More

    ಅಭಿವೃದ್ಧಿಯಲ್ಲಿ ಪಕ್ಷ ರಾಜಕಾರಣ ಬೇಡ

    ಸಾಗರ: ಅಭಿವೃದ್ಧಿಯಲ್ಲಿ ಪಕ್ಷ ರಾಜಕಾರಣ ಬೇಡ. ಗಣಪತಿ ಕೆರೆ ಅಭಿವೃದ್ಧಿಗೆ ಶಾಸಕರು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಸೇರಿ ಕೆಲಸ ಮಾಡುವ ಅಗತ್ಯವಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.

    ನಗರದ ಗಣಪತಿ ಕೆರೆ ಪಕ್ಕದಲ್ಲಿ ನಗರಸಭೆಯಿಂದ 159 ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕೆರೆ ಉಳಿಸುವುದು ಸಂಸ್ಕೃತಿ. ಇಂತಹ ವಿಚಾರ ಎಲ್ಲರಿಗೂ ಹೊಳೆಯುವುದಿಲ್ಲ. ಆದರೆ ಕ್ಷೇತ್ರದ ಶಾಸಕರಿಗೆ ಕೆರೆ ಅಭಿವೃದ್ಧಿಪಡಿಸುವ ಜತೆ ಸಂಸ್ಕೃತಿ ಉಳಿಸುವ ಆಲೋಚನೆ ಬಂದಿದೆ. ಬೆಳಗಾವಿಯಲ್ಲಿ 180 ಅಡಿ ಎತ್ತರದ ಧ್ವಜಸ್ತಂಭವಿದೆ. ಸಾಗರದಲ್ಲಿ ನಿರ್ವಿುಸಿರುವುದು ರಾಜ್ಯಕ್ಕೆ ಎರಡನೇ ಅತಿದೊಡ್ಡ ಧ್ವಜ ಸ್ತಂಭ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಕೆರೆ ಅಭಿವೃದ್ಧಿಗೆ ಹಿಂದೆ ಸಚಿವನಾಗಿದ್ದಾಗ 50 ಲಕ್ಷ ರೂ. ವಿನಿಯೋಗಿಸಿದ್ದೇನೆ. ಈಗ ಶಾಸಕರು ಹಂತ ಹಂತವಾಗಿ ಕೆರೆಯ ಸೌಂದರ್ಯ ವೃದ್ಧಿಸುವ ಯೋಜನೆ ಕೈಗೆತ್ತಿಕೊಂಡಿದ್ದಾರೆ ಎಂದರು.

    ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಕಾಗೋಡು ತಿಮ್ಮಪ್ಪ ಅವರು 1980ರಲ್ಲಿ ಜಾಗವನ್ನು ಖಾಸಗಿಯವರಿಂದ ಸ್ವಾಧೀನಪಡಿಸಿಕೊಂಡು ನಗರಸಭೆ ಆಸ್ತಿಯಾಗಿ ಉಳಿಸಿಕೊಳ್ಳಲು ಶ್ರಮಿಸಿದ್ದಾರೆ. ಮುಂದಿನ ಆರು ತಿಂಗಳೊಳಗೆ ಸುಂದರ ತಾಣವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

    80 ಲಕ್ಷ ರೂ. ವೆಚ್ಚದಲ್ಲಿ ಧ್ವಜ ಸ್ತಂಭ ಸ್ಥಾಪಿಸಲಾಗಿದೆ. ಇದರಲ್ಲಿ 30 ಅಡಿ ಉದ್ದ, 45 ಅಡಿ ಅಗಲದ ರಾಷ್ಟ್ರಧ್ವಜ ವರ್ಷದ 365 ದಿನ ಹಾರಾಡುವಂತೆ ಯೋಜನೆ ರೂಪಿಸಲಾಗಿದೆ. ಉದ್ಯಾನ, ಸಣ್ಣ ಕೆರೆ, ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಧ್ವಜ ಸ್ತಂಭ ನಿರ್ಮಾಣ ಕಾಮಗಾರಿಯನ್ನು ಮುಂಬೈನ ಕಂಪನಿ ನಿರ್ವಹಿಸಿದೆ ಎಂದರು.

    ನಗರ ಬಿಜೆಪಿ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ಇಂಜಿನಿಯರ್ ವಿಠ್ಠಲ್ ಹೆಗಡೆ, ರಾಜೇಶ್, ಪ್ರಮುಖರಾದ ವಿ.ಮಹೇಶ್, ಆರ್.ಶ್ರೀನಿವಾಸ್ ಮೇಸ್ತ್ರಿ, ಅರವಿಂದ ರಾಯ್ಕರ್, ಮೈತ್ರಿ ಪಾಟೀಲ್, ಸತೀಶ್ ಮೊಗವೀರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts