More

    ಆಮ್ಲಜನಕ ಪೂರೈಕೆಗೆ ಮೊಬೈಲ್ ಬಸ್

    ಬೆಳಗಾವಿ: ಆಕ್ಸಿಜನ್ ಪೂರೈಸಲು ಮೊಬೈಲ್ ಬಸ್ ಸೇವೆ, ಬಿಮ್ಸ್‌ನಲ್ಲಿ ಆಕ್ಸಿಜನ್ ಕಾನ್ಸನ್‌ಟ್ರೇಟರ್ ವ್ಯವಸ್ಥೆಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಂಗಳವಾರ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಬೆಳಗಾವಿ ಸರ್ಕಾರಿ ಆಸ್ಪತ್ರೆಗಳು ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ಕೊರತೆ ನೀಗಿಸಲು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡಿದೆ ಎಂದರು. 5 ಆಕ್ಸಿಜನ್ ಸಿಲಿಂಡರ್ ಅಳವಡಿಸಿರುವ ಮೊಬೈಲ್ ಬಸ್, ಆಸ್ಪತ್ರೆ ಹಾಗೂ ಕರೊನಾ ಪೀಡಿತರಿರುವ ಪ್ರದೇಶಗಳಿಗೆ ಸಂಚರಿಸಲಿದೆ.

    ಹೋಂ ಐಸೋಲೇಷನ್‌ನಲ್ಲಿ ಇರುವವರಿಗೆ ಅನುಕೂಲವಾಗಲು ಹಿಂಡಾಲ್ಕೋ ನೀಡಿರುವ 25 ಕಾನ್ಸನ್‌ಟ್ರೇಟರ್‌ಗಳನ್ನು ಬಿಮ್ಸ್‌ನ ಕೊಠಡಿಯಲ್ಲಿ ಅಳವಡಿಸಲಾಗಿದ್ದು, ಇದನ್ನು ಇನ್ನಷ್ಟು ವಿಶಾಲವಾದ ಹಾಲ್‌ನಲ್ಲಿ ಇಡಲು ಕ್ರಮ ಕೈಗೊಳ್ಳಲಾಗುವುದು. ಐಎಂಎ ಇದರ ಉಸ್ತುವಾರಿ ವಹಿಸಿದೆ ಎಂದರು. ಜಿಪಂ ಸಿಇಒ ಎಚ್.ವಿ. ದರ್ಶನ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ವಿ. ಮುನ್ಯಾಳ, ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ, ಸಾರಿಗೆ ಸಂಸ್ಥೆ ಡಿಸಿ ಮಹಾದೇವ ಮುಂಜಿ, ಡ್ರಗ್ ಕಂಟ್ರೋಲರ್ ರಘುರಾಮ, ಬಿಮ್ಸ್ ಆಡಳಿತಾಧಿಕಾರಿ ಅಫ್ರೀನ್ ಬಳ್ಳಾರಿ, ಐಎಂಎ ಸದಸ್ಯರು ಇದ್ದರು.

    ಸೋಂಕಿತರಿಗೆ ಸೇವೆ ನೀಡಲು 700 ಬೆಡ್: ನಗರ ಹಾಗೂ ಜಿಲ್ಲೆಯ ವಿವಿಧೆಡೆಯೂ ಆಕ್ಸಿಜನ್ ಸೇವೆ ಸಿಗಲು ವ್ಯವಸ್ಥೆ ಮಾಡಲಾಗುವುದು. ಪ್ರತಿ ಮತ ಕ್ಷೇತ್ರಕ್ಕೂ 4ರಂತೆ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿಗೆ 72 ಆಕ್ಸಿಜನ್ ಸಿಲಿಂಡರ್ ನೀಡಲು ಕ್ರಮ ವಹಿಸಲಾಗಿದೆ. ಬಿಮ್ಸ್‌ನಲ್ಲಿ 400 ಆಕ್ಸಿಜನ್ ಬೆಡ್ ಇವೆ. ಉಳಿದ 300 ಬೆಡ್‌ಗಳು ಸಾಮಾನ್ಯವಾಗಿದ್ದು, ಅಗತ್ಯವಿದ್ದವರಿಗೆ ಆಕ್ಸಿಜನ್ ವ್ಯವಸ್ಥೆಯಾಗಲಿದೆ ಎಂದು ಡಿಸಿ ತಿಳಿಸಿದರು.

    ವಸತಿ ನಿಲಯಗಳಲ್ಲಿ ಕೋವಿಡ್ ಕೇರ್ ಸೆಂಟರ್: ಗ್ರಾಪಂ ಮಟ್ಟದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗುತ್ತಿದ್ದು, ಅದಕ್ಕಾಗಿ ಸಮೀಪದ ವಸತಿ ನಿಲಯಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಹೋಂ ಐಸೋಲೇಷನ್‌ನಲ್ಲಿ ಇರಬೇಕಾದವರೂ ಹೊರಗೆ ತಿರುಗಾಡುತ್ತಿದ್ದಾರೆ. ಪಾಸಿಟಿವ್ ಬಂದವರು ಕಡ್ಡಾಯವಾಗಿ ಕೋವಿಡ್ ಕೇರ್‌ನಲ್ಲಿ ದಾಖಲಾಗಬೇಕು. ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಳಿಗೂ ಆಕ್ಸಿಜನ್ ಪೂರೈಸಲು ಐಎಂಎ ಸಿದ್ಧವಾಗಿದೆ. ಖಾಸಗಿಯವರಿಗೆ 50 ಆಕ್ಸಿಜನ್ ಸಿಲಿಂಡರ್ ನೀಡಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts