More

    ಅಭಿವೃದ್ಧಿ ಸಮತೋಲನಕ್ಕೆ ಕೈಗಾರಿಕೋದ್ಯಮ ಬೆಳೆಸಿ -ಡಿಸಿ ವೆಂಕಟೇಶ್ -ಅರಿವು ಕಾರ್ಯಕ್ರಮ

    ದಾವಣಗೆರೆ: ಅಭಿವೃದ್ಧಿಯ ಸಮತೋಲನಕ್ಕಾಗಿ ರಾಜ್ಯದ ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕೈಗಾರಿಕೋದ್ಯಮ ಬೆಳೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.

    ನಗರದ ಹೋಟೆಲ್ ಸಾಯಿ ಇಂಟರ್‌ನ್ಯಾಷನಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
    ಒಂದು ದೇಶದ ಅಭಿವೃದ್ಧಿಗೆ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಗುಡಿ ಕೈಗಾರಿಕೆಗಳಿಗೆ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಭಾರತ ಒಂದು ಕಾಲದಲ್ಲಿ ಶೇ.50ಕ್ಕೂ ಅಧಿಕ ರಫ್ತು ಮಾಡುತ್ತಿತ್ತು. ಬ್ರಿಟಿಷರು ಬಂದ ನಂತರ ಗುಡಿ ಕೈಗಾರಿಕೆಗಳು ನಶಿಸಿ ಕೃಷಿಗೆ ಹೆಚ್ಚಾಗಿ ಅವಲಂಬನೆ ಆಗುವಂತಾಯಿತು ಎಂದು ತಿಳಿಸಿದರು.
    ಸ್ವಾತಂತ್ರಾೃನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಿದ್ದು, ದೊಡ್ಡ ನಗರಗಳಲ್ಲಿ ಬೃಹತ್ ಮಟ್ಟದಲ್ಲಿ ಕೈಗಾರಿಕೆಗಳು ಆರಂಭಗೊಂಡಿವೆ. ರಾಜ್ಯ ಸರ್ಕಾರ ಉದ್ಯಮಗಳ ಸ್ಥಾಪನೆಗೆ ಭೂಮಿ ಮಂಜೂರಾತಿಯಿಂದ ಹಿಡಿದು ಸಾಲ ಸೌಲಭ್ಯಗಳವರೆಗೆ ಹಲವು ಕಾರ್ಯಕ್ರಮ ರೂಪಿಸಿದೆ ಎಂದರು.
    ಜಿಲ್ಲೆಯಲ್ಲಿ ಕೈಗಾರಿಕೆ ಆರಂಭಿಸಲು ವಿಪುಲ ಅವಕಾಶಗಳಿವೆ. ಸಮತಟ್ಟಾದ ಭೂಮಿ, ತುಂಗಭದ್ರಾ ನದಿ ನೀರಿನ ಲಭ್ಯತೆ ಸೇರಿ ಕೈಗಾರಿಕೆಗಳ ಸ್ಥಾಪನೆಗೆ ಅತ್ಯುತ್ತಮ ವಾತಾವರಣವಿದೆ. ಇದಕ್ಕಾಗಿ ಕುಶಲ ವಾಣಿಜ್ಯೋದ್ಯಮಿಗಳ ಅವಶ್ಯಕತೆಯಿದ್ದು, ಸ್ಥಳೀಯರೂ ಉದ್ಯಮಿಗಳಾಗಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
    ಕೇವಲ ಪುಸ್ತಕ ಓದುವುದು ಹಾಗೂ ತರಗತಿಗಳಲ್ಲಿ ಪಾಠ ಕೇಳಿದರೆ ಒಬ್ಬ ವ್ಯಕ್ತಿ ಯಶಸ್ವಿ ಕೈಗಾರಿಕೋದ್ಯಮಿ ಆಗುವುದಿಲ್ಲ. ಉತ್ತಮ ನೆಟ್‌ವರ್ಕ್, ಎಲ್ಲರೊಂದಿಗೆ ನಮ್ರತೆ, ಹಣಕಾಸು ಶಿಸ್ತು, ವಸ್ತುಗಳ ಗುಣಮಟ್ಟ ಕಾಯ್ದುಕೊಳ್ಳುವುದು ಹಾಗೂ ಸಮಾಜಮುಖಿಯಾಗಿ ಮತ್ತೊಬ್ಬರನ್ನು ಬೆಳಸುವ ಗುಣಗಳು ಬಹಳ ಮುಖ್ಯ ಎಂದರು.
    ಕಾಸಿಯಾ ಅಧ್ಯಕ್ಷ ಶಶಿಧರ್ ಶೆಟ್ಟಿ ಮಾತನಾಡಿ, ಕಾಸಿಯಾ ಸಂಸ್ಥೆಯು ರಾಜ್ಯಮಟ್ಟ ಪ್ರತಿನಿಧಿಸುವುದರಿಂದ ಎಲ್ಲ ಜಿಲ್ಲೆಗಳಲ್ಲಿ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಉದ್ಯಮಿಗಳು ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಸಂಸ್ಥೆಯ ಗಮನಕ್ಕೆ ತಂದರೆ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
    ಕೆನರಾ ಬ್ಯಾಂಕ್ ಸಹಾಯಕ ಮುಖ್ಯ ವ್ಯವಸ್ಥಾಪಕ ವೈವಿಎನ್ ಶಿವಪ್ರಸಾದ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ರಾಜೇಂದ್ರ ನಾಮದೇವ್ ಕದಮ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಶಿವಲಿಂಗಪ್ಪ ಎನ್. ಕುಂಬಾರ, ಕಾಸಿಯಾ ಜಿಲ್ಲಾಭಿವೃದ್ಧಿ ಉಪ ಸಮಿತಿ ಅಧ್ಯಕ್ಷ ಡಿ.ಸಿ. ಶ್ರೀನಿವಾಸ್ ಇತರರು ಇದ್ದರು.
    ಜಡ್‌ಇಡಿ ಸಂಯೋಜಕ ಜ್ಯೋತಿಕೃಷ್ಣ, ಸಿಡ್ಬಿ ಸಹಾಯಕ ವ್ಯವಸ್ಥಾಪಕ ಎಂ.ಆರ್. ವಿಕಾಸ್ ಹಾಗೂ ಐಇಡಿಎಸ್ ನಿರ್ದೇಶಕ ಆರ್. ಗೋಪಿನಾಥರಾವ್ ಇತರರು ಉದ್ಯಮಿಗಳಿಗೆ ಮಾಹಿತಿ ತಿಳಿಸಿಕೊಟ್ಟರು.
    ಸಿಡ್ಬಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆನರಾ ಬ್ಯಾಂಕ್ ಹಾಗೂ ಕಾಸಿಯಾ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts