀರು ಮನೆಗಳ ಮುಂಭಾಗದಲ್ಲಿ ಹರಿದು ಅನೈರ್ಮಲ್ಯ ಉಂಟಾಗುತ್ತಿದ್ದು, ಈ ಬಗ್ಗೆ ಗಮನಿಸುವವರೇ ಇಲ್ಲ.
    ವೆಂಕಟಪ್ಪ, ಎಚ್.ಕೋಡಿಹಳ್ಳಿ ಗ್ರಾಮಸ್ಥ

    ಗ್ರಾಮದ ಹೊರಭಾಗದಲ್ಲಿರುವ ಪುರಾತನ ಕಲ್ಯಾಣಿ ಅಭಿವೃದ್ಧಿಪಡಿಸಲಾಗಿದೆ. ಗ್ರಾಮ ಗುಡಿಸಲುಮುಕ್ತವಾಗಿದ್ದು ಶಿಥಿಲಾವಸ್ಥೆ ಮನೆಗಳಿಗೆ ವಸತಿ ಯೋಜನೆಗಳಲ್ಲಿ ಸೌಲಭ್ಯ ಒದಗಿಸಲಾಗುವುದು. ಗ್ರಾಮದ ರಸ್ತೆ, ಚರಂಡಿ ಅಭಿವೃದ್ಧಿಗೂ ಗ್ರಾಪಂನಲ್ಲಿ ಒತ್ತಡ ತರಲಾಗುವುದು.
    ಕೆ.ವಿ.ನಾಗಾರ್ಜುನ, ಗ್ರಾಪಂ ಸದಸ್ಯ, ಎಚ್.ಕೋಡಿಹಳ್ಳಿ

    ಮುದಿಗೆರೆ ಕ್ರಾಸ್‌ನಿಂದ ಹೆಬ್ಬಣಿವರೆಗೂ ಪಿಡಬ್ಲ್ಯುಡಿ ರಸ್ತೆ ಅಭಿವೃದ್ಧಿಗೆ 1.5 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಚ್.ಕೋಡಿಹಳ್ಳಿಯಲ್ಲಿ ಮೋರಿ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಜತೆಗೆ ಅಭಿವೃದ್ಧಿಪಡಿಸಲಾಗುವುದು.
    ಪಿ.ಗೋಪಾಲ್, ಎಇಇ, ಪಿಡಬ್ಲ್ಯುಡಿ ಮುಳಬಾಗಿಲು

    ಎಚ್.ಕೋಡಿಹಳ್ಳಿಗೆ ಪಿಡಿಒ ಜತೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಕ್ರಿಯಾಯೋಜನೆ ತಯಾರಿಸಲು ಸೂಚಿಸಿ ಸಮಸ್ಯೆ ಬಗೆಹರಿಸಲಾಗುವುದು.
    ಡಾ.ಕೆ.ಸರ್ವೇಶ್, ತಾಪಂ ಇಒ, ಮುಳಬಾಗಿಲು

    ಎಚ್.ಕೋಡಿಹಳ್ಳಿಯ ಬೋರ್‌ವೆಲ್ ಬಳಿ ನೀರು ಸೋರಿಕೆ ಆಗುತ್ತಿರುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮದ ಸಮಸ್ಯೆಗಳನ್ನು ಹಂತ-ಹಂತವಾಗಿ ಪರಿಹರಿಸಲಾಗುವುದು.
    ಗೇ.ಮು.ಚವಾಣ್, ಪಿಡಿಒ ಹೆಬ್ಬಣಿ ಗ್ರಾಪಂ

    ಎಚ್.ಕೋಡಿಹಳ್ಳಿ ಡೇರಿ ಮುಂಭಾಗದಲ್ಲಿರುವ ವಿದ್ಯುತ್ ಪರಿವರ್ತಕದ ಘಟಕ ಕೆಳಭಾಗದಲ್ಲಿರುವುದನ್ನು ಸರಿಪಡಿಸುವ ಜತೆಗೆ ಟಿಸಿ ಎತ್ತರದಲ್ಲಿರಿಸಲು ಕ್ರಮ ಕೈಗೊಳ್ಳಲಾಗುವುದು.
    ವಿ.ಎಂ.ರಮೇಶ್, ಎಇಇ ಬೆಸ್ಕಾಂ ಮುಳಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts