More

    ಆರೋಗ್ಯಯುತ ಜೀವನಕ್ಕೆ ಸಿರಿಧಾನ್ಯ ಅವಶ್ಯ

    ಬಾಗಲಕೋಟೆ: ಆರೋಗ್ಯಯುತವಾದ ಜೀವನ ನಡೆಸಲು ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಸಾವಯವ ಕೃಷಿಯಿಂದ ಬೆಳೆಗಳು ಹಾಗೂ ಸಿರಿಧಾನ್ಯಗಳ ಬಳಕೆ ಅವಶ್ಯವಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
    ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿ.ಪಂ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು, ಶಿರೋಳನ ಮಾತೋಶ್ರೀ ಉಮಾತಾಯಿ ಟ್ರಸ್ಟ್, ಜಿಲ್ಲಾ ಕೃಷಿಕ ಸಮಾಜ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ತೋವಿವಿ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ಸಿರಿಧಾನ್ಯ, ಸಾವಯವ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
    ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ದೇಶದ ಪ್ರಧಾನಮಂತ್ರಿಗಳು ವಿಶ್ವಸಂಸ್ಥೆಯಲ್ಲಿ ಸಿರಿಧಾನ್ಯಗಳ ಉಪಯೋಗ ಪ್ರಸ್ತಾವನೆ ಮಾಡಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ೨೦೨೩ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ಘೋಷಿಸಲಾಯಿತು. ನಮ್ಮ ರೈತರಲ್ಲಿ ಸಿರಿಧಾನ್ಯ ಬೆಳೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ರೈತರ ಆದಾಯ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಇಂದಿನ ದಿನಗಳಲ್ಲಿ ಹಳೇ ಆಹಾರ ಪದ್ದತಿ ಕಡಿಮೆಯಾಗಿದ್ದು, ಸಿರಿಧಾನ್ಯಗಳ ಮಹತ್ವವನ್ನು ಕಾರ್ಯಕ್ರಮಗಳ ಮೂಲಕ ಎಲ್ಲರಲ್ಲಿ ಆರೋಗ್ಯಯುತವಾದ ಸಿರಿಧಾನ್ಯ ಸೇವನೆ ಆರಂಭಿಸಬೇಕಿದೆ ಎಂದರು.
    ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ನಾವೆಲ್ಲರೂ ನಿರೋಗಿಗಳಾಗಿ ಬದುಕಬೇಕಾದರೆ ಸಿರಿಧಾನ್ಯಗಳನ್ನು ಬಳಕೆ ಅಗತ್ಯವಾಗಿದೆ. ಹಳ್ಳಿಗಳಲ್ಲಿ ಜೋಳ, ಅಗಸಿ, ಸಜ್ಜೆ ಹಾಗೂ ಅಕ್ಕಡಿ ಕಾಳುಗಳು ಬೆಳೆಯುವದನ್ನು ತಪ್ಪುತ್ತಿರಲಿಲ್ಲ. ತಾವು ಬೆಳೆದ ಬೆಳೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದರು. ತಾವು ಬೆಳೆದ್ದನ್ನೇ ವರ್ಷವೀಡಿ ಬಳಕೆ ಮಾಡಿಕೊಂಡು ಆರೋಗ್ಯಯುತ ಜೀವನ ನಡೆಸುತ್ತಿದ್ದರು. ಇಂದಿನ ಕಾಲದ ಆಹಾರ ಪದ್ಧತಿಯಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅದರಿಂದ ಹೊರಬರಲು ಸಿರಿಧಾನ್ಯಗಳನ್ನು ಬಳಕೆ ಮಾಡುವ ಮೂಲಕ ರೈತರ ಆದಾಯವನ್ನು ಸಹ ಹೆಚ್ಚಿಸುವ ಕೆಲಸವಾಗಬೇಕು ಎಂದರು.
    ಶಾಸಕ ವೀರಣ್ಣ ಚರಂತಿಮಠ ಮಾತನಾಡಿ,ರಾಸಾಯನಿಕ ಬಳಸಿ ಬೆಳೆದ ಆಹಾರ ಆರೋಗ್ಯಕರವಲ್ಲವೆಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಆದರೆ ಪ್ರಧಾನಮಂತ್ರಿಗಳು ಸಿರಿಧಾನ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಪಾರ್ಲಿಮೆಂಟನಲ್ಲಿ ಸಿರಿಧಾನ್ಯದ ಊಟವನ್ನು ಏರ್ಪಾಡು ಮಾಡಿದ್ದರು. ವಿಶ್ವಕ್ಕೆ ಜೋಳವನ್ನು ಪರಿಚಯಿಸಿದ ಹಾಗೆ ಸಿರಿಧಾನ್ಯವನ್ನು ಸಹ ಪರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ಬೆಂಬಲ ಅಗತ್ಯವಾಗಿದೆ ಎಂದರು.
    ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ ಅವರು ವರ್ಚೂವಲ್ ಮೂಲಕ ಕಾರ್ಯಕ್ರಮ ಕುರಿತು ಮಾತನಾಡಿದರು. ನಗರಸಭೆ ಅಧ್ಯಕ್ಷೆ ಜ್ಯೋತಿ, ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ, ಜಿ.ಪಂ ಸಿಇಒ ಟಿ.ಭೂಬಾಲನ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಬಾಗಲಕೋಟೆ ಉಪ ಕೃಷಿ ನಿರ್ದೇಶಕ ಎಚ್.ಡಿ.ಕೋಳೇಕರ, ಜಮಖಂಡಿ ಉಪ ಕೃಷಿ ನಿರ್ದೇಶಕ ಕೆ.ಎಸ್.ಅಗಸನಾಳ, ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts