More

    ಅಭಿವೃದ್ಧಿ ಕಾರ್ಯಗಳಿಗೆ ಚುರುಕು ನೀಡಿ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಲಯ ನಿಯಮಾವಳಿ ಪರಿಷ್ಕರಣೆ, ಪಿಂಚಣಿ ಅನುದಾನ, ನೀರಿನ ಶುಲ್ಕದ ಬಡ್ಡಿ ಮನ್ನಾ, ಕೈಗಾರಿಕೆಗಳ ಆಸ್ತಿ ತೆರಿಗೆ, ಪೌರ ಕಾರ್ವಿುಕರ ನೇರ ನೇಮಕಾತಿ ಸೇರಿ ವಿವಿಧ ಚಟುವಟಿಕೆಗಳಿಗೆ ಚುರುಕು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    ಬೆಂಗಳೂರಿನಲ್ಲಿ ಗುರುವಾರ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮತ್ತು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳನ್ನು ರ್ಚಚಿಸಿ ಕಾಲಮಿತಿಯಲ್ಲಿ ಕೆಲಸ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

    ವಲಯ ನಿಯಮಾವಳಿ: ಕ್ರೆಡೈ ಸಂಸ್ಥೆಯ ಪ್ರತಿನಿಧಿಗಳು ಅವಳಿನಗರಕ್ಕೆ ಈಗಾಗಲೇ ಮಂಜೂರಾದ ವಲಯ ನಿಯಮಾವಳಿಗಳ ಬಗ್ಗೆ ರ್ಚಚಿಸಿದರು. ನ್ಯೂನತೆ ಹಾಗೂ ಲೋಪದೋಷ ವಿವರಿಸಿದರು. ಇವುಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಬಸವರಾಜ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದರು.

    ಮಹಾನಗರ ಪಾಲಿಕೆ ಪಿಂಚಣಿ ಅನುದಾನ 115 ಕೋಟಿ ರೂ. ಬಾಕಿ ಇದೆ. ಈಗಾಗಲೇ 52 ಕೋಟಿ ರೂ. ಬಿಡುಗಡೆಗೆ ಅನುಮೋದನೆ ಸಿಕ್ಕಿದ್ದು, ಈ ಪೈಕಿ 26 ಕೋಟಿ ರೂ. ವಿತರಿಸಲಾಗಿದೆ. ಉಳಿದ 26 ಕೋಟಿ ರೂ.ಗಳನ್ನು ಆರ್ಥಿಕ ಇಲಾಖೆಯೊಂದಿಗೆ ರ್ಚಚಿಸಿ ವಾರದೊಳಗೆ ಬಿಡುಗಡೆಗೊಳಿಸಲು ಅಗತ್ಯ ಕ್ರಮಕ್ಕೆ ಸಚಿವ ಶೆಟ್ಟರ್ ಸೂಚನೆ ನೀಡಿದರು.

    ನವನಗರ-ಅಮರಗೋಳ ಬಳಿಯ ಆರ್ಯಭಟ ಟೆಕ್ ಪಾರ್ಕ್​ನಲ್ಲಿ ಬಾಕಿ ಉಳಿದ 10 ಎಕರೆ ಜಾಗವನ್ನು ಪರಿಶೀಲಿಸಿ ಅಗತ್ಯ ಉಳ್ಳವರಿಗೆ ಹಂಚಿಕೆ ಮಾಡಲು ಕ್ರಮ ವಹಿಸುವಂತೆ ಶೆಟ್ಟರ್, ಇಲಾಖಾ ಕಾರ್ಯದರ್ಶಿಗೆ ಸೂಚನೆ ನೀಡಿದರು.

    ನೀರಿನ ಶುಲ್ಕದ ಬಡ್ಡಿ ಮನ್ನಾ ವಿಷಯವಾಗಿ ಚರ್ಚೆ ನಡೆಯಿತು. ಚಾಲ್ತಿ ವರ್ಷದ ನೀರಿನ ಶುಲ್ಕ ವಸೂಲಾತಿ ಜೊತೆಯಲ್ಲಿ ಮೂರು ವರ್ಷಗಳಿಗೆ ಮಾತ್ರ ಬಡ್ಡಿ ವಸೂಲಿ ಮಾಡುವ ಸಂಬಂಧ ಪರಿಶೀಲನೆ ನಡೆಸಿ ಆರ್ಥಿಕ ಇಲಾಖೆ ಜೊತೆ ರ್ಚಚಿಸಿ ಬಗೆ ಹರಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

    ಮಹಾನಗರ ಪಾಲಿಕೆಯ 2736 ಆಸ್ತಿಗಳಿಗೆ ಭೂಬಾಡಿಗೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೂಲೆ ನಿವೇಶನ ಹಾಗೂ ಸಿಎ ಸೈಟ್ ದರ ನಿಗದಿ, ನವಲೂರ ಸೇತುವೆ ನಿರ್ಮಾಣ ಕುರಿತು ಚರ್ಚೆ ನಡೆಯಿತು.

    ಹುಬ್ಬಳ್ಳಿ ಧಾರವಾಡ ಸಮಗ್ರ ಒಳಚರಂಡಿ ಯೋಜನೆಗೆ ಪಾಲಿಕೆಯ 492.91 ಕೋಟಿ ರೂ. ಅಂದಾಜು ಪಟ್ಟಿಗೆ ಅನುಮೋದನೆ ನೀಡುವಂತೆ ಸೂಚಿಸಲಾಯಿತು. ಶಾಸಕ ಅರವಿಂದ ಬೆಲ್ಲದ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರವಿಶಂಕರ್, ಅಧಿಕಾರಿಗಳಾದ ಶಶಿಕುಮಾರ್, ಬಿ.ಬಿ. ಕಾವೇರಿ, ಚಾರುಲತಾ, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಸ್ಮಾರ್ಟ್ ಸಿಟಿ ಎಂಡಿ ಶಕೀಲ್ ಅಹ್ಮದ್ ಸಭೆಯಲ್ಲಿದ್ದರು.

    ಕ್ಯಾಬಿನೆಟ್​ಗೆ ನೋಟ್ ಕಳಿಸಲು ಸೂಚನೆ: ಕೈಗಾರಿಕೆಗಳಿಗೆ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಸಲು ಬೇಡಿಕೆ ನೋಟಿಸ್ ನೀಡುತ್ತಿದ್ದು, ಈಗಾಗಲೇ ಸಂಕಷ್ಟದಲ್ಲಿರುವವರಿಗೆ ಸಮಸ್ಯೆಯಾಗಲಿದೆ. ಈ ಬಗ್ಗೆ ಕಾಯ್ದೆಯಲ್ಲಿ ಸೂಕ್ತ ಬದಲಾವಣೆ ಮಾಡಲು ಕ್ಯಾಬಿನೆಟ್​ಗೆ ನೋಟ್ ಕಳಿಸಲು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಲಾಯಿತು. ನಾಗಶೆಟ್ಟಿಕೊಪ್ಪ ಮತ್ತು ಹಳೇಹುಬ್ಬಳ್ಳಿಯಲ್ಲಿ ಹಂಚಿಕೆ ಮಾಡಲಾದ ನಿವೇಶನದಾರರಿಗೆ ಹಕ್ಕುಪತ್ರ ನೀಡುವ ಸಂಬಂಧ ಕಾನೂನಾತ್ಮಕವಾಗಿ ಕ್ರಮ ವಹಿಸಲು ಸೂಚನೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts