More

    ಆಯುರ್ವೇದದಿಂದ ಆರೋಗ್ಯ – ಡಾ.ಗಿರಿಧರ ಕಜೆ

    ಬೆಳಗಾವಿ: ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ದೈಹಿಕ ಶಕ್ತಿ ಕುಸಿಯುತ್ತಿದೆ. ಆಯುರ್ವೇದ ಪದ್ಧತಿ ಅನುಸರಿಸದಿರುವುದು ದೈಹಿಕ ಶಕ್ತಿ ಕಡಿಮೆಯಾಗುವುದಕ್ಕೆ ಕಾರಣವಾಗಿದೆ ಎಂದು ಖ್ಯಾತ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಅಭಿಪ್ರಾಯಪಟ್ಟರು.

    ಕೆಎಲ್​ಇ ಸಂಸ್ಥೆಯ ಶಹಾಪುರದ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಭಾನುವಾರ ತಾವೇ ರಚಿಸಿದ ಆಯುರ್ವೇದ ಜ್ಞಾನಯಾನದ 7ನೇ ಕೃತಿಯಾದ “ಸಂಸ್ಕಾರ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಹಿಂದೆ ನಮ್ಮ ಪೂರ್ವಜರು 100 ಕೆಜಿ ಮೂಟೆಗಳನ್ನು ಹೊತ್ತು ಸಾಗುತ್ತಿದ್ದರು. ಈಗಿನ ಜನಾಂಗ 40 ಕೆಜಿ ಗಂಟುಗಳನ್ನು 2&3 ಜನ ಸೇರಿ ಹೊರುತ್ತಿದ್ದಾರೆ. ಹೀಗೆ ತಲೆಮಾರಿನಿಂದ ತಲೆಮಾರಿಗೆ ದೈಹಿಕ ಶಕ್ತಿ ಕುಸಿಯುತ್ತಿದೆ. ಈ ಹಿಂದೆ ನಮ್ಮ ಪೂರ್ವಜರು ಸೇವಿಸುತ್ತಿದ್ದ ಆಹಾರದಲ್ಲಿ ಆಯುರ್ವೇದ ಪದ್ಧತಿ ಅಡಕವಾಗಿತ್ತು. ಹೀಗಾಗಿ ಅವರು ಶಕ್ತಿಯುತವಾಗಿದ್ದರು ಎಂದರು.

    ಆಯುರ್ವೇದ ಜ್ಞಾನ ಇದ್ದವರು ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ಆಹಾರದ ಬಗ್ಗೆ ಆಯುರ್ವೇದದಲ್ಲಿ ಅದ್ಭುತ ವಿವರಣೆಗಳಿವೆ. ಎಲ್ಲ ಆಹಾರ ಪದಾರ್ಥಗಳ ಗುಣಲಕ್ಷಣಗಳು ಏನು? ಯಾವುದನ್ನು ಸ್ವೀಕರಿಸಬೇಕು? ಸ್ವೀಕರಿಸಬಾರದು? ಎಂಬುದನ್ನು ಆಯುರ್ವೇದ ತಿಳಿಸುತ್ತದೆ. ಈಗಿನ ಸಿಹಿ ತಿನಿಸುಗಳಿಗೆ ಪುರಾತನ ಕಾಲದ ಆಯುರ್ವೇದದಲ್ಲಿ ಹೆಸರಿಸಲಾಗಿತ್ತು. ಆಯುರ್ವೇದದ ತತ್ವ&ಸಿದ್ಧಾಂತಗಳು ಜಗತ್ತಿನ ತುಂಬ ತಲುಪಿದರೆ ವಿಶ್ವದ ಎಲ್ಲರೂ ಆರೋಗ್ಯವಂತರಾಗಿರುತ್ತಾರೆ. ಆಯುರ್ವೇದವನ್ನು ಚೆನ್ನಾಗಿ ಬಳಸಿದವರು ನೂರು ವರ್ಷ ಆರೋಗ್ಯವಂತರಾಗಿ ಬಾಳುತ್ತಾರೆ ಎಂದರು.

    ಪುಸ್ತಕ ಬಿಡುಗಡೆಗೊಳಿಸಿದ ಮಾಜಿ ಸಚಿವ ಎಸ್​. ಸುರೇಶಕುಮಾರ ಮಾತನಾಡಿ, ಡಾ. ಗಿರಿರಾಜ ಕಜೆ ಅವರಿಗೆ ಆಯುರ್ವೇದದ ಬಗ್ಗೆ ಅಪಾರ ನಂಬಿಕೆ ಇದೆ. ಬೆಂಗಳೂರಿನಲ್ಲಿ ಅವರ ಬಹಳಷ್ಟು ಕ್ಲಿನಿಕ್​ಗಳಿವೆ. ನಿತ್ಯ ನೂರಾರು ರೋಗಿಗಳನ್ನು ಆಪ್ತಸಮಾಲೋಚನೆ ಮಾಡಿ, ಉಪಚಾರ ಮಾಡುತ್ತಾರೆ. ಎಂಥದ್ದೇ ಕಾಯಿಲೆ ಇದ್ದರೂ ಅವರು ರೋಗಿಗಳಿಗೆ ಹೆದರಿಸುವುದಿಲ್ಲ. ಬದಲಾಗಿ ಧೈರ್ಯ ತುಂಬುತ್ತಾರೆ. ಆರೋಗ್ಯ ಸೇವೆ ನೀಡುವ ಜತೆ, ದಿನಪತ್ರಿಕೆಗಳಲ್ಲಿ ಆರೋಗ್ಯ ಸಂಬಂಧಿ ಅಂಕಣ ಬರೆಯುತ್ತಾರೆ. ಸಾರ್ವಜನಿಕ ಸಭೆ, ಸಮಾರಂಭಗಳಿಗೆ ತೆರಳಿ ಆಯುರ್ವೇದ ಅರಿವು ಮೂಡಿಸುತ್ತಿರುವ ಡಾ. ಕಜೆ ಅವರು ವೈದ್ಯರಿಗೆ ಆದರ್ಶವಾಗಿದ್ದಾರೆ ಎಂದರು.

    ಕೆಎಲ್​ಇ ಆಕಾಡೆಮಿ ಆಫ್​ ಹೈಯರ್​ ಎಜುಕೇಶನ್​ ಕುಲಸಚಿವ ಪ್ರೊ.ವಿ.ಎ. ಕೋಟಿವಾಲೆ ಮಾತನಾಡಿ, ಪುರಾತನ ಕಾಲದಿಂದ ಆಯುರ್ವೇದ ಇದೆ. ಆಯುರ್ವೇದಕ್ಕೆ ಉತ್ತಮ ಭವಿಷ್ಯವಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಡಾ.ಮಹೇಶ ಜೋಶಿ, ಸೆಲ್ಕೊ ಸೋಲಾರ ಲೈಟ್​ನ ಸಿಇಒ ಮೋಹನ ಭಾಸ್ಕರ ಹೆಗಡೆ, ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿದರು.

    ಕಾಲೇಜಿನ ಪ್ರಾಚಾರ್ಯ ಡಾ.ಸುಹಾಸ್​ ಶೆಟ್ಟಿ, ಎಸ್​ಬಿಜಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಅಡಿವೇಶ ಅರಕೇರಿ, ಡಾ.ರವಿ ಪಾಟೀಲ, ಆಯುರ್ವೇದಿಕ್​ ಮೆಡಿಕಲ್​ ಕಾಲೇಜಿನ ಪ್ರಾಚಾರ್ಯ ಡಾ. ಕಿರಣ ಖೋತ ಪಾಟೀಲ, ಬೆಳಗಾವಿ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts