More

    ಆಸ್ತಿ ತೆರಿಗೆ ಸಂಗ್ರಹ 21.28 ಕೋಟಿ ರೂಪಾಯಿ

    ಸಂತೋಷ ವೈದ್ಯ ಹುಬ್ಬಳ್ಳಿ

    ಲಾಕ್​ಡೌನ್ ಬಿಸಿ, ದರ ಪರಿಷ್ಕರಣೆ ಗೊಂದಲದ ನಡುವೆಯೂ ಅವಳಿ ನಗರದ ಆಸ್ತಿಧಾರಕರು ಏಪ್ರಿಲ್-ಮೇ ತಿಂಗಳಲ್ಲಿ ಹು-ಧಾ ಮಹಾನಗರ ಪಾಲಿಕೆಗೆ 2020-21ನೇ ಸಾಲಿನ ಆಸ್ತಿ ತೆರಿಗೆ ರೂಪದಲ್ಲಿ 21.28 ಕೋಟಿ ರೂ. ಸಂದಾಯ ಮಾಡಿದ್ದಾರೆ.

    ಏಪ್ರಿಲ್ ತಿಂಗಳಲ್ಲಿ 14806 ಜನರು 4.25 ಕೋ. ಹಾಗೂ ಮೇ ತಿಂಗಳಲ್ಲಿ 46300 ಜನರು 17.03 ಕೋಟಿ ಪಾವತಿಸಿದ್ದಾರೆ. ನಗದು ರೂಪದಲ್ಲಿ 20.31 ಕೋ. ಹಾಗೂ ಚೆಕ್ ಮೂಲಕ 0.97 ಕೋ. ಸಂದಾಯವಾಗಿದೆ. ಇದು ವಸೂಲಿ ಮಾಡಿರುವುದಲ್ಲ. ಆಸ್ತಿಧಾರಕರು ಪಾಲಿಕೆ ವಲಯ ಕಚೇರಿ, ಹು-ಧಾ ಒನ್ ಕೇಂದ್ರ, ಬ್ಯಾಂಕ್​ಗಳಿಗೆ ತೆರಳಿ ಹಾಗೂ ಆನ್​ಲೈನ್

    ಮೂಲಕ ಪಾವತಿಸಿದ್ದಾರೆ. ಈ ಅವಧಿಯಲ್ಲಿ ಪಾಲಿಕೆ 22 ಕೋಟಿ ರೂ. ಗುರಿ ನಿಗದಿಪಡಿಸಿಕೊಂಡಿತ್ತು. ಕಳೆದ ಸಾಲಿನ (2019-20) ಏಪ್ರಿಲ್-ಮೇ ತಿಂಗಳಲ್ಲಿ 25 ಕೋಟಿ ರೂ. ಸಂಗ್ರಹವಾಗಿತ್ತು. ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿ ಏ. 1ರಿಂದ ಆರಂಭಗೊಳ್ಳಲಿಲ್ಲ. ಕಾರಣ, ಮಾರ್ಚ್ 24ರಿಂದ ಜಾರಿಗೆ ಬಂದ ಕರೊನಾ ಲಾಕ್​ಡೌನ್ ಮೇ 3ರವರೆಗೆ ಸಂಪೂರ್ಣ ಲಾಕ್​ಡೌನ್ ಇತ್ತು. ಪಾಲಿಕೆ ಏ. 16ರಿಂದ ಆನ್​ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಿತ್ತು. ಈ ವೇಳೆಯಲ್ಲಿ ಒಂದಿಷ್ಟು ಜನ ಮನೆಯಲ್ಲಿಯೇ ಕುಳಿತ ಆನ್​ಲೈನ್​ನಲ್ಲಿ ಆಸ್ತಿ ತೆರಿಗೆ ಸಂದಾಯ ಮಾಡಿದ್ದಾರೆ. ಉಳಿದವರು ಮುಂದೆ ನೋಡಿದರಾಯಿತು ಎಂಬ ನಿರ್ಧಾರಕ್ಕೆ ಬಂದಿದ್ದರು.

    ಈಗಲೂ ಜಿಜ್ಞಾಸೆ ಇದೆ: ಮೇ 4ರಿಂದ ಲಾಕ್​ಡೌನ್ ನಿಯಮಾವಳಿಯಲ್ಲಿ ಸಡಿಲಿಕೆ ನೀಡಿದ ಬಳಿಕ ಸಾರ್ವಜನಿಕರು ಮನೆಯಿಂದ ಹೊರಗೆ ಓಡಾಡಲು ಪ್ರಾರಂಭಿಸಿದ್ದರು. ಆದರೆ, ಈ ವೇಳೆ ಪಾಲಿಕೆ ಮೇ 16ರಂದು ಆಸ್ತಿ ತೆರಿಗೆ ದರವನ್ನು ಹಠಾತ್​ನೇ ಏರಿಕೆ ಮಾಡಿ ಗೊಂದಲ ಸೃಷ್ಟಿಸಿತು. ಆರ್ಥಿಕ ವರ್ಷದ ಮಧ್ಯದಲ್ಲೇ ಏರಿಕೆ ಮಾಡಿದ್ದು ಸಮಂಜಸ ಕ್ರಮವಾಗಿರಲಿಲ್ಲ. ಇದಾದ ಆರೇ ದಿನಗಳಲ್ಲಿ ಆಸ್ತಿ ತೆರಿಗೆ ದರ ಹೆಚ್ಚಳವನ್ನು ತುಸು ತಗ್ಗಿಸಿ ಮತ್ತೊಂದು ಆದೇಶ ಹೊರಡಿಸಿತು. ಏರಿಕೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕೆಂಬ ಆಗ್ರಹ ಈಗಲೂ ಇದೆ. ಹಾಗಾಗಿ, ಆಸ್ತಿ ತೆರಿಗೆಯನ್ನು ಈಗ ಪಾವತಿಸಬೇಕೇ ಅಥವಾ ಮುಂದೆ ನೋಡಿದರಾಯಿತು ಎಂಬ ಜಿಜ್ಞಾಸೆ ಜನರಲ್ಲಿದೆ.

    2020-21ನೇ ಸಾಲಿಗೆ ಆಸ್ತಿ ತೆರಿಗೆಯು ವಾಸದ ಕಟ್ಟಡಗಳ ಮೇಲೆ ಶೇ. 15ರಷ್ಟು (ಹಿಂದಿನ ಆದೇಶದಂತೆ ಶೇ. 20), ವಾಣಿಜ್ಯ ಕಟ್ಟಡಗಳಿಗೆ ಶೇ. 20 (ಶೇ. 30), ವಾಸೇತರ ಮತ್ತು ವಾಣಿಜ್ಯಕ್ಕಲ್ಲದ ಕಟ್ಟಡಗಳಿಗೆ ಶೇ. 20 (ಶೇ. 25) ಹಾಗೂ ಎಲ್ಲ ಸ್ವರೂಪದ ಖುಲ್ಲಾ ಜಾಗಗಳಿಗೆ ಶೇ. 25 (ಶೇ. 30) ರಷ್ಟು ಏರಿಕೆ ಮಾಡಲಾಗಿದೆ. ಆಸ್ತಿ ತೆರಿಗೆ ಪಾವತಿ ಮೇಲೆ ಶೇ. 5ರಷ್ಟು ರಿಯಾಯಿತಿ ಪಡೆಯುವ ಅವಧಿ, ಮೊದಲು ಮೇ 31ರ ವರೆಗೆ ಇದ್ದ ಪರಿಣಾಮ ಕಳೆದ ವಾರ ಪಾಲಿಕೆ ವಲಯ ಕಚೇರಿ, ಹು-ಧಾ ಒನ್ ಕೇಂದ್ರ, ಬ್ಯಾಂಕ್​ಗಳಲ್ಲಿ ಜನ ದಟ್ಟಣೆ ಕಂಡು ಬಂದಿತ್ತು. ಅದೀಗ ಕರಗಿದೆ. ಕಾರಣ, ಜುಲೈ 31ರ ವರೆಗೆ ಶೇ. 5ರಷ್ಟು ರಿಯಾಯಿತಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಪಾವತಿ ವಿಳಂಬಕ್ಕೆ ಮಾಸಿಕ ಶೇ. 2ರಷ್ಟು ದಂಡ ಆಕರಣೆ ನವೆಂಬರ್ 1ರಿಂದ ಜಾರಿಗೆ ಬರಲಿದೆ. ಇವೆಲ್ಲದರ ನಡುವೆಯೂ ಹು-ಧಾ ಮಹಾನಗರ ಪಾಲಿಕೆ 2020-21ನೇ ಸಾಲಿನಲ್ಲಿ ಆಸ್ತಿ ತೆರಿಗೆ ರೂಪದಲ್ಲಿ ಒಟ್ಟು 78 ಕೋ. ರೂ. ಆದಾಯ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ.

    ಪ್ರಸಕ್ತ ಸಾಲಿನ ಏಪ್ರಿಲ್-ಮೇ ತಿಂಗಳಲ್ಲಿ ಆಸ್ತಿ ತೆರಿಗೆ ರೂಪದಲ್ಲಿ ಒಟ್ಟು 22 ಕೋಟಿ ರೂ. ಸಂಗ್ರಹವಾಗುವುದೆಂದು ನಿರೀಕ್ಷಿಸಿದ್ದೆವು. ಲಾಕ್​ಡೌನ್ ನಡುವೆಯೂ ಗುರಿ ಮುಟ್ಟಿದ್ದೇವೆ. ಜುಲೈ 31ರ ವರೆಗೆ ಶೇ. 5ರಷ್ಟು ರಿಯಾಯಿತಿ ಇರುವುದರಿಂದ ಪ್ರಸಕ್ತ ವರ್ಷ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಲಿದೆ.

    | ಡಾ. ಸುರೇಶ ಇಟ್ನಾಳ ಆಯುಕ್ತರು ಹುಧಾಮಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts