More

    ಆಶಾ ಕಾರ್ಯಕರ್ತೆಯರಿಗೆ ಶೂನ್ಯ ಬಡ್ಡಿ ದರದ ಸಾಲ

    ಹಿರೇಕೆರೂರ: ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ಭದ್ರತೆ ನೀಡುವ ದೃಷ್ಟಿಯಿಂದ 10-12 ಜನರ ಸ್ವಸಹಾಯ ಸಂಘಗಳನ್ನು ರಚಿಸಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ರೂಪಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಹೇಳಿದರು.

    ಪಟ್ಟಣದ ತರಳಬಾಳು ಸಾಂಸ್ಕೃತಿಕ ಭವನದಲ್ಲಿ ಭಾನುವಾರ ತಾಲೂಕಿನ ಸಹಕಾರಿ ಸಂಘಗಳ ವತಿಯಿಂದ ಆಯೋಜಿಸಿದ್ದ ಕರೊನಾ ಸೇನಾನಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಚೆಕ್ ಹಾಗೂ ಸೀರೆಗಳ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಕರೊನಾ ನಿಯಂತ್ರಣಕ್ಕೆ ಆಶಾ ಕಾರ್ಯಕರ್ತೆಯರು ವಾರದ 7 ದಿನವೂ ಕೆಲಸ ಮಾಡುತ್ತಿದ್ದಾರೆ. ಕರೊನಾ ಹೆಚ್ಚುತ್ತಿರುವ ಈ ದಿನಗಳಲ್ಲಿ ಆರೋಗ್ಯದತ್ತ ಗಮನಹರಿಸಬೇಕು. ರಾಜ್ಯದಲ್ಲಿ ಸಹಕಾರಿ ಸಂಘಗಳ ಮೂಲಕ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ವಿತರಿಸಲಾಗುತ್ತಿದೆ. ಇದಕ್ಕೆ 12.75 ಕೋಟಿ ರೂ. ವೆಚ್ಚವಾಗುತ್ತಿದೆ ಎಂದರು.

    ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಕರೊನಾ ನಿಯಂತ್ರಣಕ್ಕೆ ಹೋರಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಕಾಯಂಗೊಳಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಮನವಿ ಮಾಡುತ್ತೇನೆ ಎಂದರು.

    ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಆಶಾ ಕಾರ್ಯಕರ್ತೆಯರ ಶ್ರಮ ಅಪಾರ. ಅವರಿಗೆ ಧೈರ್ಯ ತುಂಬಲು ಸಹಕಾರ ಸಚಿವ ಸೋಮಶೇಖರ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಮಾದರಿ ಕೆಲಸ ಮಾಡುತ್ತಿದ್ದಾರೆ ಎಂದರು.

    234 ಸೀರೆ ವಿತರಣೆ

    ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕಿನ 234 ಆಶಾ ಕಾರ್ಯಕರ್ತೆಯರಿಗೆ ಎರಡು ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ತಲಾ 3 ಸಾವಿರ ರೂ.ನಂತೆ ಸುಮಾರು 7 ಲಕ್ಷ ರೂ. ಪ್ರೋತ್ಸಾಹ ಧನ ಚೆಕ್ ಹಾಗೂ ದೊಡ್ಡಗೌಡ ಪಾಟೀಲ, ಶಂಭಣ್ಣ ಗೂಳಪ್ಪನವರ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಅವರು ವೈಯಕ್ತಿಕವಾಗಿ ನೀಡಿದ 70 ಸಾವಿರ ರೂ. ಮೌಲ್ಯದ 234 ಸೀರೆಗಳನ್ನು ವಿತರಿಸಲಾಯಿತು.

    ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಸಿಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ತಾಪಂ ಅಧ್ಯಕ್ಷ ರಾಜು ಬಣಕಾರ, ಎಪಿಎಂಸಿ ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ, ಜನತಾ ಬಜಾರ ಅಧ್ಯಕ್ಷ ಜ್ಞಾನೇಶ ಅಬಲೂರು, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಗಣೇಶಗೌಡ ಪಾಟೀಲ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಹಾಲನಗೌಡ ಮುದಿಗೌಡರ, ಸಹಕಾರಿ ಮುಖಂಡರಾದ ಡಿ.ಸಿ. ಪಾಟೀಲ, ಜಗದೀಶ ತಂಬಾಕದ, ಶಂಭಣ್ಣ ಗೂಳಪ್ಪನವರ, ಸಹಕಾರ ಇಲಾಖೆ ಅಧಿಕಾರಿಗಳಾದ ಜಿ.ಎಂ. ಪಾಟೀಲ, ತಿಮ್ಮಣ್ಣ ಸಾಳೇರ, ನಾಗಪ್ಪ ಕುಮ್ಮೂರ, ಎಸ್.ಜಿ. ಸುಣಗಾರ, ಮುಖಂಡರಾದ ಏಕೇಶಪ್ಪ ಬಣಕಾರ, ರವಿಶಂಕರ ಬಾಳಿಕಾಯಿ, ಎಂ.ವಿ. ಹೊಂಬರಡಿ, ಎಸ್.ಬಿ.ಪಾಟೀಲ, ಯು.ಎಸ್. ಕಳಗೊಂಡದ ಹಾಗೂ ಮತ್ತಿತರರು ಇದ್ದರು. ಪ್ರಾಚಾರ್ಯ ಎಸ್.ಬಿ. ಚನ್ನಗೌಡ್ರ, ದೈಹಿಕ ಶಿಕ್ಷಕ ರಾಜು ಕರೇಗೌಡ್ರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts