More

    ಅಭಿಪ್ರಾಯ ರೈತರು, ವಿಜ್ಞಾನಿಗಳು, ಉದ್ಯಮಿಗಳ ಸಮ್ಮೇಳನ

    ಚಿಕ್ಕೋಡಿ: ರೈತರು ಸಮಗ್ರ ಕೃಷಿ ನೀತಿ ಅಳವಡಿಸಿಕೊಂಡರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

    ತಾಲೂಕಿನ ಅಂಕಲಿಯ ಶಿವಾಲಯದಲ್ಲಿ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ, ಐಸಿಎಆರ್-ಅಟಾರಿ, ಬೆಂಗಳೂರು, ಐಸಿಎಆರ್-ಐಐಎಸ್‌ಆರ್, ಇಂದೋರ್, ಐಸಿಎಆರ್-ಎಸ್‌ಬಿಐ, ಕೊಯಮತ್ತೂರ ಹಾಗೂ ಚಿಕ್ಕೋಡಿ ಸಿ. ಬಿ. ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೋಯಾಬೀನ್ ಹಾಗೂ ಕಬ್ಬು ಬೆಳೆಯುವ ರೈತರು, ವಿಜ್ಞಾನಿಗಳು ಹಾಗೂ ಉದ್ಯಮಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

    ನಾಡಿನಲ್ಲಿ ಅನೇಕ ಜನ ಶ್ರೀಮಂತರಿದ್ದು ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ಮಾತ್ರ ಸೇವೆ ನೀಡಬಹುದು. ಆದರೆ, ಅನ್ನ ಕೊಡುವ ತಾಕತ್ತು ಇರುವುದು ಅನ್ನದಾತನಿಗೆ ಮಾತ್ರ. ಅಂತಹ ಕೃಷಿಗೆ ಮಹತ್ವ ನೀಡದೆ ಹೋದರೆ ಮುಂದೆ ಪ್ರತಿಯೊಬ್ಬರೂ ಸಂಕಷ್ಟ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದಿಂದ 1 ಲಕ್ಷ ಕೋಟಿ ಹಣವನ್ನು ಆತ್ಮನಿರ್ಭರ ಯೋಜನೆಗೆ ನೀಡಿದ್ದಾರೆ. ಆಹಾರ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕು. ಕೃಷಿಕರ ಮಕ್ಕಳಿಗೆ ಬಿಎಸ್‌ಸಿ ಆಗ್ರಿ ಅಧ್ಯಯನಕ್ಕೆ ಶೇ.50 ಸೀಟು ಹೆಚ್ಚಳ ಮಾಡಲಾಗಿದೆ. ರೈತ ಮಕ್ಕಳಿಗೆ ಶಿಷ್ಯವೇತನ ನೀಡುವ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾರಿಗೊಳಿಸಿದ್ದಾರೆ ಎಂದರು. ರಾಜ್ಯದಲ್ಲಿ ಕೃಷಿ ವಿಜ್ಞಾನ ಕಾಲೇಜು ಕಡಿಮೆ ಇವೆ. ಖಾಸಗಿಯವರು ಮುಂದೆ ಬಂದಲ್ಲಿ ಕೃಷಿ ವಿಜ್ಞಾನ ಕಾಲೇಜು ಪ್ರಾರಂಭಿಸಲು ಮುಖ್ಯಮಂತ್ರಿ ಜತೆ ಚರ್ಚೆ ಮಾಡಲಾಗುವುದು ಎಂದರು.

    ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವುದು ತೈಲ. ಎರಡನೇ ಸ್ಥಾನದಲ್ಲಿ ನಾವು ಖಾದ್ಯ ತೈಲ ಆಮದು ಮಾಡಿಕೊಳ್ಳುತ್ತೇವೆ. ಯೂಕ್ರೇನ್-ರಷ್ಯಾ ಯುದ್ಧದಿಂದಾಗಿ ನಮಗೆ ಖಾದ್ಯ ತೈಲ ಬರುವುದು ಕಠಿಣವಾಗಿದೆ. ಆದ್ದರಿಂದ ನಮ್ಮ ರೈತರು ಸೋಯಾಬೀನ್, ಸೂರ್ಯಪಾನ, ಶೇಂಗಾದಂತಹ ಬೆಳೆ ಬೆಳೆಯಬೇಕಾದ ಅವಶ್ಯಕತೆ ಇದೆ ಎಂದರು.

    ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಇಂದೋರ್ ಐಸಿಎಆರ್ ನಿರ್ದೇಶಕಿ ಗೀತಾ ಖಾಂಡೇಕರ, ಬೆಂಗಳೂರಿನ ನಿರ್ದೇಶಕ ಡಾ.ವಿ.ವೆಂಕಟಸುಬ್ರಮನಿಯನ್, ಸಿಬಿಕೆಎಸ್‌ಎಸ್‌ಕೆಎನ್ ಅಧ್ಯಕ್ಷ ಭರತ ಬನವಣೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಮಹೇಶ ಭಾತೆ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ, ರಾಜು ಮುನ್ನೊಳ್ಳಿ, ಡಾ.ಆರ್.ಬಿ ಖಡಗಾಂವಿ ಇತರರು ಇದ್ದರು. ಮತ್ತಿಕೊಪ್ಪ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ ಸ್ವಾಗತಿಸಿದರು.

    ಹಿರಿಯರ ರಾಜೀನಾಮೆ ಸುಳ್ಳು: ಹಿರಿಯ ಸಚಿವರು ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ನೀಡಬೇಕೆನ್ನುವ ವಿಚಾರ ಸುಳ್ಳು. ಇವೆಲ್ಲ ಊಹಾಪೋಹದ ಮಾತುಗಳು ಎಂದು ಕೃಷಿ ಸಚಿವ ಬಿಸಿ ಪಾಟೀಲ ಹೇಳಿದರು. ತಾಲೂಕಿನ ಅಂಕಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಧ್ಯಮಗಳು ಹಾಗೂ ವಿರೋಧ ಪಕ್ಷದವರು ಸೃಷ್ಟಿ ಮಾಡಿಕೊಂಡು ಮಾತಾಡುತ್ತಿದ್ದಾರೆ. ಯಾವುದೇ ರೀತಿಯ ಬದಲಾವಣೆ ಆಗಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಸಹಿಸಿಕೊಳ್ಳಲಾಗದವರು ಈ ರೀತಿ ಮಾತನಾಡುತ್ತಿದ್ದಾರೆ ಎಂದರು. ಕಾಶ್ಮೀರ ಫೈಲ್ಸ್ ಚಿತ್ರದ ವಿವಾದ ವಿಚಾರ ಬಗ್ಗೆ ಮಾತನಾಡಿದ ಸಚಿವರು, ಒಂದು ಚಿತ್ರ ರಾಷ್ಟ್ರೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದೆ. ಸಮಸ್ಯೆ ಜನರಿಗೆ ತಲುಪಿದೆ ಅಂದರೆ ಅದು ಕೋಮುವಾದ ಅಲ್ಲ, ಕಾಂಗ್ರೆಸ್‌ನವರೇ ಒಂದು ಸಮುದಾಯದವನ್ನು ಇಟ್ಟುಕೊಂಡು ಕೋಮುವಾದ ಸೃಷ್ಟಿಸುತ್ತಾರೆ ಎಂದು ಆರೋಪಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts