More

    ಅನ್‌ಲಾಕ್ ಬಳಿಕ ಸಂಚಾರ ದುಸ್ತರ?

    ಮಂಗಳೂರು: ನಗರಾದ್ಯಂತ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಲಾಕ್‌ಡೌನ್ ಅವಧಿಯಲ್ಲಿ ಹಲವು ರಸ್ತೆಗಳನ್ನು ಅಗೆದು ಹಾಕಲಾಗಿದೆ. ಕಾಮಗಾರಿ ನಡೆಯುತ್ತಲೇ ಇರುವುದರಿಂದ ಲಾಕ್‌ಡೌನ್ ಮುಗಿದು ವಾಹನ ಸಂಚಾರ ಆರಂಭಗೊಂಡರೆ ವಾಹನ ದಟ್ಟಣೆ ಎದುರಾಗುವ ಸಾಧ್ಯತೆ ಇದೆ.

    ಪ್ರಮುಖವಾಗಿ ಎಂ.ಜಿ.ರಸ್ತೆ, ಬಂಟ್ಸ್‌ಹಾಸ್ಟೆಲ್, ಆರ್‌ಟಿಒ ಕಚೇರಿ ಬಳಿ, ಜಿಎಚ್‌ಎಸ್ ಸಂಪರ್ಕ ರಸ್ತೆ ಸೇರಿದಂತೆ ವಿವಿಧೆಡೆ ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಗತಿಯಲ್ಲಿವೆ. ಇವುಗಳು ಪ್ರಮುಖ ರಸ್ತೆಗಳಾಗಿರುವುದರಿಂದ ವಾಹನಗಳು ನಿರಂತರ ಸಂಚರಿಸುತ್ತಿರುತ್ತವೆ. ಈ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾದರೆ ಇಡೀ ನಗರದ ಮೇಲೆ ಪರಿಣಾಮ ಬೀಳಲಿದೆ. ಲಾಕ್‌ಡೌನ್ ಅವಧಿಯಲ್ಲಿ ನಗರದ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅನ್‌ಲಾಕ್ ಆದಾಗ ಎಲ್ಲ ಅಂಗಡಿ, ಕಚೇರಿಗಳು ತೆರೆಯಲ್ಪಡುವ ಕಾರಣ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿಯಲಿವೆ. ಲಾಕ್‌ಡೌನ್ ಅವಧಿಯಲ್ಲೇ ಬೆಳಗ್ಗೆ ವಾಹನ ದಟ್ಟಣೆ ಉಂಟಾಗುತ್ತಿದ್ದು, ಇನ್ನು ದಿನವಿಡೀ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

    ಮಳೆ ನೀರಿನಿಂದ ಮತ್ತಷ್ಟು ಸಮಸ್ಯೆ: ಮಂಗಳೂರಿನಲ್ಲಿ ಬಹುತೇಕ ರಸ್ತೆಗಳಿಗೆ ಚರಂಡಿ ವ್ಯವಸ್ಥೆ ಇಲ್ಲ. ಮಳೆ ನೀರು ರಸ್ತೆಯಲ್ಲೇ ಹರಿಯುವುದು ಸಾಮಾನ್ಯ. ಅಂಬೇಡ್ಕರ್ ವೃತ್ತ, ಕೆ.ಎಸ್.ರಾವ್ ರಸ್ತೆ, ರಾವ್ ಆ್ಯಂಡ್ ರಾವ್ ಸರ್ಕಲ್ ಮೊದಲಾದೆಡೆ ನೀರು ನಿಂತು ತೋಡಿನಂತಾಗುತ್ತದೆ. ಈ ಸಂದರ್ಭ ವಾಹನಗಳು ನಿಧಾನವಾಗಿ ಸಾಗುತ್ತವೆ. ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದ ವೃತ್ತದಲ್ಲಿ ಮಳೆ ನೀರು ಕೆರೆ ರೀತಿಯಲ್ಲಿ ನಿಲ್ಲುತ್ತದೆ. ವಾಹನಗಳು ಕೆಸರು ಎರಚಿಕೊಂಡು ಸಾಗುತ್ತಿದ್ದು, ಪಾದಚಾರಿಗಳು ಇಲ್ಲಿ ನಡೆದಾಡಲು ಕಷ್ಟವಾಗುತ್ತಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಹಲವು ವರ್ಷಗಳಿಂದ ಇದ್ದು, ಅದನ್ನು ಸರಿಪಡಿಸುವತ್ತ ಪಾಲಿಕೆ ಇನ್ನೂ ಗಮನ ವಹಿಸಿಲ್ಲ.

    ಬಿಜೈ ಚರ್ಚ್‌ನಿಂದ ಕೆಎಸ್ಸಾರ್ಟಿಸಿ ಕಡೆಗೆ ಹೋಗುವ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಚರಂಡಿ ಹಾಗೂ ಫುಟ್‌ಪಾತ್ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಅಪೂರ್ಣವಾಗಿದೆ. ರಸ್ತೆ ಬದಿ ಮಣ್ಣು, ಮರಳು, ಜಲ್ಲಿ ರಾಶಿಗಳು ಹಾಗೆಯೇ ಇದೆ. ಇದರಿಂದಲೂ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ತೊಡಕಾಗುತ್ತಿದೆ. ನಗರದ ಚರಂಡಿಗಳಲ್ಲಿ ಕಸ ತುಂಬಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಕೆಲವು ಕಡೆ ಕಸ ಸಂಗ್ರಹವಾಗಿ ಮಳೆ ನೀರು ಹರಿದು ಹೋಗದೆ ಮನೆ, ಅಂಗಡಿಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ. ಕಾರ್‌ಸ್ಟ್ರೀಟ್‌ನಲ್ಲಿ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಅಂಗಡಿ, ಮನೆಯ ಅಂಗಳದಲ್ಲಿ ನೀರು ತುಂಬಿದೆ. ತಗ್ಗು ಪ್ರದೇಶಗಳು ಆಗಾಗ ಜಲಾವೃತವಾಗುತ್ತಿದ್ದು, ಇದು ಪ್ರತಿ ವರ್ಷದ ಸಮಸ್ಯೆ.

    ಮಂಗಳೂರು ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿವೆ. ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ವಾಹನ ಸಂಚಾರಕ್ಕೆ ತೊಡಕಾಗದಂತೆ ಎಚ್ಚರ ವಹಿಸಲಾಗುವುದು. ಈ ಬಾರಿ ಹೆಚ್ಚಿನ ಪ್ರಮುಖ ರಸ್ತೆಗಳಲ್ಲಿ ಚರಂಡಿ, ಫುಟ್‌ಪಾತ್ ಆಗಿರುವುದರಿಂದ ರಸ್ತೆಯಲ್ಲಿ ಮಳೆ ನೀರು ಹರಿದು ವಾಹನ ಸಂಚಾರಕ್ಕೆ ತೊಡಕಾಗಲಾರದು.
    ಪ್ರೇಮಾನಂದ ಶೆಟ್ಟಿ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts