More

    ಆಧುನಿಕ ಶಿಕ್ಷಣ ನೀತಿಗೆ ಒಗ್ಗಿಕೊಳ್ಳಲು ಸಿದ್ಧರಾಗಿ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ

    ಸಾಗರ: ಬದಲಾದ ಶೈಕ್ಷಣಿಕ ವ್ಯವಸ್ಥೆ ಏಕರೂಪದ ಶಿಕ್ಷಣ ನೀತಿ ಜಾರಿಗೆ ತರುವಲ್ಲಿ ಮುನ್ನಡೆಯುತ್ತಿದೆ. ಹೊಸ ಶಿಕ್ಷಣ ನೀತಿಗೆ ಒಗ್ಗಿಕೊಳ್ಳಲು ಎಲ್ಲರೂ ಸಿದ್ಧರಾಗಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ಸೇವಾ ಸಾಗರ ಟ್ರಸ್ಟ್ ವರದಹಳ್ಳಿ ರಸ್ತೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ವಂತಿಕೆಯಿಂದ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
    ಯಾವ ವಯಸ್ಸಿನವರಿಗೆ, ಯಾವ ರೀತಿಯ ಶಿಕ್ಷಣ ನೀಡಿ ಅವರನ್ನು ಸದೃಢಗೊಳಿಸಬೇಕು ಎಂಬುದನ್ನು ಹೊಸ ಶಿಕ್ಷಣ ನೀತಿ ಒಳಗೊಂಡಿದೆ. ದೇಶವನ್ನು ಸದೃಢಗೊಳಿಸಬೇಕಾದರೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಧುನಿಕತೆಗೆ ತಕ್ಕಂತೆ ಸಜ್ಜಗೊಳಿಸಬೇಕು. ಈ ದಿಸೆಯಲ್ಲಿ ಸೇವಾಸಾಗರ ಟ್ರಸ್ಟ್ ಸಮಾಜಮುಖಿ ಕೆಲಸಗಳ ಜತೆಗೆ ಗುಣಮಟ್ಟದ ಶಿಕ್ಷಣ ನೀಡುತ್ತ ಬರುತ್ತಿದೆ. ಪರಿವಾರ, ಸಮಾಜ, ಸಂಘಟನೆ ಎಲ್ಲವೂ ನನಗೆ ಸಂಸದನಾಗಿ ಕೆಲಸ ಮಾಡುವ ಅವಕಾಶ ನೀಡಿದೆ ಎಂದರು.
    ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಪರಿವಾರದ ಹಿರಿಯರು ಈ ಭಾಗದಲ್ಲಿ ರಾಷ್ಟ್ರೀಯತೆ ಒಳಗೊಂಡ ಶಿಕ್ಷಣ ನೀಡಬೇಕು ಎಂದು 80ರ ದಶಕದಲ್ಲಿ ಸೇವಾಸಾಗರ ವಿದ್ಯಾಸಂಸ್ಥೆ ಆರಂಭಿಸಿದ್ದಾರೆ. ಸಂಸ್ಕೃತಿ, ಸಂಸ್ಕಾರದ ಮಹತ್ವ ಪರಿಚಯಿಸುವಲ್ಲಿ ಸೇವಾಸಾಗರ ಸಂಸ್ಥೆ ವ್ಯವಸ್ಥಿತವಾಗಿ ತೊಡಗಿಕೊಂಡಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಂಸ್ಥೆಯ ಪಾತ್ರ ದೊಡ್ಡದು. ಕ್ಷೇತ್ರದ ಶಾಸಕನಾಗಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
    ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಸಾಗರದಲ್ಲಿ ಸೇವಾಸಾಗರ ಸಂಸ್ಥೆ ಕಟ್ಟುವಾಗ ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡುವಾಗ ಭಾವುಕರಾದರು. ಅಂದು ಯು.ಎಚ್.ರಾಮಪ್ಪ ನಾನು ಮತ್ತು ಪರಿವಾರದ ಅನೇಕ ಹಿರಿಯರು ಮಾಡಿದ ಸಂಕಲ್ಪ ಇಂದು ಫಲವನ್ನು ಕಂಡಿದೆ. ಸೇವೆಗೆ ಇಂತಹ ಒಂದು ಉತ್ತಮ ಅವಕಾಶ ನಮಗೆ ದೊರೆತಿದೆ. ಕಟ್ಟಡ ನಿರ್ಮಾಣಕ್ಕೆ ಎರಡು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts