More

    ಆಲಸ್ಯ ತೊರೆದರೆ ಸಾಧನೆ ಮಾಡಲು ಸಾಧ್ಯ

    ಸಿದ್ದಾಪುರ: ಜೀವನದಲ್ಲಿ ಯಶಸ್ವಿಯಾಗಲು, ಜೀವನ ಫಲಿಸಲು ಪರಿಶ್ರಮ ಬೇಕು. ಪರಿಶ್ರಮ ಮಾಡಲು ಆಲಸ್ಯ ಬಿಡಬೇಕು. ಪ್ರಾಮಾಣಿಕತೆ, ಪರಿಶ್ರಮ, ಭಕ್ತಿಯಿದ್ದಲ್ಲಿ ಸಾಧನೆ ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

    ಸಿದ್ದಾಪುರದ ಇಂದಿರಾನಗರದ ಶ್ರೀರಾಮ ಸೌಧದಲ್ಲಿ ಶುಕ್ರವಾರ ನಡೆದ ಧಾರ್ವಿುಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಗುರುಪಾದುಕಾ ಪೂಜೆ, ಗುರುಭಿಕ್ಷೆ ಸ್ವೀಕರಿಸಿ ಶ್ರೀಗಳು ಆಶೀರ್ವಚನ ನೀಡಿದರು.

    ಜನರಲ್ಲಿ ಎಷ್ಟೇ ಸಾಮರ್ಥ್ಯವಿದ್ದರೂ ಜಡತ್ವ ಮನೆಮಾಡಿದಲ್ಲಿ ಅವರಿಂದ ಏನೂ ಸಾಧಿಸಲಾಗದು. ಸಮಯದ ಮಹತ್ವ ತಿಳಿದು ಸದಾ ಕ್ರಿಯಾಶೀಲತೆ ಬೆಳೆಸಿಕೊಂಡಲ್ಲಿ ಕುಟುಂಬ, ಸಮಾಜ ರಕ್ಷಣೆ ಸಾಧ್ಯ ಎಂದರು.

    ಅನವಶ್ಯಕ ಖರ್ಚು ವೆಚ್ಚ ಕಡಿಮೆ ಮಾಡಿ ಗೋಶಾಲೆಗಳಿಗೆ, ದೇವಾಲಯಗಳಿಗೆ, ಧಾರ್ವಿುಕ ಕಾರ್ಯಗಳಿಗೆ ದುಡಿಮೆಯ ಹಣ ನೀಡಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ವ್ಯಕ್ತಿಯೊಬ್ಬನ ಹಾಗೂ ಕುಟುಂಬವೊಂದರ ಏಳಿಗೆಯಲ್ಲಿ ಅನೇಕರ ಸಹಾಯ ಇರುತ್ತದೆ. ಗುರುಹಿರಿಯರು, ಒಡನಾಡಿಗಳು, ಸಮಾಜದ ಸಹಕಾರವಿರುತ್ತದೆ. ನಮ್ಮ ಜೀವನದಲ್ಲಿ ಒಳ್ಳೆಯದಾದಾಗ ನಾನು ಎಂಬ ಅಹಂಗೆ ಒಳಗಾಗದೇ ನಾವು ಎಂಬ ವಿಶಾಲ ಮನೋಭಾವ ಅಳವಡಿಸಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.

    ಗಣಪತಿ ರಾಮಚಂದ್ರ ಹೆಗಡೆ ಹಾಗೂ ಸುಮಂಗಲಾ ಹೆಗಡೆ ದಂಪತಿ ಗುರುಭಿಕ್ಷಾ ಸೇವೆ ನೆರವೇರಿಸಿ ಫಲ ಸಮರ್ಪಿಸಿದರು. ಭಾಸ್ಕರ ಹೆಗಡೆ ಕೊಡಗಿಬೈಲ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಶ್ರೀಪತಿ ಹೆಗಡೆ ಕೊಡ್ಗಿಬೈಲ್, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಸಿದ್ದಾಪುರ ಮಂಡಲ ಅಧ್ಯಕ್ಷ ಸುಬ್ರಾಯ ಹೆಗಡೆ ಸುಂಗೋಳಿಮನೆ, ಜಿ.ಎಸ್. ಭಟ್ಟ ಗುಂಜಗೋಡ, ಮಂಡಲ, ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts