More

    ಆದರ್ಶ ಅಳವಡಿಕೆಯೇ ನಿಜವಾದ ನಮನ

    ಧಾರವಾಡ: ಸಮಾಜ ಸದಾ ನೆಮ್ಮದಿ, ಶಾಂತಿಯಿಂದ ಇರಬೇಕು ಎಂದು ತಮ್ಮ ಇಡೀ ಜೀವನ ಸವೆಸಿದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಆದರ್ಶವನ್ನು ಅಳವಡಿಕೊಂಡು ಅದರಂತೆ ನಡೆಯಬೇಕು. ಅಂದಾಗ ಮಾತ್ರ ನಾವು ಶ್ರೀಗಳಿಗೆ ನಿಜವಾದ ಅರ್ಥದಲ್ಲಿ ನಮನ ಸಲ್ಲಿಸಿದಂತಾಗುತ್ತದೆ ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಹೇಳಿದರು.

    ನಗರದ ಪ್ರಹ್ಲಾದ ವಿದ್ಯಾರ್ಥಿ ನಿಲಯ ಪ್ರತಿಷ್ಠಾನ, ವನವಾಸಿ ಶ್ರೀರಾಮ ಮಂದಿರ ಟ್ರಸ್ಟ್, ನಿಲಯ ಪ್ರತಿಷ್ಠಾನ ಹಾಗೂ ಧಾರವಾಡ ನಾಗರಿಕರ ಸಹಯೋಗದಲ್ಲಿ ಇಲ್ಲಿನ ಮಾಳಮಡ್ಡಿ ವನವಾಸಿ ಶ್ರೀರಾಮ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗುರು ವಂದನ, ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

    ಶ್ರೀಗಳು ಹಾಸ್ಯ, ಸಣ್ಣ ಕತೆಗಳ ಮೂಲಕವೇ ಸಮಾಜ ಸುಧಾರಣೆ ಕುರಿತು ಸಂದೇಶ ನೀಡುತ್ತಿದ್ದರು. ಅವರ ಪ್ರತಿ ಮಾತಿನಲ್ಲೂ ನಾವು ಕಲಿಯಬೇಕಿದ್ದ ಜೀವನದ ಪಾಠ ಇರುತ್ತಿತ್ತು. ಅವರನ್ನು ಹೊಗಳಿದವರಷ್ಟೇ ತೆಗಳುವವರೂ ಇದ್ದರು. ಆದರೆ ಟೀಕಿಸುವವರ ಬಗ್ಗೆ ಒಂದು ದಿನವೂ ಅವರು ಮಾತನಾಡಲಿಲ್ಲ. ಶ್ರೀಗಳು ನುಡಿದಂತೆ ನಡೆಯುವ ಮೂಲಕ ಆದರ್ಶರಾಗಿದ್ದರು ಎಂದರು.

    ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ದಲಿತ ಕೇರಿಯಲ್ಲಿ ಪಾದಪೂಜೆ, ಶ್ರೀಮಠದಲ್ಲಿ ಇಫ್ತಿಯಾರ್ ಕೂಟ ಏರ್ಪಡಿಸುವ ಮೂಲಕ ಕ್ರಾಂತಿ ಮಾಡಿದ ಶ್ರೀಗಳ ಕಾರ್ಯ ಸದಾ ಸ್ಮರಣೀಯ ಎಂದರು.

    ನಿವೃತ್ತ ಸಂಸ್ಕೃತ ಅಧ್ಯಾಪಕ ಡಾ. ಮಹೇಶ ಹಂಪಿಹೊಳಿ ಮಾತನಾಡಿ, ಸಹಸ್ರಚಂದ್ರ ದರ್ಶನ ಆಚರಿಸಿಕೊಳ್ಳುವುದು ಸಾಮಾನ್ಯ. ಸನ್ಯಾಸತ್ವದ ಸಹಸ್ರಚಂದ್ರ ದರ್ಶನ ಆಚರಿಸಿಕೊಳ್ಳುವುದು ವಿರಳ. ಆದರೆ ಶ್ರೀಗಳಿಗೆ ಆ ಭಾಗ್ಯ ಲಭಿಸಿದೆ. ಇಡೀ ವಿಶ್ವವೇ ಒಂದು ಎಂಬ ಸಂದೇಶ ಸಾರಿದ ಅವರು, ಸಮಾಜದಲ್ಲಿ ಸಾಮರಸ್ಯ ತರುವ ಪ್ರಯತ್ನ ಮಾಡಿದ್ದಾರೆ ಎಂದರು.

    ಶಾಸಕ ಅರವಿಂದ ಬೆಲ್ಲದ ಮಾತನಾಡಿ, ವಿಶ್ವೇಶತೀರ್ಥ ಸ್ವಾಮೀಜಿ ಎಲ್ಲರಿಗಿಂತ ಭಿನ್ನರಾಗಿದ್ದರು. ಧರ್ಮ ಗುರುಗಳು ಸಮಾಜಕ್ಕೆ ಯಾವ ರೀತಿ ಮಾರ್ಗದರ್ಶನ ನೀಡಬೇಕು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಶ್ರೀಗಳ ಹೆಸರಿನಲ್ಲಿ ದೇವಸ್ಥಾನ ಅಥವಾ ಭವನ ನಿರ್ಮಾಣ ಮಾಡಲು ಯೋಚಿಸಿದರೆ, ಅದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

    ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಉಳವಿ ಬಸವೇಶ್ವರ ಫಂಡ್ ಧರ್ಮದರ್ಶಿ ಟಿ.ಎಲ್. ಪಾಟೀಲ, ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಎಸ್. ಆರ್. ಕೌಲಗುಡ್ಡ, ಪಾಂಡುರಂಗಾಚಾರ್ಯ ಪೂಜಾರ ಮಾತನಾಡಿದರು. ಸಾಹಿತಿ ಡಾ. ಹ.ವೆಂ. ಕಾಖಂಡಕಿ, ವನವಾಸಿ ಶ್ರೀರಾಮಮಂದಿರ ಟ್ರಸ್ಟ್ ಕಾರ್ಯದರ್ಶಿ ಕೆ.ಆರ್. ದೇಶಪಾಂಡೆ, ಆರ್.ಎಂ. ಕುಲಕರ್ಣಿ, ವೆಂಕಟೇಶ ದೇಸಾಯಿ, ರಾಜು ಪಾಟೀಲ ಕುಲಕರ್ಣಿ, ಎನ್.ಆರ್. ಕುಲಕರ್ಣಿ, ಭಕ್ತರು, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts