More

    ಆರೇಕುರಹಟ್ಟಿ ಕೆರೆ ನೀರು ಕಲುಷಿತ

    ನವಲಗುಂದ: ತಾಲೂಕಿನ ಆರೇಕುರಹಟ್ಟಿ ಗ್ರಾಮದಲ್ಲಿ ಸಾರ್ವಜನಿಕರು ಕುಡಿಯುವ ಕೆರೆ ನೀರು ಕಲುಷಿತಗೊಂಡಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಆಗ್ರಹಿಸಿ ಯಮನೂರ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಬುಧವಾರ ಪ್ರತಿಭಟನೆ ನಡೆಸಿದರು.

    ಗ್ರಾಮಸ್ಥ ಎಚ್.ಕೆ. ಲಕ್ಕಣ್ಣವರ ಮಾತನಾಡಿ, ಆರೇಕುರಹಟ್ಟಿ ಗ್ರಾಮದಲ್ಲಿ ಶುದ್ಧೀಕರಣ ಘಟಕಗಳು ಕೆಟ್ಟು ನಿಂತಿದ್ದರಿಂದ ಕೆರೆಯಿಂದ ನೇರವಾಗಿ ನೀರು ಪೂರೈಕೆಯಾಗುತ್ತಿದೆ. ಕೆರೆಯಿಂದ ಶುದ್ಧೀಕರಿಸಿದ ನೀರು ಪೂರೈಕೆಯಾಗದ್ದರಿಂದ ಗ್ರಾಮಸ್ಥರು ವಾಂತಿ, ಭೇದಿ, ಹೊಟ್ಟೆನೋವು ಮೊದಲಾದ ಕಾಯಿಲೆಗಳಿಂದ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಕೆರೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಹಸಿರು ಆಪ್ ಮತ್ತು ಜಿಡ್ಡುಗಟ್ಟಿದ ಪಾಚಿಯಿಂದಾಗಿ ನೀರು ಸಂಪೂರ್ಣ ಹಸಿರು ವರ್ಣಕ್ಕೆ ತಿರುಗಿ ಕಲುಷಿತಗೊಂಡಿದೆ. ಈ ಸಮಸ್ಯೆ ಕಂಡು ಗ್ರಾಮಸ್ಥರು ಯಮನೂರ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಸ್ಪಂದನೆ ದೊರಕಿಲ್ಲ ಎಂದು ಆರೋಪಿಸಿದರು.

    ಕೆರೆ ನೀರು ಕಲುಷಿತಗೊಳ್ಳುವ ಬಗೆಗೆ ಎರಡು ವರ್ಷಗಳಿಂದ ಯಮನೂರ ಗ್ರಾ.ಪಂ.ಗೆ ಹಲವಾರು ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಹೀಗಾಗಿ ಒಂದು ವಾರ ಕಲುಷಿತ ನೀರು ಸೇವನೆಯಿಂದಾಗಿ ಗ್ರಾಮಸ್ಥರು ಅನಾರೋಗ್ಯ ಎದುರಿಸುವಂತಾಗಿದೆ. ಯಮನೂರ ಗ್ರಾಪಂ ಅಧಿಕಾರಿಗಳು ಎಚ್ಚೆತ್ತುಕೊಂಡು ಆರೇಕುರಹಟ್ಟಿ ಕೆರೆ ನೀರು ಪೂರೈಸುವ ಬದಲು ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ಶುದ್ಧೀಕರಿಸಿದ ನೀರು ಪೂರೈಸಬೇಕು ಎಂದು ಎಚ್ಚರಿಕೆ ನೀಡಿದರು.

    ನಿಂಗರಡ್ಡಿ ಕೋನರಡ್ಡಿ, ಮಲ್ಲಪ್ಪ ಹಾದಿಮನಿ, ವಿಠ್ಠಪ್ಪಗೌಡ ಪಾಟೀಲ, ಎಚ್.ವೈ. ರಂಗರಡ್ಡಿ, ಶ್ರೀನಿವಾಸ ರಂಗರಡ್ಡಿ, ಗೋಪಾಲ ಲಕ್ಕಣ್ಣವರ ಇತರರು ಇದ್ದರು.

    ಶೀಘ್ರ ಶುದ್ದೀಕರಣ ಘಟಕ ಪ್ರಾರಂಭ: ಸುಮಾರು ವರ್ಷಗಳ ಹಿಂದೆ ನೆದರ್​ಲ್ಯಾಂಡ್ ಸ್ಕೀಮ್ಲ್ಲಿ ಆರೇಕುರಹಟ್ಟಿ ಗ್ರಾಮದ ಕುಡಿಯುವ ನೀರಿನ ಕೆರೆಗೆ ಶುದ್ಧೀಕರಣ ಘಟಕ ಅಳವಡಿಸಲಾಗಿತ್ತು. ಆ ಘಟಕ ವಿಶೇಷ ಅನುದಾನವಿಲ್ಲದೇ ಸ್ಥಗಿತಗೊಂಡಿತ್ತು. ಇದರಿಂದ ಗ್ರಾಮಸ್ಥರಿಗೆ ಅನನುಕೂಲವಾಗಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ತಾ.ಪಂ. ಇಒ ಪವಿತ್ರಾ ಪಾಟೀಲ ಅವರೊಂದಿಗೆ ಸಭೆಯಲ್ಲಿ ರ್ಚಚಿಸಿದ್ದೇವೆ. ಗ್ರಾಮೀಣ ನೀರು ಸರಬರಾಜು ಇಂಜಿನಿಯರ್​ಗಳಿಂದ ರಾ ಮಟಿರಿಯಲ್ ತರಿಸಿಕೊಂಡು ಎರಡ್ಮೂರು ದಿನಗಳಲ್ಲಿ ಶುದ್ಧೀಕರಣ ಘಟಕ ಪ್ರಾರಂಭಿಸಿ ಶುದ್ಧ ನೀರು ಪೂರೈಸಲು ಮುಂದಾಗುತ್ತೇವೆ. ಅದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದು ಯಮನೂರ ಪಿಡಿಒ ವಿ.ಬಿ. ಗುಡದೂರಮಠ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts