More

    ಆಧಾರ ಕಾರ್ಡ್ ತಿದ್ದುಪಡಿಗೆ ಹರಸಾಹಸ

    ರಮೇಶ ಹಾರ್ಸಿಮನೆ ಸಿದ್ದಾಪುರ

    ತಾಲೂಕಿನಲ್ಲಿ ಆಧಾರ ಕಾರ್ಡ್ ತಿದ್ದುಪಡಿ ಕಾರ್ಯ ಸ್ಥಗಿತಗೊಂಡಿದೆ. ಇದರಿಂದ ಜನರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ.ಪಟ್ಟಣದ ತಹಸೀಲ್ದಾರ್, ನಾಡಕಚೇರಿ ಹಾಗೂ ಎಲ್ಲ ಗ್ರಾಪಂಗಳಲ್ಲಿ ಈ ಮೊದಲು ಆಧಾರ ಕಾರ್ಡ್ ತಿದ್ದುಪಡಿ ಮಾಡುತ್ತಿದ್ದರು. ಇದರಿಂದ ಸಾರ್ವಜನಿಕರು ಒಂದೆರಡು ಬಾರಿ ಓಡಾಡಿ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಆಧಾರ ತಿದ್ದುಪಡಿ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಇರುವುದರಿಂದ ತಾಲೂಕಿನ ಜನತೆ ಇದಕ್ಕಾಗಿ ಕಾರವಾರಕ್ಕೆ ಹೋಗಬೇಕಾಗಿದೆ.

    ಸದ್ಯ ಕರೊನಾ ಭೀತಿಯ ಹಿನ್ನೆಲೆಯಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಜನತೆ ಖಾಸಗಿ ವಾಹನ ಮಾಡಿಕೊಂಡು ಜಿಲ್ಲಾ ಕೇಂದ್ರಕ್ಕೆ ತೆರಳಬೇಕಾಗಿದೆ. ಅಲ್ಲಿಗೆ ಹೋಗುವುದರೊಳಗೆ ನೂರಾರು ಜನರು ಸರದಿಯಲ್ಲಿ ನಿಂತಿರುತ್ತಾರೆ. ಅವರ ಪಾಳಿ ಮುಗಿಯುವುದರೊಳಗೆ ಸಂಜೆ ಆಗುತ್ತದೆ. ಹೀಗಾಗಿ, ಹೋದ ದಾರಿಗೆ ಸುಂಕ ಇಲ್ಲವೆಂಬಂತೆ ಪುನಃ ಊರಿಗೆ ಮರಳುವ ಸ್ಥಿತಿ ಉಂಟಾಗಿದೆ.

    ಕರೊನಾ ಲಾಕ್​ಡೌನ್ ಆದಾಗಿನಿಂದ ತಾಲೂಕಿನಲ್ಲಿ ಆಧಾರ ಕಾರ್ಡ್ ತಿದ್ದುಪಡಿ ಸ್ಥಗಿತಗೊಂಡಿದೆ. ಸರ್ಕಾರದ ಯೋಜನೆ ಗಳನ್ನು ಪಡೆಯಲು ಆಧಾರ ಕಾರ್ಡ್ ಮುಖ್ಯವಾಗಿದೆ. ಏನಾದರೂ ತಿದ್ದುಪಡಿ ಇದ್ದರೆ ಸರಿಪಡಿಸಲು ಜನತೆ ಪರದಾಡುವಂತಾಗಿದೆ. ಸರ್ಕಾರದ ಯೋಜನೆಗಳನ್ನು ಪಡೆಯಲು ಅರ್ಹರಾಗಿದ್ದರೂ ಆಧಾರ ಕಾರ್ಡ್ ಇಲ್ಲದ್ದರಿಂದ ಯೋಜನೆಯ ಲಾಭ ಪಡೆದುಕೊಳ್ಳದಂತಾಗಿದೆ.

    ಆಧಾರ ಕಾರ್ಡ್​ನಲ್ಲಿನ ಸಣ್ಣಪುಟ್ಟ ದೋಷ ಸರಿಪಡಿಸುವುದಕ್ಕೆ ಸಾವಿರಾರು ರೂ. ಖರ್ಚು ಮಾಡಿ ಜಿಲ್ಲಾ ಕೇಂದ್ರಕ್ಕೆ ತೆರಳುವುದಕ್ಕಿಂತ ಪ್ರತಿ ತಾಲೂಕಿನಲ್ಲಿ ಈ ಮೊದಲು ಇದ್ದಂತೆ ತಹಸೀಲ್ದಾರ್, ನಾಡಕಚೇರಿ ಹಾಗೂ ಎಲ್ಲ ಗ್ರಾಪಂಗಳಲ್ಲಿ ವ್ಯವಸ್ಥೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ಆಧಾರ ಕಾರ್ಡ್​ನಲ್ಲಿನ ತಿದ್ದುಪಡಿಗಾಗಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವುದು ಕಷ್ಟ. ಒಮ್ಮೆ ಹೋದರೆ ಕೆಲಸ ಆಗುತ್ತಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಖಾಸಗಿ ವಾಹನ ಮಾಡಿಕೊಂಡು ಹೋಗಬೇಕು. ಜನರ ಹಿತದೃಷ್ಟಿಯಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕುರಿತು ಗಮನ ನೀಡಿ, ಈ ಮೊದಲಿನಂತೆ ಇರುವ ವ್ಯವಸ್ಥೆ ಮುಂದುವರಿಸಬೇಕು.
    | ಕೃಷ್ಣಮೂರ್ತಿ ನಾಯ್ಕ ವಂದಾನೆ

    ಕರೊನಾ ಲಾಕ್​ಡೌನ್​ನಿಂದ ಆಧಾರ ತಿದ್ದುಪಡಿ ಸ್ಥಗಿತಗೊಂಡಿದ್ದು, ಅದನ್ನು ಸೆ. 14ರಿಂದ ಪುನರಾರಂಭಿಸಲಾಗುತ್ತಿದೆ. ಇದಕ್ಕೆ ಕೆಲವು ತಾಂತ್ರಿಕ ತೊಂದರೆಗಳಿವೆ. ತಹಸೀಲ್ದಾರ್ ಹಾಗೂ ತಾಲೂಕಿನ ಎಲ್ಲ ನಾಡಕಚೇರಿಗಳಲ್ಲಿಯೂ ತಿದ್ದುಪಡಿ ಮಾಡಲಾಗುವುದು.
    | ಮಂಜುಳಾ ಎಸ್. ಭಜಂತ್ರಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts