More

    ಅಪರಾಧ ಕೃತ್ಯಗಳ ತಡೆಗೆ ಬೀಟ್ ಕಮಿಟಿ ಕ್ರಿಯಾಶೀಲವಾಗಲಿ

    ಅಫಜಲಪುರ (ಕಲಬುರಗಿ): ತಾಲೂಕಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಅವುಗಳನ್ನು ತಡೆಗಟ್ಟಲು ಬೀಟ್ ಕಮಿಟಿ ಹೆಚ್ಚು ಕ್ರಿಯಾಶೀಲವಾಗಬೇಕು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕಕುಮಾರ ಸೂಚಿಸಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಯುಥ್ ಕಮಿಟಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನಿಂದಲೂ ಈ ತಾಲೂಕು ರಾಜ್ಯದಲ್ಲಿ ಭೀಮಾತೀರ ಎಂಬ ಕುಖ್ಯಾತಿ ಪಡೆದಿದೆ. ವರ್ಷದಲ್ಲೇ 10 ಕೊಲೆಗಳಾಗಿವೆ. ಜತೆಗೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಅವುಗಳಿಗೆ ಕಡಿವಾಣ ಹಾಕಲು ಬೀಟ್ ಪೊಲೀಸರು ಹೆಚ್ಚು ಶ್ರಮವಹಿಸಬೇಕು ಎಂದರು.

    ಯುವ ಸಮೂಹ ಅಪರಾಧ ಹಾಗೂ ಗಲಭೆಗಳಲ್ಲಿ ಭಾಗಿಯಾಗದೆ, ನಿಮ್ಮ ಅಮೂಲ್ಯವಾದ ಜೀವನ ಓದುವುದಕ್ಕಾಗಿ ಮೀಸಲಿಟ್ಟು ಸರ್ಕಾರದ ಉನ್ನತ ಹುದ್ದೆಗಳು ಪಡೆದುಕೊಂಡು ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

    ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಿ ಜತೆಗೆ ಕಂದಾಯ ಇಲಾಖೆಯವರು ಇದಕ್ಕೆ ಸಹಕರಿಸಬೇಕು ಎಂದು ತಹಸೀಲ್ದಾರ್​ಗೆ ತಾಕೀತು ಮಾಡಿದರು.
    ಮಾಶಾಳ ಹಾಗೂ ಕರಜಗಿ ಕಡೆಗೆ ಹೆಚ್ಚಿನ ಕಳ್ಳತನ ಹಾಗೂ ಅಪರಾಧ ಕೃತ್ಯಗಳು ನಡೆಯುತ್ತಿದ್ದು ಆ ಭಾಗದ ಬಗ್ಗೆ ವಿಶೇಷ ಗಮನ ನೀಡಬೇಕು ಎಂದು ಪೊಲೀಸರಿಗೆ ಸೂಚಿಸಿದರು.

    ಜಿಪಂ ಮಾಜಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ್ ಮನವಿ ಸಲ್ಲಿಸಿ ತಾಲೂಕಿನಲ್ಲಿ ಅನಧಿಕೃತ ಸಾರಾಯಿ ಮಾರಾಟವಾಗುತ್ತಿದೆ ಮತ್ತು ಭೀಮಾ ನದಿಯ ಮಣ್ಣೂರ, ತೆಗ್ಗೆಳ್ಳಿ, ದೇವಲಗಾಣಗಾಪುರ, ಘತ್ತರಗಾ, ಹಿಂಚಗೇರಾ, ಶಿವಪುರ, ಶಿರಸಗಿ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಹೆಚ್ಚಾಗಿ ನಡೆಯುತ್ತಿದ್ದು, ಇಲಾಖೆ ಇವುಗಳಿಗೆ ಕಡಿವಾಣ ಹಾಕಬೇಕು ಎಂದರು.

    ಈಶಾನ್ಯ ವಿಭಾಗದ ಐಜಿಪಿ ಮನೀಶ್ ಖರ್ಬಿಕರ್, ಎಸ್ಪಿ ಇಶಾ ಪಂತ್, ಎಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ರವೀಂದ್ರ ಶಿರೂರ, ತಹಸೀಲ್ದಾರ್ ಸಂಜೀವಕುಮಾರ ದಾಸರ, ಸಿಪಿಐ ಜಗದೇವಪ್ಪ ಪಾಳಾ, ಬಾಸು ಚವ್ಹಾಣ್, ಪಿಎಸ್ಐಗಳಾದ ಸುರೇಶಕುಮಾರ ಚವ್ಹಾಣ್, ದೇವಿಂದ್ರ ರೆಡ್ಡಿ, ರಾಜಶೇಖರ ರಾಠೋಡ, ಗಂಗಮ್ಮ, ಶ್ರೀದೇವಿ, ಮಲ್ಲಪ್ಪ ಗುಣಾರಿ, ಮಳೇಂದ್ರ ಡಾಂಗೆ, ಚಿಂಟು ಪಟೇಲ್, ಶ್ರೀಶೈಲ ಬಳೂರಗಿ, ನಾಗೇಶ ಕೊಳ್ಳಿ, ರಾಜು ಚವ್ಹಾಣ್ ಇತರರಿದ್ದರು.

    ಕೇವಲ ಪೊಲೀಸರಿಂದ ಅಪರಾಥ ಕೃತ್ಯ ತಡೆಗಟ್ಟಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು.
    | ಅಲೋಕಕುಮಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts