More

    ಅಪರೂಪದ ರಾಜಕಾರಣಿ ಅರಸು

    ಗದಗ: ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರು ಅಪರೂಪದ ರಾಜಕಾರಣಿ. ಅವರ ಸಾಮಾಜಿಕ ಕಾರ್ಯವನ್ನು ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸೋಣ. ಅವರು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ನಿರ್ವಹಿಸಿದ ಸಾಮಾಜಿಕ ಕಳಕಳಿಯ ಕಾರ್ಯ ಸರ್ವಕಾಲಿಕವಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಮುಳಗುಂದ ರಸ್ತೆಯಲ್ಲಿರುವ ಕನಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 107ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಭೂ ಸುಧಾರಣೆ ಕಾಯ್ದೆಯನ್ವಯ ಉಳುವವನೇ ಭೂಮಿಯ ಒಡೆಯ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಜಾರಿಗೊಳಿಸುವ ಮೂಲಕ ಬಡಕುಟುಂಬಗಳ ಆರ್ಥಿಕ ಜೀವನೋಪಾಯಕ್ಕೆ ಭದ್ರಬುನಾದಿ ಒದಗಿಸಿದರು. ತಮ್ಮ ಸೇವೆಯುದ್ದಕ್ಕೂ ಕ್ರಾಂತಿಕಾರಿ ಕಾರ್ಯಗಳನ್ನು ಮಾಡುತ್ತಾ ಬಡವರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದಾರೆ. ಆರ್ಥಿಕ ಅಸಮತೋಲನ ಹೋಗಲಾಡಿಸಲು ಅವರು ತೆಗೆದುಕೊಂಡ ನಿರ್ಧಾರ ಅತ್ಯಂತ ಕಠಿಣತೆಯಿಂದ ಕೂಡಿದೆ. ರೈತ ಕುಟುಂಬದಿಂದ ಬಂದವರಾದ ಅರಸು ಅವರು ಬಡವರ, ರೈತರ ಪರವಾಗಿ ಅವರ ಅಂತಃಕರಣ ನಿರಂತರವಾಗಿ ಮಿಡಿಯುತ್ತಿತ್ತು ಎಂದು ಹೇಳಿದರು.
    ಶೈಕ್ಷಣಿಕ ಪ್ರಗತಿಗೆ ಮುನ್ನಡೆ ಹಾಕಿದವರು ಡಿ. ದೇವರಾಜ ಅರಸು. ಅವರನ್ನು ಹಿಂದುಳಿದ ವರ್ಗಗಳ ಪಿತಾಮಹ ಎಂದರೆ ತಪ್ಪಾಗಲಾರದು. ವಿದ್ಯುತ್ ಸಮಸ್ಯೆ ನಿವಾರಣೆಗೆ ಅಡಿಪಾಯ ಹಾಕಿದರಲ್ಲದೆ, ಮೂಲಸೌಕರ್ಯಗಳ ವೃದ್ಧಿಗೆ ತಮ್ಮ ಸೇವೆಯನ್ನು ಮುಡುಪಾಗಿಟ್ಟರು ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಕೆ. ಪಾಟೀಲ, 12ನೇ ಶತಮಾನದಲ್ಲಿಯೇ ಬಸವಣ್ಣವರ ಸಮಬಾಳು ಸಮಪಾಲು ತತ್ವವನ್ನು ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ಅಳವಡಿಸಿಕೊಂಡಿದ್ದರು. ರಾಜ್ಯದ ಬಡವರ, ಹಿಂದುಳಿದ, ಶೋಷಿತರ ಧ್ವನಿಯಾಗಿ ಅರಸು ಅವರ ಆಡಳಿತ ಮಾದರಿಯಾಗಿದೆ. ಉಳುವವನೇ ಭೂ ಒಡೆಯ ಅನುಷ್ಠಾನದಿಂದ ಲಕ್ಷಾಂತರ ಶ್ರಮಜೀವಿಗಳ ಬದುಕು ಬೆಳಗಿಸಿದರು. ಇಂದಿರಾಗಾಂಧಿಯವರ ಪರ್ಯಾಯ ನಾಯಕರಾಗಿ ದೇವರಾಜ ಅರಸು ಕಂಡಿದ್ದಾರೆ. ಅಧಿಕಾರ, ಸಂಪತ್ತು, ಅವಕಾಶ , ಸರ್ವರ ಭಾಗವಾಗಬೇಕು ಎಂಬುದು ಅರಸು ಅವರ ಆಶಯವಾಗಿತ್ತು ಎಂದರು.
    ಇದೇ ಸಂದರ್ಭದಲ್ಲಿ ದಿ. ಡಿ.ದೇವರಾಜ ಅರಸು ಜಿಲ್ಲಾ ಪ್ರಶಸ್ತಿಯನ್ನು ಶ್ರೀ ಕಾಳಿದಾಸ ಶಿಕ್ಷಣ ಸಮಿತಿಗೆ ನೀಡಿ ಗೌರವಿಸಲಾಯಿತು. ನಂತರ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಕನಕ ಭವನ ಆವರಣದಲ್ಲಿ ತೆರೆಯಲಾದ ವಿವಿಧ ಮಳಿಗೆಗಳನ್ನು ಹಾಗೂ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ವೀಕ್ಷಣೆ ನಡೆಸಿದರು.
    ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಎಂ.ಎಸ್. ಕರಿಗೌಡ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿ.ಪಂ. ಸಿಇಒ ಡಾ. ಸುಶೀಲಾ ಬಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೆಹಬೂಬ ತುಂಬರಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಸ್ತರಣಾಧಿಕಾರಿ ಬಸವರಾಜ ಬಳ್ಳಾರಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆಗೆ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಚಾಲನೆ ನೀಡಿದರು. ಮೆರವಣಿಗೆಯು ನಗರದ ವಿವಿಧ ವೃತ್ತಗಳಲ್ಲಿ ಸಂಚರಿಸಿ ಮುಳಗುಂದ ರಸ್ತೆಯಲ್ಲಿರುವ ಕನಕಭವನಕ್ಕೆ ಬಂದು ಸೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts