More

    ಅಪಾರ ಪ್ರಮಾಣದ ನೀರು ಪೋಲು

    ಉಪ್ಪಿನಬೆಟಗೇರಿ: ಅಮ್ಮಿನಬಾವಿ ಶುದ್ಧ ಕುಡಿಯುವ ನೀರಿನ ಘಟಕದಿಂದ ಗ್ರಾಮಕ್ಕೆ ಪೂರೈಕೆಯಾಗುವ ನೀರಿನ ಪೈಪ್ ಪುಡಕಲಕಟ್ಟಿ ಸಮೀಪದ ಸೇತುವೆ ಹತ್ತಿರ ಒಡೆದಿದ್ದು, ನಿತ್ಯ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

    ಉಪ್ಪಿನಬೆಟಗೇರಿ ಗ್ರಾಪಂ ವ್ಯಾಪ್ತಿಗೆ ಹನುಮನಾಳ, ಹನುಮನಕೊಪ್ಪ ಒಳಪಟ್ಟಿದ್ದು, ಅಂದಾಜು 15000 ಜನಸಂಖ್ಯೆ ಇದೆ. ನಿತ್ಯ 6 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದೆ. ಗ್ರಾಪಂನಿಂದ 8 ದಿನಕ್ಕೊಮ್ಮೆ ಕೇವಲ ಒಂದು ಗಂಟೆ ನೀರು ಪೂರೈಸಲಾಗುತ್ತಿದೆ. ಅಷ್ಟರಲ್ಲೇ ವಾರಕ್ಕಾಗುವಷ್ಟು ನೀರನ್ನು ಸಂಗ್ರಹಿಸಿಕೊಳ್ಳುವ ಅನಿವಾರ್ಯತೆ ಗ್ರಾಮಸ್ಥರದು. ಈ ನೀರಿಗೆ ಗ್ರಾಪಂ ಪ್ರತಿ ತಿಂಗಳು 50 ರೂ. ನೀರಿನ ಕರ ಪಡೆಯುತ್ತದೆ. ಇಂಥದ್ದರಲ್ಲಿ ಪುಡಕಲಕಟ್ಟಿ ಸೇತುವೆ ಸಮೀಪ ಪೈಪ್ ಒಡೆದು ನಾಲ್ಕೈದು ತಿಂಗಳಾಗಿದ್ದು, ನಿತ್ಯ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಪ್ರತಿ ಸಭೆಯಲ್ಲಿ ನೀರು ಮಿತವಾಗಿ ಬಳಸುವಂತೆ ಜನರಿಗೆ ಹೇಳುವ ಗ್ರಾಪಂ ಅಧಿಕಾರಿಗಳು ಈ ಪೈಪ್ ದುರಸ್ತಿಗೆ ಮುಂದಾಗುತ್ತಿಲ್ಲ.

    ಪೋಲಾಗುವ ನೀರನ್ನು ಕೆಲವರು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ, ರಾತ್ರಿ ವೇಳೆ ಇದು ಮದ್ಯವ್ಯಸನಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಮದ್ಯ ಸೇವಿಸಿದ ಟೆಟ್ರಾ ಪ್ಯಾಕೆಟ್, ಪ್ಲಾಸ್ಟಿಕ್ ಗ್ಲಾಸ್, ತಿಂಡಿ-ತಿನಿಸುಗಳ ಪ್ಯಾಕೆಟ್​ಗಳನ್ನು ಪೈಪ್ ಸುತ್ತ ಬಿಸಾಕಲಾಗಿದೆ. ಕುಡಿಯಲು ಸಮರ್ಪಕವಾಗಿ ನೀರು ಪೂರೈಸಬೇಕು. ಗ್ರಾಪಂ ಹಾಗೂ ಬಹುಗ್ರಾಮ ಕುಡಿಯುವ ನದಿ ನೀರಿನ ಅಧಿಕಾರಿಗಳು ಪೈಪ್ ದುರಸ್ತಿಪಡಿಸಬೇಕು ಎಂದು ಉಪ್ಪಿನಬೆಟಗೇರಿ, ಹನುಮನಕೊಪ್ಪ, ಹನುಮನಾಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ನೀರು ಪೋಲಾಗುತ್ತಿರುವ ಬಗ್ಗೆ ಮಾಹಿತಿಯಿದೆ. ಬಹು ಗ್ರಾಮ ಕುಡಿಯುವ ನದಿ ನೀರಿನ ಯೋಜನೆ ಇದಾಗಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿ ಸರಿಪಡಿಸಲಾಗುವುದು.

    | ಬಿ.ಎ. ಬಾವಾಕಾನವರ ಉಪ್ಪಿನಬೆಟಗೇರಿ ಪಿಡಿಒ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts