More

    ಆತಂಕ ಸೃಷ್ಟಿಸಿದ ಬೆಣ್ಣೆ ನಗರಿ ಜನರ ಆಗಮನ

    ರಾಣೆಬೆನ್ನೂರ: ಪಕ್ಕದ ಬೆಣ್ಣೆ ನಗರಿ ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಬೆಣ್ಣೆ ನಗರಿ ದಾವಣಗೆರೆ ಜನರು ವಾಣಿಜ್ಯ ನಗರಿ ರಾಣೆಬೆನ್ನೂರಿನತ್ತ ಮುಖ ಮಾಡುತ್ತಿದ್ದಾರೆ. ಆದರೆ, ಇದರಿಂದ ಸ್ಥಳೀಯರಲ್ಲಿ ಢವ ಢವ ಶುರುವಾಗಿದೆ.

    ದಾವಣಗೆರೆಯಿಂದ ಯಾರೇ ಬಂದರೂ ಅವರನ್ನು ಹಾಸ್ಟೆಲ್ ಕ್ವಾರಂಟೈನ್​ನಲ್ಲಿಡಬೇಕೇ ಹೊರತು ಬಡಾವಣೆ, ಗ್ರಾಮಗಳಲ್ಲಿ ಹೋಮ್ ಕ್ವಾರಂಟೈನ್ ಮಾಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ದಾವಣಗೆರೆಯಲ್ಲಿ ಮೇ 10ರವರೆಗೆ ಒಟ್ಟು 68 ಕರೊನಾ ಸೋಂಕು ಪ್ರಕರಣ ದೃಢಪಟ್ಟಿದ್ದು, 4 ಜನರು ಮೃತಪಟ್ಟಿದ್ದಾರೆ. ಇದರಿಂದಾಗಿ ಅಲ್ಲಿಯ ಜನತೆ ಭಯಭೀತರಾಗಿದ್ದು, ಸೇಫ್ ಇರುವ ಬೇರೆ ಬೇರೆ ನಗರ, ಪಟ್ಟಣಗಳತ್ತ ಮುಖ ಮಾಡುತ್ತಿದ್ದಾರೆ. ದಾವಣಗೆರೆಯಿಂದ ರಾಣೆಬೆನ್ನೂರು ಕೇವಲ 45 ಕಿ.ಮೀ. ಅಂತರದಲ್ಲಿರುವ ಕಾರಣ ಎರಡು ನಗರಗಳ ನಡುವೆ ಸಂಬಂಧಿಕರು ಹೆಚ್ಚು. ಹೀಗಾಗಿ, ದಾವಣಗೆರೆ ಮೂಲ ವಾಸಿಗಳು ಹಾಗೂ ರಾಣೆಬೆನ್ನೂರಿನಿಂದ ದಾವಣಗೆರೆಗೆ ದುಡಿಮೆಗಾಗಿ ತೆರಳಿದ್ದ ಜನತೆ ಇದೀಗ ವಾಪಸ್ ಆಗುತ್ತಿದ್ದಾರೆ. ಕೆಲವರು ಅಲ್ಲಿಯ ಜಿಲ್ಲಾಡಳಿತದಿಂದ ಪಾಸ್ ತೆಗೆದುಕೊಂಡು ಬಂದರೆ, ಇನ್ನೂ ಕೆಲವರು ತುಂಗಭದ್ರಾ ನದಿಯಲ್ಲಿ ದೋಣಿ ಮೂಲಕ ರಾತ್ರೋರಾತ್ರಿ ರಾಣೆಬೆನ್ನೂರ ಸೇರಿಕೊಳ್ಳುತ್ತಿದ್ದಾರೆ.

    ಅಲ್ಲದೆ, ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹರವಿ ಗ್ರಾಮದಿಂದ ತಾಲೂಕಿನ ಹರನಗಿರಿ ಮೂಲಕ ರಾಣೆಬೆನ್ನೂರಿಗೆ ಬರಲು ತುಂಗಭದ್ರಾ ನದಿಗೆ ಸೇತುವೆ ನಿರ್ವಿುಸಲಾಗಿದೆ. ಇದು ದಾವಣಗೆರೆಗೆ ಹತ್ತಿರದ ಮಾರ್ಗವಾಗಿರುವುದರಿಂದ ಈ ಮೂಲಕ ಜನರು ರಾಣೆಬೆನ್ನೂರಿಗೆ ಬರುತ್ತಿದ್ದಾರೆ.

    ಮಾರ್ಗಮಧ್ಯೆ ಟ್ರಂಚ್ ಹೊಡೆಸಿದ ಗ್ರಾಮಸ್ಥರು:

    ಈ ಗ್ರಾಮದ ಬಳಿ ತಾಲೂಕು ಆಡಳಿತ ಚೆಕ್ ಪೋಸ್ಟ್ ನಿರ್ವಿುಸಿ, ಕಾವಲಿಗಾಗಿ ಪೊಲೀಸರನ್ನು ನೇಮಿಸಿದೆ. ಆದರೆ, ಸೇತುವೆಗೂ ಚೆಕ್ ಪೋಸ್ಟ್​ಗೂ 1 ಕಿ.ಮೀ. ದೂರವಿರುವ ಕಾರಣ ಅದು ಉಪಯೋಗಕ್ಕೆ ಬಾರದಂತಾಗಿದೆ. ಆದ್ದರಿಂದ ಹರನಗಿರಿ ಗ್ರಾಮಸ್ಥರು ಭಾನುವಾರ ಸೇತುವೆ ಬಳಿ ಜೆಸಿಬಿಯಿಂದ ಟ್ರಂಚ್ ಹೊಡೆಸಿದ್ದು, ಜನರ ಓಡಾಟವನ್ನೇ ಸಂಪೂರ್ಣ ಬಂದ್ ಮಾಡಿದ್ದಾರೆ.

    ಹಾಸ್ಟೆಲ್ ಕ್ವಾರಂಟೈನ್​ಗೆ ಆಗ್ರಹ:

    ಭಾನುವಾರ ತಾಲೂಕಿನ ಹುಲ್ಲತ್ತಿ ಗ್ರಾಮಕ್ಕೆ ಮೂಲತಃ ದಾವಣಗೆರೆ ಜಾಲಿನಗರದ 6 ಜನರು ಬಂದಿದ್ದಾರೆ. ಅವರ ಮನೆ ಪಕ್ಕದಲ್ಲಿಯೇ ಕರೊನಾ ಪಾಸಿಟಿವ್ ಪ್ರಕರಣ ಇದ್ದ ಕಾರಣ ಇಲ್ಲಿಗೆ ಬಂದಿದ್ದಾರೆ. ಅವರಿಗೆ ಕ್ವಾರಂಟೈನ್ ಸೀಲ್ ಕೂಡ ಹಾಕಲಾಗಿದೆ. ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ 6 ಜನರಿಗೆ ಹೋಮ್ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಿದ್ದಾರೆ. ಆದರೆ, ಈ ಮನೆಯ ವೃದ್ಧರು ಬಹಿರ್ದೆಸೆಗೆ ನಿತ್ಯವೂ ಬಯಲು ಪ್ರದೇಶಕ್ಕೆ ಹೋಗುತ್ತಾರೆ. 6 ಜನ ಬಂದ ಬಳಿಕವೂ ಗ್ರಾಮದ ಬೀದಿಗಳಲ್ಲಿ ಸಂಚರಿಸುತ್ತಿದ್ದಾರೆ. ಸರ್ಕಾರ ಕೂಲಿ ಕಾರ್ವಿುಕರಿಗೆ, ತುರ್ತು ಪರಿಸ್ಥಿತಿಯಲ್ಲಿದ್ದವರಿಗೆ ಸ್ವಂತ ಊರಿಗೆ ತೆರಳುವ ಅವಕಾಶ ಕಲ್ಪಿಸಿದೆ. ಆದರೆ, ಈ 6 ಜನರು ಹುಲ್ಲತ್ತಿ ಗ್ರಾಮದವರೇ ಅಲ್ಲ. ಹೀಗಿದ್ದಾಗ ದಾವಣಗೆರೆಯಿಂದ ಪರವಾನಗಿ ತೆಗೆದುಕೊಂಡು ಹೇಗೆ ಬಂದರು ಎಂದು ಆತಂಕ ವ್ಯಕ್ತಪಡಿಸುತ್ತಿರುವ ಹುಲ್ಲತ್ತಿ ಗ್ರಾಮಸ್ಥರು, ‘6 ಜನರನ್ನು ಹೋಮ್ ಕ್ವಾರಂಟೈನ್ ಬದಲು ಹಾಸ್ಟೆಲ್ ಕ್ವಾರಂಟೈನ್ ಮಾಡಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

    ಹುಲ್ಲತ್ತಿ ಗ್ರಾಮದಲ್ಲಿ ಬಂದಿರುವ 6 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಬೇರೆ ಜಿಲ್ಲೆಯಿಂದ ಬಂದರೆ ಹೋಮ್ ಕ್ವಾರಂಟೈನ್ ಹಾಗೂ ಬೇರೆ ರಾಜ್ಯದಿಂದ ಬಂದರೆ ಹಾಸ್ಟೆಲ್ ಕ್ವಾರಂಟೈನ್ ಮಾಡಲು ಸರ್ಕಾರದ ಸೂಚನೆಯಿದೆ. ಅದರಂತೆ ಮಾಡಲಾಗಿದೆ. ಹರನಗಿರಿ-ಹರವಿ ಸೇತುವೆ ಸಂಪರ್ಕದ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು.

    | ಬಸನಗೌಡ ಕೋಟೂರು

    ತಹಸೀಲ್ದಾರ್, ರಾಣೆಬೆನ್ನೂರ

    ದಾವಣಗೆರೆಯ ಕಂಟೇನ್ಮೆಂಟ್ ಬಡಾವಣೆಯಿಂದ ಹುಲ್ಲತ್ತಿ ಗ್ರಾಮಕ್ಕೆ 6 ಜನರು ಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ತಾಲೂಕು ಆಡಳಿತ ಅವರನ್ನು ಕೂಡಲೆ ಹೋಮ್ ಕ್ವಾರಂಟೈನ್ ಬದಲು ಹಾಸ್ಟೆಲ್ ಕ್ವಾರಂಟೈನ್​ಗೆ ಒಳಪಡಿಸಬೇಕು. ಇಲ್ಲವಾದರೆ ಇಡೀ ಗ್ರಾಮವೇ ತಾಲೂಕು ಆಡಳಿತದ ಎದುರು ಧರಣಿ ಕುಳಿತುಕೊಳ್ಳಬೇಕಾಗುತ್ತದೆ.

    | ಹೊನ್ನಪ್ಪ

    ಹುಲ್ಲತ್ತಿ ಗ್ರಾಮಸ್ಥ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts