More

    ಅಪಾಯದ ಮಟ್ಟ ತಲುಪಿದ ಭದ್ರೆ: ಡ್ಯಾಂ ಸಂಪೂರ್ಣ ಭರ್ತಿ

    ಭದ್ರಾವತಿ: ಭದ್ರಾ ಜಲಾಶಯ ಮಂಗಳವಾರ ಸಂಪೂರ್ಣ (184 ಅಡಿ) ಭರ್ತಿಯಾಗಿದ್ದು, 56 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ತಾಲೂಕಿನೆಲ್ಲೆಡೆ ನಿರಂತರವಾಗಿ ಮಳೆ ಸುರಿಯುತ್ತಿದ್ದು ಕೆರೆ ಕಾಲುವೆಗಳು ಭರ್ತಿಯಾಗಿ ಹೆಚ್ಚುವರಿ ನೀರು ಸಹ ನದಿಗೆ ಸೇರುತ್ತಿದೆ. ಇದರಿಂದಾಗಿ ನದಿಯ ನೀರಿನ ಮಟ್ಟ ಸಹ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಜಲಾಶಯದಿಂದ 55ರಿಂದ 70 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಟ್ಟರೂ ಭದ್ರಾವತಿಗೆ ತಲುಪುವಷ್ಟರಲ್ಲಿ ಆ ನೀರಿನ ಪ್ರಮಾಣ ಸುಮಾರು 90 ಸಾವಿರ ಕ್ಯೂಸೆಕ್ಸ್ ನಷ್ಟಾಗುತ್ತಿದ್ದು, ಹೊಸ ಸೇತುವೆ ಮುಳುಗಡೆಗೊಂಡಿದೆ. ನದಿ ಪಾತ್ರದ ಕವಲಗುಂದಿ, ಯಕೀನ್ ಷಾ ಕಾಲನಿ, ಗುಂಡೂರಾವ್ ಶೆಡ್ ಸೇರಿದಂತೆ ಇನ್ನಿತರೆ ಭಾಗದ ಜನರು ಕಾಳಜಿ ಕೇಂದ್ರ ಸೇರುವಂತಾಗಿದೆ.
    ಸೋಮವಾರ ತಡರಾತ್ರಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗಿದೆ. ಮುನ್ಸೂಚನೆ ಮೇರೆಗೆ ನಗರಸಭೆ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಕವಲಗುಂದಿ ಗ್ರಾಮದ 32 ಕುಟುಂಬಗಳನ್ನು ರಾತ್ರಿ 10 ಗಂಟೆ ವೇಳೆಗಾಗಲೇ ಹತ್ತಿರದ ಬಿಸಿಎಂ ಹಾಸ್ಟೆಲ್‌ನಲ್ಲಿ ಕಾಳಜಿ ಕೇಂದ್ರ ತೆರೆದು ಅಲ್ಲಿಗೆ ಸ್ಥಳಾಂತರಿಸಿದರು. ಯಕೀನ್ ಷಾ ಕಾಲನಿ, ಗುಂಡೂರಾವ್ ಶೆಡ್ ಭಾಗದ ಜನರನ್ನು ತರೀಕೆರೆ ರಸ್ತೆಯ ವಳ್ಳುವರ್ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಿದರು. ಹೊಸ ಸೇತುವೆ ಹಾಗೂ ದೊಣಬಘಟ್ಟ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಸಂಚಾರ ನಿರ್ಬಂಧಿಸಲಾಗಿದೆ.
    ತಾಲೂಕಿನ ಕಾಚೆಗೊಂಡನಹಳ್ಳಿಯ ನಿವಾಸಿ ಸುಜಾತಾ(55) ಸೋಮವಾರ ರಾತ್ರಿ ಸುಮಾರು 9 ಗಂಟೆಯ ಸಮಯದಲ್ಲಿ ಮನೆಯಲ್ಲಿ ಊಟ ಮಾಡುತ್ತಾ ತಟ್ಟೆಯ ಮುಂದೆ ಕುಳಿತಿದ್ದ ಸಂದರ್ಭದಲ್ಲಿ ಮನೆಯ 1 ಭಾಗದ ಗೋಡೆ ಆಕೆಯ ಮೇಲೆ ಕುಸಿದು ಬಿದ್ದಿದ್ದು ಆಕೆ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾರೆ. ಊಟ ಬಡಿಸುತ್ತಿದ್ದ ಸೊಸೆ ಅಡುಗೆ ಕೋಣೆಗೆ ಹೋಗಿ ಬರುವಷ್ಟರಲ್ಲಿ ಈ ಘಟನೆ ನಡೆದಿದ್ದು, ತಾಯಿಯ ಮುಂದೆ ಕುಳಿತಿದ್ದ ಮಗ ಕೃಷ್ಣಮೂರ್ತಿ ಅವರ ಎರಡೂ ಕಾಲಿನ ಮೇಲೂ ಗೋಡೆ ಬಿದ್ದಿದ್ದು ಕಾಲಿನ ಮೂಳೆ ಮುರಿದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts