More

    ಆಧಾರ್ ನೋಂದಣಿ, ತಿದ್ದುಪಡಿಗೆ ಮುಗಿಬಿದ್ದ ಜನತೆ

    ಬೇಲೂರು: ಭಾರತೀಯ ಅಂಚೆ ಇಲಾಖೆ ಹಾಗೂ ರೋಟರಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಶ್ರೀಶಿವಕುಮಾರಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಆಧಾರ್ ನೋಂದಣಿ/ತಿದ್ದುಪಡಿ ಹಾಗೂ ಐಪಿಪಿಬಿ ಮತ್ತು ಅಂಚೆ ಜೀವವಿಮೆ ಮೇಳದಲ್ಲಿ ಸೋಮವಾರ ತಾಲೂಕಿನ ನೂರಾರು ಜನರು ಪಾಲ್ಗೊಂಡು ಪ್ರಯೋಜನ ಪಡೆದರು.

    ಬೆಳಗ್ಗೆಯಿಂದಲೇ ಶ್ರೀಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ ತಾಲೂಕಿನ ನಾಗರಿಕರು, ವಿದ್ಯಾರ್ಥಿಗಳು, ವೃದ್ಧರು ಆಧಾರ್ ತಿದ್ದುಪಡಿ ಹಾಗೂ ನೋಂದಣಿಗಾಗಿ ಸರತಿ ಸಾಲಿನಲ್ಲಿ ತಮ್ಮ ಸರದಿಗಾಗಿ ಕಾಯುತ್ತಾ ನಿಂತಿದ್ದರು. ಸಭಾಂಗಣದಲ್ಲಿ 8ಕ್ಕೂ ಹೆಚ್ಚು ಕಂಪ್ಯೂಟರ್ ಸಿಸ್ಟಮ್‌ಗಳನ್ನು ಅಳವಡಿಸಿಕೊಂಡು, ತಿದ್ದುಪಡಿ ಹಾಗೂ ನೊಂದಣಿಗೆ ಆಗಮಿಸಿದ ಫಲಾನುಭವಿಗಳಿಗೆ ರೋಟರಿ ಹಾಗೂ ಅಂಚೆ ಕಚೇರಿ ಸಿಬ್ಬಂದಿ ನೋಂದಣಿಗೆ ಸಹಕರಿಸಿದರು.

    ಎರಡು ದಿನಗಳ ಆಧಾರ್ ನೋಂದಣಿ/ತಿದ್ದುಪಡಿ ಹಾಗೂ ಐಪಿಪಿಬಿ ಮತ್ತು ಅಂಚೆ ಜೀವವಿಮೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಹಾಸನ ಅಂಚೆ ಅಧೀಕ್ಷಕ ವಿ.ವಿ.ಭದ್ರಿನಾಥ್, ಅಂಚೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು ಸಾರ್ವಜನಿಕರಿಗೆ ಸಿಗಬೇಕೆಂಬ ಉದ್ದೇಶದಿಂದ ಜಿಲ್ಲೆಯಾದ್ಯಂತ ವಿವಿಧ ಸಂಘ ಸಂಸ್ಥೆ ಸಹಯೋಗದೊಂದಿಗೆ ಒಂದು ಅಥವಾ ಎರಡು ದಿನದಂತೆ ನಿಗದಿ ಪಡಿಸಿಕೊಂಡು ಆಧಾರ್ ನೊಂದಣಿ/ತಿದ್ದುಪಡಿ ಹಾಗೂ ಐಪಿಪಿಬಿ ಮತ್ತು ಅಂಚೆ ಜೀವವಿಮೆ ಮೇಳವನ್ನು ಆಯೋಜಿಸುತ್ತಿದ್ದೇವೆ.

    ಈ ಮೇಳದಲ್ಲಿ ದಿನಕ್ಕೆ 300 ರಿಂದ 400 ಜನರಿಗೆ ನೋಂದಣಿ ಮತ್ತು ತಿದ್ದುಪಡಿ ಮಾಡಿಕೊಡಲಾಗುತ್ತಿದೆ. ಇಲ್ಲಿ ಸರ್ಕಾರದ ಫೀ ಯನ್ನು ಮಾತ್ರ ಪಡೆಯಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ಈ ಕಾರ್ಯಕ್ರಮವನ್ನು ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಆಯೋಜಿಸುತ್ತಿದ್ದೇವೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. ಜಿಲ್ಲೆಯಲ್ಲಿ ನಾಲ್ಕರಿಂದ ಐದು ಸಾವಿರ ಜನರು ಸದುಪಯೋಗ ಪಡಿಸಿಕೊಂಡಿದ್ದಾರೆ. ಈಗಾಗಲೇ ಜಿಲ್ಲೆಯ ಚನ್ನರಾಯಪಟ್ಟಣ, ಅರಸೀಕೆರೆ, ಅರಕಲಗೂಡು, ಹೊಳೆನರಸೀಪುರ, ದೊಡ್ಡಮೇಟಿಕುರ್ಕೆ, ಹಾಸನಗಳಲ್ಲಿ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನುಳಿದ ಎಲ್ಲ ತಾಲೂಕು, ಹೋಬಳಿ ಕೇಂದ್ರಗಳಲ್ಲೂ ಮೇಳವನ್ನು ಆಯೋಜಿಸಲಾಗುವುದು. ಇದರ ಪ್ರಯೋಜನವನ್ನು ಜಿಲ್ಲೆಯ ಜನತೆ ಪಡೆಯಬೇಕು ಎಂದರು.

    ರೋಟರಿ ಸಂಸ್ಥೆ ಅಧ್ಯಕ್ಷ ಚೇತನ್‌ಕುಮಾರ್ ಮಾತನಾಡಿ, ಈಗಾಗಲೇ ಜನರು ಆಧಾರ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಅಲೆಯುವುದನ್ನು ದಿನನಿತ್ಯ ನೋಡುತ್ತಿದ್ದೇವೆ. ಆದರೆ ಇಂದು ಬೇಲೂರಿನಲ್ಲಿಯೇ ಆಧಾರ್ ನೋಂದಣಿ/ತಿದ್ದುಪಡಿ ಮೇಳ ಆಯೋಜಿಸಿರುವುದರಿಂದ ಸಾಕಷ್ಟು ಜನರು ಮೇಳಕ್ಕೆ ಬಂದು ಇದರ ಸದೂಪಯೋಗ ಪಡೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

    ಹಾಸನ ಅಂಚೆ ನಿರೀಕ್ಷಕ ಮೆರವಿನ್ ಲೋಬೋ, ವ್ಯವಸ್ಥಾಪಕ ಕಾಂತರಾಜು, ಬೇಲೂರು ಶಾಖೆಯ ದಾಕ್ಷಾಯಿಣಿ, ಸಿಬ್ಬಂದಿ ಜಯರಾಮ್, ರೋಟರಿ ಸಂಸ್ಥೆ ಕಾರ್ಯದರ್ಶಿ ಮುರಳಿ, ರಾಜೇಗೌಡ, ಯೋಗೀಶ್, ಚಂದ್ರಶೇಖರ್, ರಂಗನಾಥ್, ಅರ್ಚಕ ಉಮೇಶ್ ಸೇರಿದಂತೆ ಅಂಚೆ ಕಚೇರಿ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts