More

    ಆಶ್ರಯ ಪ್ರಸ್ತಾವನೆ ವಾಪಸ್

    ಹುಬ್ಬಳ್ಳಿ: ಇಲ್ಲಿಯ ಗೋಪನಕೊಪ್ಪದಲ್ಲಿ ಆಶ್ರಯ ಯೋಜನೆಯಡಿ ಮನೆಗಳ ನಿರ್ವಣಕ್ಕೆ ಸಲ್ಲಿಕೆಯಾಗಿದ್ದ ಭೂಮಿ ಖರೀದಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ವಾಪಸ್ ಕಳುಹಿಸಿದ್ದು, ಮರು ಪ್ರಸ್ತಾವನೆ ಸಲ್ಲಿಸಲು ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ.

    ಐವರು ರೈತರು ಒಟ್ಟಾರೆ 45 ಎಕರೆ 31 ಗುಂಟೆ ಭೂಮಿ ನೀಡಲು ಮುಂದೆ ಬಂದಿದ್ದರು. ಅದರಂತೆ ಪ್ರತಿ ಎಕರೆಗೆ 42.50 ಲಕ್ಷ ರೂ. ಪರಿಹಾರ ಬಿಡುಗಡೆಗೆ ಕೋರಿ ರಾಜೀವ ಗಾಂಧಿ ವಸತಿ ನಿಗಮ ನಿಯಮಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪರಿಹಾರ ಮೊತ್ತವು ಸರ್ಕಾರದ ಮಾರ್ಗಸೂಚಿ ದರಕ್ಕಿಂತ ಅಧಿಕವಾಗಿದೆ ಎಂದು ಹೇಳಿ ಪ್ರಸ್ತಾವನೆಯನ್ನು ವಾಪಸ್ ಕಳುಹಿಸಲಾಗಿದೆ.

    ರೈತರು ಪ್ರತಿ ಎಕರೆಗೆ 45-50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಬಳಿಕ ಮಾತುಕತೆ ಮೂಲಕ 42.50 ಲಕ್ಷ ರೂ. ನಿಗದಿ ಪಡಿಸಿ ಜಿಲ್ಲಾಧಿಕಾರಿಯವರ ಮೂಲಕ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರದ ಮಾರ್ಗಸೂಚಿ ದರ (ಪ್ರತಿ ಎಕರೆಗೆ 12.50 ಲಕ್ಷ ರೂ.)ಕ್ಕಿಂತ ಮೂರು ಪಟ್ಟು ಹೆಚ್ಚಿಗೆ, ಅಂದರೆ 37.50 ಲಕ್ಷ ರೂ. ಮಾತ್ರ ನೀಡಬಹುದು. ಇದಕ್ಕಿಂತ ಹೆಚ್ಚಿಗೆ ನೀಡಲು ಬರುವುದಿಲ್ಲವೆಂದು ನಿಗಮ ಹೇಳಿದೆ.

    ಮರು ಸಮಾಲೋಚನೆ: ಪ್ರಸ್ತಾವನೆ ವಾಪಸ್ ಬಂದಿರುವುದರಿಂದ ಹು-ಧಾ ಮಹಾನಗರ ಪಾಲಿಕೆ ಮತ್ತೊಮ್ಮೆ ರೈತರೊಂದಿಗೆ ಸಮಾಲೋಚನೆ ಸಭೆ ನಡೆಸಬೇಕಾಗಿದೆ. ಮೊದಲು ಕರೊನಾ ಹಿನ್ನೆಲೆಯಲ್ಲಿ ಸಭೆ ನಡೆಸಲು ವಿಳಂಬವಾದರೆ, ಇದೀಗ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ. ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ. 28ರಂದು ಮತದಾನ, ನವೆಂಬರ್ 2ರಂದು ಮತ ಎಣಿಕೆ ನಿಗದಿಯಾಗಿದೆ. ಈ ಕ್ಷೇತ್ರ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಚುನಾವಣೆ ನೀತಿ ಸಂಹಿತೆ ತೆರವುಗೊಂಡ ಬಳಿಕ ರೈತರೊಂದಿಗೆ ಸಮಾಲೋಚನೆ ನಡೆಸಿ ನಿಗಮಕ್ಕೆ ಮರು ಪ್ರಸ್ತಾವನೆ ಸಲ್ಲಿಸಬೇಕಿದೆ. 37.50 ಲಕ್ಷ ರೂ. (ಪ್ರತಿ ಎಕರೆಗೆ) ಪರಿಹಾರಕ್ಕೆ ರೈತರು ಒಪ್ಪುತ್ತಾರೆಯೇ ಎಂಬುದನ್ನು ಕಾದು ನೋಡಬೇಕು. ಗೋಪನಕೊಪ್ಪದಲ್ಲಿ ಉದ್ದೇಶಿತ 45 ಎಕರೆ 31 ಗುಂಟೆ ಭೂಮಿ ಲಭ್ಯವಾದರೆ ಜಿಲ್ಲೆಯ ಅತಿ ದೊಡ್ಡ ಆಶ್ರಯ ಬಡಾವಣೆ ನಿರ್ವಣವಾಗಲಿದೆ. ಇಲ್ಲಿ ಜಿ ಪ್ಲಸ್ 3 ಮಾದರಿಯಲ್ಲೇ ವಸತಿ ಸಮುಚ್ಚಯ ನಿರ್ವಿುಸಲಾಗುವುದು. ಅಂದರೆ ಪ್ರತಿ ಎಕರೆ ಪ್ರದೇಶದಲ್ಲಿ 85-90 ಕುಟುಂಬಗಳಿಗೆ ಆಶ್ರಯ ಸಿಗಲಿದೆ. ಒಟ್ಟಾರೆ 45 ಎಕರೆ ಪ್ರದೇಶದಲ್ಲಿ ಸುಮಾರು 3800 ಮನೆಗಳನ್ನು ಕಟ್ಟಬಹುದು. ಹು-ಧಾ ಅವಳಿ ನಗರದಲ್ಲಿ ಈಗಾಗಲೇ 55 ಸಾವಿರಕ್ಕೂ ಅಧಿಕ ಜನ ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ, ಕಾಯುತ್ತಿದ್ದಾರೆ.

    ವಸತಿ ಸೌಲಭ್ಯಕ್ಕೆ ಬಿಪಿಎಲ್ ಕುಟುಂಬಗಳಿಂದ ಬೇಡಿಕೆ ತೀವ್ರವಾಗಿದೆ. ಈ ನಡುವೆ ನವಲೂರಿನಲ್ಲಿ 1ಎಕರೆ 10 ಗುಂಟೆ, ಅಮರಗೊಳದಲ್ಲಿ 26 ಗುಂಟೆ ಹಾಗೂ ಕೃಷ್ಣಾಪುರ ಕಾಲನಿಯಲ್ಲಿ 2 ಎಕರೆ 20 ಗುಂಟೆ ಪಾಲಿಕೆ ಒಡೆತನದ ಜಾಗವನ್ನು ಆಶ್ರಯ ಮನೆಗಳ ನಿರ್ವಣಕ್ಕೆ ಗುರುತಿಸಲಾಗಿದೆ.

    ಆಶ್ರಯ ಮನೆಗಳ ನಿರ್ವಣಕ್ಕೆ ಗೋಪನಕೊಪ್ಪದಲ್ಲಿ ರೈತರ ಭೂಮಿ ಖರೀದಿಸುವ ಪ್ರಸ್ತಾವನೆಯನ್ನು ಸರ್ಕಾರ ವಾಪಸ್ ಕಳುಹಿಸಿದೆ. ಚುನಾವಣೆ ನೀತಿ ಸಂಹಿತೆ ಕೊನೆಗೊಂಡ ಬಳಿಕ ರೈತರೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಲಾಗುವುದು.
    | ಡಾ. ಸುರೇಶ ಇಟ್ನಾಳ ಆಯುಕ್ತರು, ಹುಧಾಮಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts