More

    ಆತಂಕ ತಂದ ಆಶಾಗಳ ಟ್ರಾವಲ್ ಹಿಸ್ಟರಿ

    ಹಾನಗಲ್ಲ: ಕರೊನಾ ಸೋಂಕು ತಾಲೂಕಿನಾದ್ಯಂತ ಹರಡುತ್ತಿದ್ದು, ಭಾನುವಾರ 3 ಪ್ರಕರಣ ಕಂಡುಬಂದಿರುವುದು ಜನರಲ್ಲಿ ಭಯ ಹುಟ್ಟು ಹಾಕಿದೆ.

    ಪಟ್ಟಣದ ಇಂದಿರಾನಗರ, ಕಮಾಟಗೇರಿ ಹಾಗೂ ಕಲ್ಲಹಕ್ಕಲ ಬಡಾವಣೆಗಳಲ್ಲಿ ವಾಸವಾಗಿರುವ ಮೂವರು ಆಶಾ ಕಾರ್ಯಕರ್ತೆಯರಿಗೆ ಕರೊನಾ ಕಂಡುಬಂದಿರುವುದರಿಂದ ಕೋವಿಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಆಶಾ ಕಾರ್ಯಕರ್ತೆಯರು ತಮ್ಮ ಬಡಾವಣೆಗಳಲ್ಲಿನ ಮನೆ-ಮನೆಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಆರೋಗ್ಯ ತಪಾಸಣೆ ಕೈಗೊಂಡಿರುವುದರಿಂದ ನೂರಾರು ಜನರಿಗೆ ಸೋಂಕು ತಗುಲುವ ಭೀತಿ ಹರಡಿದೆ.

    ಇವರಿಗೆ ಸೋಂಕು ಹೇಗೆ ತಗುಲಿತು ಎಂಬ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಪ್ರತಿದಿನ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗರ್ಭಿಣಿಯರನ್ನು ಪರೀಕ್ಷಿಸಿದ್ದಾರೆ. ಅಲ್ಲದೆ, ಬಾಣಂತಿಯರ ಮನೆಗಳಿಗೆ ಭೇಟಿ ನೀಡಿದ್ದಾರೆ. ಇವರ ಟ್ರಾವಲ್ ಹಿಸ್ಟರಿ ಗಮನಿಸಿದರೆ, ಇಲ್ಲಿನ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿ ನೂರಾರು ಜನ ಕ್ವಾರಂಟೈನ್ ಆಗಬೇಕಾದ ಪರಿಸ್ಥಿತಿ ಎದುರಾಗಿದೆ.

    ಸುದ್ದಿ ಹರಡುತ್ತಿದ್ದಂತೆ ಈ ಬಡಾವಣೆಗಳ ಹಲವು ಕುಟುಂಬದವರು ಕ್ವಾರಂಟೈನ್ ಆಗುವ ಭಯದಿಂದಾಗಿ ತಮ್ಮ ಮನೆಗಳಿಗೆ ಬೀಗ ಜಡಿದು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪುರಸಭೆ ಸಿಬ್ಬಂದಿ ಸೀಲ್​ಡೌನ್ ಬಡಾವಣೆಗಳಲ್ಲಿ ರಾಸಾಯನಿಕ ಸಿಂಪಡಣೆ ಕೈಗೊಂಡಿದ್ದಾರೆ.

    ಸೀಲ್​ಡೌನ್​ಗೆ ಸಿದ್ಧತೆ

    ಪಟ್ಟಣದ ಕಲ್ಲಹಕ್ಕಲ, ಇಂದಿರಾನಗರ, ಕಮಾಟಗೇರಿ ಬಡಾವಣೆಗಳಿಗೆ ಅಧಿಕಾರಿಗಳ ತಂಡ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. 100 ಮೀಟರ್ ಅಂತರದಲ್ಲಿನ ವಲಯಗಳನ್ನು ಕಂಟೇನ್ಮೆಂಟ್ ಜೋನ್, ಬಫರ್ ಜೋನ್​ಗಳನ್ನಾಗಿ ಗುರುತಿಸಿ ಕ್ರಮ ಕೈಗೊಳ್ಳಲು ಸೂಚಿಸಿದರು. ಸೀಲ್​ಡೌನ್ ಪ್ರದೇಶಗಳಲ್ಲಿ ಫೀವರ್ ಕ್ಲಿನಿಕ್ ಪ್ರಾರಂಭಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

    ಸಂಪೂರ್ಣ ಲಾಕ್​ಡೌನ್​ಗೆ ಒತ್ತಾಯ

    ತಾಲೂಕು ಆಡಳಿತ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಮಾತ್ರ ಲಾಕ್​ಡೌನ್ ಘೊಷಿಸಿದೆ. ಮೂವರು ಆಶಾ ಕಾರ್ಯಕರ್ತೆಯರಿಗೆ ಸೋಂಕು ದೃಢಪಟ್ಟಿರುವ ಸುದ್ದಿಯಿಂದ ಆತಂಕಕ್ಕೊಳಗಾದ ಸಾರ್ವಜನಿಕರು, ಒಂದು ವಾರದವರೆಗೂ ಸಂಪೂರ್ಣ ಲಾಕ್​ಡೌನ್ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ತಾಲೂಕು ಆಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts