More

    ಆಗಸದಲ್ಲಿ ಸ್ಪೈಡರ್​ವುನ್, ಅವತಾರ್ ಕುಣಿತ

    ಶಿವಮೊಗ್ಗ: ಭಾನುವಾರ ಬೆಳಗ್ಗೆ ಆಗಸದಲ್ಲಿ ಸ್ಪೈಡರ್​ವುನ್, ಅವತಾರ್, ಬಣ್ಣ ಬಣ್ಣದ ಚಿಟ್ಟೆಗಳು, ಡ್ರ್ಯಾಗನ್, ರಣಹದ್ದು, ನಕ್ಷತ್ರ, ಗರುಡ, ಹುಲಿ, ಕರಡಿ, ಮೀನು, ಹಾವು, ಪುಷ್ಪಕ ವಿಮಾನ ಹೀಗೆ ಹತ್ತು ಹಲವು ಬಗೆಯ ಪ್ರಾಣಿ ಪಕ್ಷಿಗಳು, ಜಲಚರ ಜೀವಿಗಳು ಹಾರಾಡುತ್ತಿದ್ದವು.

    ಅರೇ! ಇದೇನಿದು ಅಂತೀರಾ…ಇದು ನಗರದ ಕೃಷಿ ಮತ್ತು ತೋಟಗಾರಿಕೆ ವಿವಿ ಆವರಣದಲ್ಲಿ ಪೀಪಲ್ ಫಾರ್ ಎಜುಕೇಶನ್ ಹಾಗೂ ಶಿವಮೊಗ್ಗ ಕಿಡ್​ಥಾನ್ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಗಾಳಿಪಟ ಹಬ್ಬದಲ್ಲಿ ಕಂಡುಬಂದ ಮನಮೋಹಕ ದೃಶ್ಯಗಳು.

    ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಚಟುವಟಿಕೆಗಳ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಮೊಬೈಲ್, ಟಿವಿಗಳಿಗೆ ಅಂಟಿಕೊಳ್ಳುವುದು ಸಾಮಾನ್ಯವಾಗಿದೆ. ಇದನ್ನು ಮನಗಂಡ ಪೀಪಲ್ ಫಾರ್ ಎಜುಕೇಶನ್ ಸಂಸ್ಥೆಯು ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಸಲುವಾಗಿ ಗಾಳಿಪಟ ಹಬ್ಬ ಆಯೋಜಿಸಿತ್ತು.

    2ರಿಂದ 16 ವರ್ಷದೊಳಗಿನ ಅಂದಾಜು 200ಕ್ಕೂ ಅಧಿಕ ಮಕ್ಕಳು ಗಾಳಿಪಟ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಆಗಸದಲ್ಲಿ ಹಾರಾಡುತ್ತಿದ್ದ ಬಗೆ ಬಗೆಯ ಚಿತ್ತಾಕರ್ಷಕ ಗಾಳಿಪಟಗಳು ಜನರನ್ನು ಆಕರ್ಷಿಸಿದವು. ರಜೆ ಇದ್ದ ಕಾರಣ ಪೋಷಕರೊಂದಿಗೆ ಪಾಲ್ಗೊಂಡ ಮಕ್ಕಳು ಮೈದಾನದ ತುಂಬಾ ಓಡಾಡಿ ಗಾಳಿಪಟ ಹಾರಿಸಿದರು. ಮಕ್ಕಳ ಸಂತಸ ಕಣ್ತುಂಬಿಕೊಂಡ ಪಾಲಕರು ಕೂಡ ಸಂಭ್ರಮಿಸಿದರು.

    ಗಾಳಿಪಟ ಭರ್ಜರಿ ಮಾರಾಟ: ಆವರಣದಲ್ಲೇ ಗಾಳಿಪಟ ಮಾರಾಟ ಸಹ ನಡೆಯಿತು. ಮಕ್ಕಳು ದುಂಬಾಲು ಬಿದ್ದು ಪಾಲಕರಿಂದ ಗಾಳಿಪಟ ಕೊಡಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. 50ರಿಂದ 500 ರೂ.ವರೆಗಿನ ಗಾಳಿಪಟಗಳಿದ್ದವು. ಇದೇವೇಳೆ ಗಾಳಿಪಟ ಹಾರಿಸುವ ಬಗ್ಗೆ ಆಯೋಜಕರು ಮಕ್ಕಳು ಮತ್ತು ಪಾಲಕರಿಗೆ ಮಾಹಿತಿ ನೀಡಿದರು. ಜತೆಗೆ ಹಬ್ಬದಲ್ಲಿ ಪಾಲ್ಗೊಂಡ ಪ್ರತಿ ಮಗುವಿಗೂ ಪ್ರಮಾಣಪತ್ರ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts