More

    ಅಳಲು ತೋಡಿಕೊಂಡ ನೆರೆ ಸಂತ್ರಸ್ತರು

    ಹಾವೇರಿ: ಸಾಹೇಬ್ರೆ ನಮ್ದೂ ಬೆಳೆ ಹಾನಿ ಆಗೈತ್ರಿ, ಆದ್ರಾ ನಮಗಾ ಇವತ್ತಿಗೂ ಯಾವುದೇ ಪರಿಹಾರ ಬಂದಿಲ್ಲರೀ…, ದಿನಾ ಬ್ಯಾಂಕ್​ಗೆ ಅಲೆದಾಡಿ ಸಾಕಾಗಿ ಹೋಗೈತಿ, ಬ್ಯಾಂಕ್​ನವ್ರು ತಲಾಠಿ ಕೇಳು ಅಂತಾರೆ, ಅಲ್ಲಿ ಹೋದ್ರೆ ಅವರು ಬರುತ್ತೇ ಅಂತಾರೆ, ನೀವಾರಾ ಹೇಳ್ರಿ ನಮಗಾ ಪರಿಹಾರ ಬರುತ್ತಾ ಇಲ್ಲಾ…

    ಹೀಗೆಂದು, ತಾಲೂಕಿನಲ್ಲಿ ನೆರೆ, ಅತಿವೃಷ್ಟಿಯಿಂದ ಬೆಳೆ ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರು ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಎದುರು ಅಳಲು ತೋಡಿಕೊಂಡರು.

    ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಅಪರ ಜಿಲ್ಲಾಧಿಕಾರಿಗಳು ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಈ ದೃಶ್ಯ ಕಂಡು ಬಂದಿತು.

    ಬೆಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಒಟ್ಟು 29 ರೈತರು ದೂರು ಸಲ್ಲಿಸಿದರು. ನೆಗಳೂರು ಗ್ರಾಮದ ಎನ್.ಎಸ್. ಬಿಷ್ಠನಗೌಡ್ರ ಎಂಬುವರು, ‘ನಮ್ಮದು 3 ಎಕರೆ 34 ಗುಂಟೆ ಜಮೀನಿದೆ. 3 ಎಕರೆ ಪ್ರದೇಶಕ್ಕೆ ಪರಿಹಾರ ಕೊಟ್ಟಿದ್ದು, ಇನ್ನೂ 34 ಗುಂಟೆ ಜಮೀನಿಗೆ ಪರಿಹಾರ ಕೊಟ್ಟಿಲ್ಲ. ನಮ್ಮ ಪಕ್ಕದ ಹೊಲದವರಿಗೆ ಪೂರ್ಣ ಪರಿಹಾರ ಕೊಟ್ಟಿದ್ದಾರೆ ಎಂದು ದೂರಿದರು. ಆಗ ಎಡಿಸಿ, ನೆಗಳೂರ ತಲಾಠಿಯನ್ನು ಕರೆದು ಏಕೆ ಪೂರ್ಣ ಪರಿಹಾರ ಕೊಟ್ಟಿಲ್ಲ. ಪಕ್ಕದ ಹೊಲದವರಿಗೆ ಪೂರ್ಣ ಪರಿಹಾರ ಕೊಟ್ಟು ಇವರನ್ನೇಕೆ ಕೈಬಿಟ್ಟಿದ್ದೀರಿ’ ಎಂದು ಪ್ರಶ್ನಿಸಿದರು. ಅಲ್ಲದೆ, ಅವರ ಫೈಲ್ ತೆಗೆದು ತೋರಿಸುವಂತೆ ಸೂಚಿಸಿದರು. ಆಗ ತಲಾಠಿ ಫಕೀರೇಶ ರ್ಬಾ, ಇವರು ಕೊಟ್ಟ ಫೋಟೋ ಎಡಿಟ್ ಆಗಿತ್ತು ಎಂದರು. ಇದರಿಂದ ಕೆರಳಿದ ಎಡಿಸಿ ‘ನಿಂಗೆ ಕಣ್ಣಿಲ್ವಾ, ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿಲ್ವಾ..? ಈಗ ನಾವು ಸ್ಥಳಕ್ಕೆ ಬಂದು ಸ್ಥಾನಿಕ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಸಿದರು.

    ಕೋಡಬಾಳ ಗ್ರಾಮದ ಲೋಕೇಶ ಕುಬಸದ, ‘ನಮ್ಮೂರಿನ 20ಕ್ಕೂ ಹೆಚ್ಚು ಜನರಿಗೆ ಬೆಳೆ ಪರಿಹಾರ ಸಿಕ್ಕಿಲ್ಲ. ಮರೋಳ ಗ್ರಾಪಂ, ತಹಸೀಲ್ದಾರ್ ಕಚೇರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ಸಿಕ್ಕಿಲ್ಲ. ಕೂಡಲೆ ಪರಿಹಾರ ದೊರಕಿಸಿಕೊಡಿ’ ಎಂದು ಮನವಿ ಮಾಡಿದರು. ಬೆಳವಿಗಿ ಗ್ರಾಮದ ನಾಗಪ್ಪ ವಿಭೂತಿ, ಇಜಾರಿಲಕಮಾಪುರದ ಇಬ್ಬರು ರೈತರು ನಮ್ಮ ಹೊಲದಲ್ಲಿ ಪೂರ್ಣ ಬೆಳೆ ಹಾನಿಯಾಗಿದ್ದರೂ ಈವರೆಗೂ ಪರಿಹಾರ ಬಂದಿಲ್ಲ ಎಂದು ದೂರಿದರು. ಆಗ ಎಡಿಸಿ ತಕ್ಷಣ ಪರಿಶೀಲಿಸಿ ವರದಿ ನೀಡುವಂತೆ ತಹಸೀಲ್ದಾರ್ ಶಂಕರ್ ಜಿ.ಎಸ್. ಅವರಿಗೆ ಸೂಚಿಸಿದರು.

    ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಯ ಪರಿಹಾರ ವಿತರಣೆಯಲ್ಲಿನ ಲೋಪದೋಷಗಳ ಕುರಿತು ರೈತರು, ಸಂತ್ರಸ್ತರು ಅಪರ ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಶಿರಮಾಪುರ ಗ್ರಾಮದ ದ್ಯಾಮನಗೌಡ ಸಹೋದರು, ಖಾತೆ ಬದಲಾವಣೆಗೆ 4 ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಇನ್ನೂ ಮಾಡಿಕೊಟ್ಟಿಲ್ಲ ಎಂದರು. ಆಗ ಎಡಿಸಿ ಗ್ರಾಮಲೆಕ್ಕಿಗರು, ತಹಸೀಲ್ದಾರ್​ಗೆ ಒಂದು ತಿಂಗಳೊಳಗೆ ಈ ಪ್ರಕರಣವನ್ನು ಇತ್ಯರ್ಥಗೊಳಿಸಿ ಎಂದು ತಾಕೀತು ಮಾಡಿದರು.

    ರಾಣೆಬೆನ್ನೂರ, ಹಿರೇಕೆರೂರಲ್ಲಿ ದೂರು ಸ್ವೀಕಾರ: ಫೆ. 20ರಂದು ಬೆಳಗ್ಗೆ 11ಕ್ಕೆ ರಾಣೆಬೆನ್ನೂರ ತಹಸೀಲ್ದಾರ್ ಕಚೇರಿಯಲ್ಲಿ, ಮಧ್ಯಾಹ್ನ 3ಕ್ಕೆ ಹಿರೇಕೆರೂರು ತಹಸೀಲ್ದಾರ್ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳು ಸಾರ್ವಜನಿಕ ದೂರು ಸ್ವೀಕರಿಸಲಿದ್ದಾರೆ. ರೈತರು ತಮ್ಮ ದೂರು ಸಲ್ಲಿಸಬಹುದು.

    ತುರ್ತು ಪರಿಹಾರ ಕೊಟ್ಟು ಕೈಬಿಟ್ಟಾರೀ: ನಾಗನೂರು ಗ್ರಾಮದ ಗೀತಾಂಜಲಿ ಮರಿರೇವಣ್ಣನವರ ಎಂಬುವರು ‘ನಮ್ಮ ಮನೆ ವರದಾ ನದಿಯ ನೆರೆಯಿಂದ ಬಿದ್ದಿದೆ. 10 ಸಾವಿರ ರೂ. ತುರ್ತು ಪರಿಹಾರ ಕೊಟ್ಟಿದ್ದಾರೆ. ಈಗ ಉಳಿದ ಪರಿಹಾರ ಕೇಳಿದರೆ ಮನೆಯಲ್ಲಿ ಯಾರೂ ವಾಸವಿಲ್ಲ ಎನ್ನುತ್ತಿದ್ದಾರೆ. ಆದರೆ, ನಾವು ವಾಸವಿದ್ದು, ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸಿದ್ದೇವೆ. ಮನೆಯ ತೆರಿಗೆಯನ್ನು ಪಾವತಿಸಿದ್ದೇವೆ’ ಎಂದು ದಾಖಲೆ ತೋರಿಸಿದರು. ಆಗ ಸ್ಥಳದಲ್ಲಿದ್ದ ತಹಸೀಲ್ದಾರ್​ರಿಂದ ಮಾಹಿತಿ ಪಡೆದ ಎಡಿಸಿ, ಮನೆಯಲ್ಲಿ ವಾಸವಿಲ್ಲದಿದ್ದರೆ 10 ಸಾವಿರ ರೂ. ಏಕೆ ಕೊಟ್ಟಿದ್ದೀರಿ. ಈ ಕುರಿತು ಇನ್ನೊಮ್ಮೆ ಪರಿಶೀಲಿಸಿ ವರದಿ ಕೊಡಿ ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts