More

    ಅಭಿವೃದ್ಧಿ ಹೆಸರಲ್ಲಿ ಅವ್ಯವಹಾರ

    ಜೆ.ಜಿ.ಶ್ರೀನಿವಾಸಮೂರ್ತಿ, ಬೇತಮಂಗಲ
    ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಬ್ಯಾಟರಾಯನಹಳ್ಳಿ ಬೆಟ್ಟಕ್ಕೆ ನಿರ್ಮಿಸಲು ಉದ್ದೇಶಿಸಿರುವ ರಸ್ತೆ, ಚರಂಡಿ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಹೆಸರಲ್ಲಿ ಭೂಸೇನಾ ನಿಗಮದ ಅಧಿಕಾರಿಗಳು ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ.

    ಮುಜರಾಯಿ ದೇವಾಲಯಕ್ಕೆ ಪ್ರತಿವರ್ಷ ಸಾವಿರಾರು ಭಕ್ತರು ಬರುವುದರಿಂದ ಸರ್ಕಾರ 2017-18ರಲ್ಲಿ ಪ್ರವಾಸೋದ್ಯಮ ಇಲಾಖೆ 2 ಕೋಟಿ ರೂ. ಬಿಡುಗಡೆ ಮಾಡಿ, ಕಾಮಗಾರಿಯನ್ನು ಭೂ ಸೇನಾ ನಿಗಮಕ್ಕೆ ವಹಿಸಿತ್ತು.

    2 ಸಾವಿರ ಮೀಟರ್ ಡಾಂಬರು ರಸ್ತೆ, 4 ಸಾವಿರ ಮೀಟರ್ ಚರಂಡಿ ಇನ್ನಿತರ ಕಾಮಗಾರಿಗೆ ಯೋಜನೆ ಸಿದ್ಧಪಡಿಸಿದ ನಿಗಮದ ಅಧಿಕಾರಿಗಳು ನೆಪ ಮಾತ್ರಕ್ಕೆ ಕಾಮಗಾರಿಗೆ ಚಾಲನೆ ನೀಡಿ ಮೊದಲ ಕಂತಿನ ಹಣ ಪಡೆದಿದ್ದಾರೆ.

    ನಿಗಮದ ಜಿಲ್ಲಾ ಸಹಾಯಕ ಇಂಜಿನಿಯರ್ ವಿಜಯಕುಮಾರ್, ನಡೆಯದ ಕಾಮಗಾರಿಗೆ ಹಿಂಬಾಲಕ ಲಿಯಾಕತ್ ಅಲಿಖಾನ್ ಹೆಸರಲ್ಲಿ 2018ರ ಮಾ.9ರಂದು 8.40 ಲಕ್ಷ ರೂ. (ಚೆಕ್ ನಂ.413561), ಕಾರ್ಮಿಕರ ಸರಬರಾಜಿಗೆಂದು 5 ಲಕ್ಷ (ಚೆಕ್ ನಂ.959187) ಮತ್ತು 2020ರ ಜ.13ರಂದು 3.24 ಲಕ್ಷ ಹಾಗೂ ಅದೇ ದಿನ ಮತ್ತೆ 2.24 ಲಕ್ಷ (ಚೆಕ್ ನಂ.959237) ರೂ. ಬಿಡುಗಡೆ ಮಾಡಿಸಿದ್ದಾರೆಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.

    ಸಂಸ್ಥೆಯ ಹೆಸರಲ್ಲೂ ಲೂಟಿ: ಕೇವಲ ಇವರ ಹಿಂಬಾಲಕರ ಹೆಸರಿನಲ್ಲಷ್ಟೇ ಅಲ್ಲದೆ ಚರಂಡಿಗಾಗಿ ಕಂಬಿ ಮತ್ತು ಸಿಮೆಂಟ್ ಪೂರೈಕೆಯಾಗಿರುವುದಾಗಿ ದಾಖಲೆ ಸೃಷ್ಟಿಸಿ ಒಟ್ಟು 15.54 ಲಕ್ಷ ರೂ.ಗಳನ್ನು ನಿಗಮದ ಹೆಸರಲ್ಲಿ ಇಂಜಿನಿಯರ್ ವಿಜಯಕುಮಾರ್ ಡ್ರಾ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ 4 ಸಾವಿರ ಮೀಟರ್ ಚರಂಡಿ ಹೆಸರಲ್ಲಿ ಒಟ್ಟು 37.23 ಲಕ್ಷ ರೂ. ಬಿಡುಗಡೆ ಮಾಡಿಸಿಕೊಂಡಿರುವುದು ಸ್ಪಷ್ಟವಾಗಿದೆ.

    ಲಿಯಾಖತ್ ಅಲಿಖಾನ್ ಅಕ್ರಮ ಮುಚ್ಚಿ ಹಾಕಲು ರಜೆ ದಿನದಂದು ನಿಗಮದ ಕಚೇರಿಗೆ ಬಂದು ದಾಖಲೆ ತಿದ್ದುತ್ತಿದ್ದಾಗ ಜನರ ಕೈಗೆ ಸಿಕ್ಕಿಬಿದ್ದಿರುವುದರಿಂದ ಹಣ ಬಿಡುಗಡೆ ಸಮಯದಲ್ಲಿ ಸಹಾಯಕ ಇಂಜಿನಿಯರ್ ವಿಜಯಕುಮಾರ್ ಪ್ರಭಾರ ಎಇಇ ಆಗಿದ್ದರಿಂದ ಬಿಲ್‌ಪಾಸ್ ಮಾಡಲು ಅವಕಾಶ ಬಳಸಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

    ದೇವಾಲಯ ರಸ್ತೆಗೆ ಸಂಬಂಧಪಟ್ಟಂತೆ 40 ಲಕ್ಷ ಮತ್ತು ಇತರ ಕಾಮಗಾರಿಗಳಲ್ಲಿ ಕೋಟ್ಯಂತರ ರೂ.ಗಳ ಅಕ್ರಮ ನಡೆದಿದೆ ಎಂದು ಕೋಲಾರ ಸಂಗೊಳ್ಳಿ ರಾಯಣ್ಣ ಯುವಸೇನೆಯ ಪ್ರಜ್ವಲ್ ಎಂಬುವವರು ಲೋಕಾಯುಕ್ತ ಮತ್ತು ಭೂಸೇನಾ ನಿಗಮ ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ.5ರಂದು ಹಿರಿಯ ಅಧಿಕಾರಿಗಳು ಕಾಮಗಾರಿ ಪರಿಶೀಲಿಸಿದ ನಂತರ ವಿವರಣೆ ಕೇಳಿದಾಗ ಉತ್ತರ ನೀಡಲು ತಡಬಡಾಯಿಸಿರುವುದು ಆರೋಪಕ್ಕೆ ಇಂಬು ಸಿಕ್ಕಂತಾಗಿದೆ.

    ದಾಖಲೆಗಳಿಂದ ಹೆದರಿಕೆ: ದಾಖಲೆ ತಿದ್ದಲು ಹೋಗಿ ಖಾನ್ ಸಿಕ್ಕಿಬಿದ್ದಿರುವುದರಿಂದ ಪೇಚಿಗೆ ಸಿಲುಕಿರುವ ವಿಜಯಕುಮಾರ್ ಮಾಧ್ಯಮದವರ ಕಣ್ಣಿಗೆ ಬೀಳದೆ, ಕಚೇರಿಗೂ ಬರದೆ ತಪ್ಪು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

    ಡ್ಯಾಮೇಜ್ ಕಂಟ್ರೋಲ್‌ಗೆ ಯತ್: 15 ದಿನಗಳ ಹಿಂದೆ ಬೆಟ್ಟದಲ್ಲಿ ಚರಂಡಿ ಕಾಮಗಾರಿ ನಡೆಸಲು ಜೆಸಿಬಿಯೊಂದಿಗೆ ಬಂದಿದ್ದ ಅವರು ಚರಂಡಿ ಕಾಮಗಾರಿಗೆ ಮರಗಳನ್ನು ಕಡಿಯಬೇಕಾಗಿರುವುದರಿಂದ ಅರಣ್ಯ ಇಲಾಖೆ ಅನುಮತಿ ಸಿಗದೆ ಮುಜುಗರಕ್ಕೆ ಒಳಗಾಗಿದ್ದು ಡ್ಯಾಮೇಜ್ ಕಂಟ್ರೋಲ್‌ಗಾಗಿ ರಾಜಕೀಯ ಆಶ್ರಯಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಅಕ್ರಮದ ಬಗ್ಗೆ ಸರ್ಕಾರದ ಗಮನಕ್ಕೆ ಹೋಗಿರುವುದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗುತ್ತದೆಯೇ ಎಂಬುದು ಜನರನ್ನು ಕಾಡುತ್ತಿರುವ ಜಿಜ್ಞಾಸೆಯಾಗಿದೆ.

    ಕಾಮಗಾರಿ ಇಲ್ಲದೆ ಹಣ ಡ್ರಾ ಮಾಡಿದ್ದಾರೆ. ಅದಕ್ಕೆ ಸಾಕ್ಷಾದಾರ ಇವೆ. ಸರ್ಕಾರ ಮತ್ತು ಲೋಕಾಯುಕ್ತರಿಗೆ ದೂರು ನೀಡಿದ್ದೇನೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು.
    ಪ್ರಜ್ವಲ್, ಅಧ್ಯಕ್ಷ, ಸಂಗೊಳ್ಳಿ ರಾಯಣ್ಣ ಯುವ ಸೇನೆ

    ಬ್ಯಾಟರಾಯನಸ್ವಾಮಿ ಬೆಟ್ಟದ ರಸ್ತೆ ಕಾಮಗಾರಿ ಇನ್ನೂ ಮುಗಿದಿಲ್ಲ, ಯೋಜನೆಗೆ ನಿಗದಿಪಡಿಸಿರುವ ಅನುದಾನ ಪೂರ್ತಿ ಬಿಡುಗಡೆಯೂ ಆಗಿಲ್ಲ, ಅಕ್ರಮ ನಡೆದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ.
    ರಾಮು, ಇಇ, ಕೆಆರ್‌ಐಡಿಎಲ್, ವಿಭಾಗೀಯ ಕಚೇರಿ, ಕೋಲಾರ

    ಬ್ಯಾಟರಾಯಸ್ವಾಮಿ ಬೆಟ್ಟದ ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ನನ್ನ ಅವಧಿಯಲ್ಲಿ ಕಾಮಗಾರಿ ನಡೆದಿಲ್ಲ, ಒಂದು ವೇಳೆ ಕಾಮಗಾರಿ ಇಲ್ಲದೆ ಹಣ ಡ್ರಾ ಮಾಡಿದ್ದರೆ ಕ್ರಮಕ್ಕೆ ಒತ್ತಾಯಿಸಲಾಗುವುದು.
    ಎಂ. ರೂಪಕಲಾ, ಶಾಸಕಿ, ಕೆಜಿಎಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts