More

    ಆಹಾರದಲ್ಲಿ ಸಿರಿಧಾನ್ಯ ಬಳಕೆ ಹೆಚ್ಚಿರಲಿ

    ಕೆ.ಆರ್.ಪೇಟೆ: ಆಧುನಿಕ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತಿರುವುದರಿಂದ ನಮ್ಮ ಸಂಸ್ಕೃತಿ ನಶಿಸುತ್ತಿದ್ದು, ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್ ಕಳವಳವ್ಯಕ್ತಪಡಿಸಿದರು.

    ತಾಲೂಕಿನ ಅಕ್ಕಿಹೆಬ್ಬಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಅಂಗವಾಗಿ ಆಯೋಜಿಸಿದ್ದ ಸಿರಿಧಾನ್ಯ ಪ್ರದರ್ಶನ ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಿರಿಧಾನ್ಯಗಳು ಮಾನವನ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ. ದೈನಂದಿನ ಜೀವನದಲ್ಲಿ ಸಾಕಷ್ಟು ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಿರುವ ನಮಗೆ ಬಿಪಿ, ಶುಗರ್, ಹೃದಯ ಸಂಬಂಧಿ ಕಾಯಿಲೆಗಳು ಬಹುಬೇಗನೆ ಆವರಿಸಿಕೊಳ್ಳುತ್ತಿವೆ. ಇವುಗಳನ್ನು ನಿಯಂತ್ರಿಸಲು ಸಿರಿಧಾನ್ಯಗಳು, ಲಘು ವ್ಯಾಯಾಮ ಹಾಗೂ ನಡಿಗೆ ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು.

    ನಾವು ಪ್ರತಿದಿನ ಸೇವಿಸುವ ಆಹಾರ ಪದ್ಧತಿಗಳನ್ನು ಬದಲಿಸಿಕೊಂಡು ರಾಗಿ, ಜೋಳ, ಹಾರಕ, ಕೊರಲೆ, ಸಾಮೆ, ನವಣೆ, ಸಜ್ಜೆ, ಉದಲ ಮುಂತಾದವುಗಳನ್ನು ಸೇವಿಸಬೇಕು. ಇವುಗಳಲ್ಲಿ ಹೇರಳ ಪ್ರಮಾಣದಲ್ಲಿ ವಿಟಮಿನ್, ಖನಿಜಾಂಶ ಮತ್ತು ಕಬ್ಬಿಣಾಂಶವಿದ್ದು, ಹೆಚ್ಚಾಗಿ ಬಳಸುವ ಮೂಲಕ ಆರೋಗ್ಯವಂತರಾಗಬೇಕು. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳಿಗೆ ಬಹು ಬೇಡಿಕೆಯಿದ್ದು, ರೈತರು ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು ಎಂದು ತಿಳಿಸಿದರು.

    ಅಕ್ಕಿಹೆಬ್ಬಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ, ಹಿರಿಯ ಸಹಶಿಕ್ಷಕ ಶಿವಣ್ಣ, ಶಿಕ್ಷಕರಾದ ಈರೇಗೌಡ, ಹಮೀದ್, ಭಾಸ್ಕರ್, ಪ್ರವೀಣ್, ವಿದ್ಯಾರ್ಥಿಗಳು ಹಾಜರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts