More

    ಆತಂಕ ತಂದ ಅನ್ಯ ರಾಜ್ಯದ ಚಿಲ್ಲಿ!


    ಹುಬ್ಬಳ್ಳಿ: ಇಲ್ಲಿಯ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಅನ್ಯ ರಾಜ್ಯದಿಂದ ಮೆಣಸಿನಕಾಯಿ ಆಗಮಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಅನ್​ಲೋಡಿಂಗ್ ಮಾಡದೇ ಹಮಾಲಿ ಕಾರ್ವಿುಕರು ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ಜರುಗಿತು.

    ಈಗ ಎಲ್ಲೆಡೆ ಮಹಾಮಾರಿ ಕರೊನಾ ಸೋಂಕು ಹರಡುವ ಭಯ ಆವರಿಸಿದೆ. ಅದರಲ್ಲೂ ಆಂಧ್ರ ಪ್ರದೇಶ, ಮಹಾರಾಷ್ಟ್ರದಲ್ಲಿ ಹೆಚ್ಚಾಗಿದೆ. ಸೋಮವಾರ ಅದೇ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬಂದಿದೆ. ಇದು ನಮಗೆ ಆತಂಕ ಉಂಟುಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹಮಾಲಿ ಕಾರ್ವಿುಕರು, ಕೆಲಕಾಲ ಕೆಲಸ ಸ್ಥಗಿತಗೊಳಿಸಿ ಎಪಿಎಂಸಿ ಆಡಳಿತ ಕಚೇರಿಗೆ ಹೋಗಿ ಅಧಿಕಾರಿಗಳ ಎದುರು ಅಸಮಾಧಾನ ಹೊರಹಾಕಿದರು.

    ಜಿಲ್ಲೆಯ ರೈತರ ಅನುಕೂಲಕ್ಕಾಗಿ ಎಪಿಎಂಸಿ ವ್ಯಾಪಾರ ಸೀಮಿತವಾಗಬೇಕು. ಬೇರೆ ಕಡೆಯಿಂದ ಫಸಲು ತರಬಾರದು. ಆದರೆ, ಕೆಲ ವ್ಯಾಪಾರಸ್ಥರು ಲಾಭದ ಆಸೆಗೆ ಬಿದ್ದು ಅನ್ಯ ರಾಜ್ಯಗಳಿಂದ ಮೆಣಸಿನಕಾಯಿ ತರಿಸುತ್ತಿದ್ದಾರೆ. ಅವರಿಗೆ ಕಾರ್ವಿುಕರ ಆರೋಗ್ಯ, ಹಿತ ಮುಖ್ಯವಾಗುತ್ತಿಲ್ಲ ಎಂದೂ ದೂರಿದರು.

    ಜಿಲ್ಲೆಯ ವ್ಯಾಪ್ತಿಯಲ್ಲಿ ಇನ್ನಷ್ಟು ಮೆಣಸಿನಕಾಯಿ ಮಾರಾಟವಾಗದೇ ಇದ್ದು, ಅದನ್ನು ವ್ಯಾಪಾರ ಮಾಡಲಷ್ಟೇ ಅವಕಾಶ ನೀಡಬೇಕು ಎನ್ನುವುದು ಅನೇಕ ವರ್ತಕರ ಹಾಗೂ ಕಾರ್ವಿುಕರ ಆಗ್ರಹವಾಗಿದೆ.

    ಶನಿವಾರ ಕೂಡ 20 ಗಾಡಿಯಷ್ಟು ಅನ್ಯ ರಾಜ್ಯದ ಮೆಣಸಿನಕಾಯಿ ಬಂದಿತ್ತು ಎನ್ನಲಾಗಿದೆ. ಇದೀಗ ಸೋಮವಾರವೂ ದೊಡ್ಡ ಸಂಖ್ಯೆಯಲ್ಲಿ ಗಾಡಿಗಳು ಬಂದಿದ್ದವು. ಇದರಿಂದ ಕಾರ್ವಿುಕರು ಆತಂಕಕ್ಕೆ ಒಳಗಾಗಿದ್ದರು. ಕಾರ್ವಿುಕರ ಅಳಲು ಆಲಿಸಿದ ಎಪಿಎಂಸಿ ಅಧಿಕಾರಿಗಳು ಸೋಂಕು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸ್ಯಾನಿಟೈಜರ್, ಗ್ಲೌಸ್ ನೀಡಲಾಗುವುದು ಎಂದು ಭರವಸೆ ನೀಡಿದರು. ಈಗ ಬಂದಿರುವ ಮೆಣಸಿನಕಾಯಿ ವಿಲೇವಾರಿ ಮಾಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಕಾರ್ವಿುಕರು ಕೆಲಸಕ್ಕೆ ತೆರಳಿದರು.

    ವರ್ತಕ-ಕೆಲಸಗಾರರೊಂದಿಗೆ ಸಭೆ: ಕಾರ್ವಿುಕರ ಆರೋಗ್ಯ ಕಾಪಾಡುವ ದಿಸೆಯಲ್ಲಿ ಎಪಿಎಂಸಿಯಲ್ಲಿ ವರ್ತಕರು ಹಾಗೂ ಹಮಾಲಿ ಕೆಲಸಗಾರರೊಂದಿಗೆ ಸಭೆ ನಡೆಸಿದ್ದೇವೆ. ಪರಸ್ಪರ ಮಾತುಕತೆ ನಡೆಸಿ ಸಮಸ್ಯೆ ಆಲಿಸಿದ್ದೇವೆ. ಕಾರ್ವಿುಕರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದು, ಅವರು ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ರಾಜಣ್ಣ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts