More

    ಅಭಿವೃದ್ಧಿಗೆ ವಿಮಾನ ಬುನಾದಿ

    ಬೀದರ್: ಇಲ್ಲಿಂದ ಆರಂಭವಾದ ನಾಗರಿಕ ವಿಮಾನಯಾನ ಸೇವೆಯು ಭವಿಷ್ಯದಲ್ಲಿ ಬೀದರ್ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಬುನಾದಿಯಾಗಿ ಕೆಲಸ ಮಾಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವ್ಯಾಖ್ಯಾನಿಸಿದರು.
    ಚಿದ್ರಿ ಹತ್ತಿರ ಶುಕ್ರವಾರ ವಿಮಾನ ನಿಲ್ದಾಣ (ಬೀದರ್ ಏರ್ಪೋರ್ಟ್​ ) ಉದ್ಘಾಟಿಸಿ ನಾಗರಿಕ ವಿಮಾನ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಮಾನಯಾನ ಸೌಲಭ್ಯ ಕೇವಲ ನಾಗರಿಕರನ್ನು ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವುದಕ್ಕಷ್ಟೇ ಸೀಮಿತವಲ್ಲ. ಉದ್ಯಮಿದಾರರು ಬಂಡವಾಳ ಹೂಡಲು ಬರಲಿದ್ದಾರೆ. ಕೈಗಾರಿಕಾ ಬೆಳವಣಿಗೆ ಸೇರಿ ಜಿಲ್ಲೆ ಆರ್ಥಿಕ ಪ್ರಗತಿಯಲ್ಲಿ ಇದು ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಎಂದರು.
    ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಪ್ರಗತಿಗೆ ಹೊಸ ಆಯಾಮ ನೀಡಿದೆ. ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿ ನಡೆದಿದೆ. ವಿಮಾನಯಾನ ಶ್ರೀಮಂತರಿಗೆ ಮಾತ್ರ ಸೀಮಿತವಲ್ಲ, ಶ್ರೀಸಾಮಾನ್ಯರು ಸಹ ಸಂಚರಿಸಬಹುದು ಎಂಬುದನ್ನು ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ) ಯೋಜನೆ ಮೂಲಕ ಸಾಕಾರಗೊಳಿಸಿದೆ. ಕಮ್ಮಿ ಟಿಕೆಟ್ ದರದಲ್ಲೇ ಜನಸಾಮಾನ್ಯರು ಉಡಾನ್ ಯೋಜನೆಯಡಿ ವಿಮಾನದಲ್ಲಿ ಪ್ರಯಾಣಿಸಬಹುದು. ಬೀದರ್ಗೆ ಇದರಲ್ಲಿ ಸೇರಿಸಿರುವುದಕ್ಕೆ ಪ್ರಧಾನಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
    ಸಂಸದ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಏರ್ಪೋರ್ಟ್​ ನಿರ್ವಹಣೆ ಹೊತ್ತ ಹೈದರಾಬಾದ್ ಜಿಎಂಆರ್ ಕಂಪನಿ ಸಿಇಒ ಎಸ್.ಜಿ.ಕೆ. ಕಿಶೋರ್ ಮಾತನಾಡಿದರು. ಶಾಸಕ ರಹೀಮ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಟರ್ಮಿನಲ್ ಕೆಲಸ ಮಾಡಿದ ಜಿಕೆ ಇನ್ಫ್ರಾ ಸಂಸ್ಥೆ ಸಂಸ್ಥಾಪಕ ಗುರುನಾಥ ಕೊಳ್ಳುರ್, ಬೀದರ್ ನಿಲ್ದಾಣ ನಿರ್ವಹಣೆ ಹೊತ್ತಿರುವ ಜಿಎಂಆರ್ ಸಂಸ್ಥೆ ಸಿಇಒ ಕಿಶೋರ್ ಅವರನ್ನು ಯಡಿಯೂರಪ್ಪ ಸತ್ಕರಿಸಿದರು.
    ಶಾಸಕರಾದ ಬಂಡೆಪ್ಪ ಖಾಶೆಂಪುರ, ರಾಜಶೇಖರ ಪಾಟೀಲ್, ಈಶ್ವರ ಖಂಡ್ರೆ, ಬಿ.ನಾರಾಯಣರಾವ, ಡಾ.ಅವಿನಾಶ ಜಾಧವ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ, ಡಾ.ಚಂದ್ರಶೇಖರ ಪಾಟೀಲ್, ವಿಜಯಸಿಂಗ್, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಅಧ್ಯಕ್ಷೆ ಕೆ.ರತ್ನಪ್ರಭಾ, ಪ್ರಾದೇಶಿಕ ಆಯುಕ್ತ ಸುಬೋಧ್ ಯಾದವ್, ಕೆಎಸ್ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಗಂಗಾರಾಮ ಬಡೇರಿಯಾ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಕಾರ್ಯದರ್ಶಿ ಪ್ರದೀಪಸಿಂಗ್ ಕರೋಲಾ, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್ಪಿ ನಾಗೇಶ, ಬಿಜೆಪಿ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಡಾ.ಶೈಲೇಂದ್ರ ಬೆಲ್ದಾಳೆ, ಬಾಬು ವಾಲಿ, ಡಿ.ಕೆ.ಸಿದ್ರಾಮ, ಗುತ್ತಿಗೆದಾರ ಸಚಿನ್ ಕೊಳ್ಳುರ್ ಇತರರಿದ್ದರು. ಡಿಸಿ ಡಾ.ಮಹಾದೇವ ಸ್ವಾಗತಿಸಿದರು.
    ಸಂಪರ್ಕ ಕ್ರಾಂತಿಯ ಪರ್ವ: ಐದು ವರ್ಷಗಳಿಂದ ಬೀದರ್ ಜಿಲ್ಲೆಯಲ್ಲಿ ಸಂಪರ್ಕ ಕ್ರಾಂತಿ ಪರ್ವ ಶುರುವಾಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು. ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿ ಆರು ಮಹತ್ವದ ರಾಷ್ಟ್ರೀಯ ಹೆದ್ದಾರಿ ಯೋಜನೆ ಕೈಗೊಳ್ಳಲಾಗಿದೆ. ಇಷ್ಟರಲ್ಲೇ 336 ಕೋಟಿ ವೆಚ್ಚದ ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ ಕೆಲಸ ಆರಂಭವಾಗಲಿದೆ. 9 ಹೊಸ ರೈಲು ಕಾರ್ಯಾರಂಭ ಮಾಡಿದ್ದು, ಇನ್ನೂ ಮೂರು ಹೊಸ ರೈಲು ಯೋಜನೆ ಚಾಲ್ತಿಯಲ್ಲಿವೆ. ಈಗ ವಿಮಾನಯಾನ ಸೇವೆ ಆರಂಭವಾಗಿ ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಿದೆ. ಕೈಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಉತ್ತೇಜನ ನೀಡಲಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಸಲು ವಿಪುಲ ಅವಕಾಶಗಳಿವೆ. ರಾಜ್ಯ, ಕೇಂದ್ರ ಸರ್ಕಾರದಿಂದ ಈ ದಿಸೆಯಲ್ಲಿ ಯೋಜನೆ ರೂಪಿಸಬೇಕಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts