More

    ಅಧಿಕಾರಿಗಳ ವಿರುದ್ಧ ಸದಸ್ಯರ ಆಕ್ರೋಶ

    ಕುಶಾಲನಗರ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷ ಬಿ.ಜಯವರ್ಧನ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.


    ಕುಶಾಲನಗರ ಯೋಜನಾ ಪ್ರಾಧಿಕಾರಕ್ಕೆ ಸದಸ್ಯ ಕಾರ್ಯದರ್ಶಿ ಆಗಿ ಹೊಸದಾಗಿ ಆಗಮಿಸಿರುವ ಅಧಿಕಾರಿ ಯಾವುದೇ ಫೈಲ್‌ಗೂ ಸಹಿ ಮಾಡದೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಲಭ್ಯವಿಲ್ಲದಿರುವ ಹಳೆಯ ದಾಖಲೆಗಳನ್ನು ಕೇಳುವ ಮೂಲಕ ತೊಂದರೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಪ್ರಮೋದ್ ಮುತ್ತಪ್ಪ ದೂರಿದರು. ಅಧ್ಯಕ್ಷ ಜಯವರ್ಧನ ಮಾತನಾಡಿ, ಆದಷ್ಟು ಬೇಗ ಅಧಿಕಾರಿಗಳ ವಿಶೇಷ ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದರು.


    ವಿದ್ಯುತ್ ಇಲಾಖೆಯ ಕಾರ್ಯವೈಖರಿ ಬಗ್ಗೆಯೂ ಸಭೆಯಲ್ಲಿ ಸುಧೀರ್ಘ ಚರ್ಚೆಯಾಯಿತು. ಶೀಘ್ರವೇ ಪುರಸಭೆಗೆ ಸಂಬಂಧಿಸಿದ ಕೆಲಸ-ಕಾರ್ಯಗಳನ್ನು ಮುತುವರ್ಜಿಯಿಂದ ಮಾಡುವಂತೆ ಸೂಚಿಸಲಾಯಿತು.
    ಜನರ ಹಿತಾಸಕ್ತಿ ಕಾಪಾಡುವ ರೀತಿಯಲ್ಲಿ ಸ್ಥಳೀಯ ಆಡಳಿತ ಕಾನೂನು ರೂಪಿಸಬೇಕು. ಸರ್ಕಾರ ರಾಜ್ಯಕ್ಕೆ ಒಂದು ಕಾನೂನು ರೂಪಿಸುತ್ತದೆ. ಆದರೆ ಮಲೆನಾಡು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಪ್ರತ್ಯೇಕ ಕಾನೂನು ಇರುತ್ತವೆ. ಸ್ಥಳೀಯ ಆಡಳಿತ ಸ್ಥಳೀಯರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಪುರಸಭೆ ಕಾನೂನು ಸಲಹೆಗಾರ ಆರ್.ಕೆ.ನಾಗೇಂದ್ರ ಬಾಬು ಸಭೆಗೆ ಸಲಹೆ ನೀಡಿದರು. ಅದರ ಪ್ರಕಾರ ನದಿಯಂಚಿನಿಂದ 30 ಮೀಟರ್ ಬಫರ್ ಜೋನ್ ಎಂದು ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.


    ಕುಶಾಲನಗರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಅನುಮತಿ ಕೇಳಲು ಹೋದರೆ ಲಂಚ ಕೇಳುತ್ತಾರೆ ಎಂದು ಜಗದೀಶ್ ಸಭೆಯಲ್ಲಿ ಗಂಭೀರ ಆರೋಪ ಮಾಡಿದರು. ಮುಂದಿನ ದಿನಗಳಲ್ಲಿ ಪುರಸಭೆ ವತಿಯಿಂದ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಅನುಮತಿ ನೀಡಿದರೆ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ನೀಡಲು ಕೋರಿಕೆ ಸಲ್ಲಿಸುವಂತೆ ತೀರ್ಮಾನ ತೆಗೆದುಕೊಳ್ಳಲಾಯಿತು.


    ಸಭೆಯಲ್ಲಿ ಹಾಜರಿದ್ದ ಎಎಸ್‌ಐ ಗೋಪಾಲ್ ಮಾತನಾಡಿ, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಲುಪಿಸುವುದಾಗಿ ತಿಳಿಸಿದರು. ಉಪಾಧ್ಯಕ್ಷೆ ಸುರಾಯಬಾನು, ಸದಸ್ಯರಾದ ಕೆ.ಜಿ.ಮನು, ಎಂ.ವಿ.ನಾರಾಯಣ, ವಿ.ಎಸ್.ಅನಂದಕುಮಾರ್, ಶೇಖ್ ಕಲಿಮುಲ್ಲ ಖಾನ್, ಎಂ.ಕೆ.ದಿನೇಶ್, ರೂಪ ಉಮಾಶಂಕರ್, ಶೈಲಜಾ ಕೃಷ್ಣಪ್ಪ ಪುರಸಭೆ ಸಿಬ್ಬಂದಿ ಇದ್ದರು.

    ಸಂಚಾರ ಠಾಣೆ ತೆರವಿಗೆ ನಿರ್ಣಯ: ಟ್ರಾಫಿಕ್ ಪೊಲೀಸರು ಪರಿಶೀಲನೆೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು, ಸಂಚಾರ ಠಾಣೆ ತೆರವುಗೊಳಿಸಬೇಕು ಎಂದು ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು. ಪ್ರಮೋದ್ ಮುತ್ತಪ್ಪ ಮಾತನಾಡಿ, ಪಟ್ಟಣದಲ್ಲಿ ಟ್ರಾಫಿಕ್ ಪೊಲೀಸರು ಚಾಲನಾ ಪರವಾನಗಿ, ಡ್ರಿಂಕ್ ಆ್ಯಂಡ್ ಡ್ರೈವ್‌ಪರಿಶೀಲನೆಯ ನೆಪದಲ್ಲಿ ಸಾವಿರಾರು ರೂ. ದಂಡ ಹಾಕುತ್ತಿದ್ದಾರೆ. ದ್ವಿಚಕ್ರ ವಾಹನಗಳನ್ನು ಮಾತ್ರ ಪರಿಶೀಲಿಸುವ ಪೊಲೀಸರು ಕಾರಿನಲ್ಲಿ ಓಡಾಡುವವರಿಗೆ ಯಾವುದೇ ದಂಡ ವಿಧಿಸುವುದಿಲ್ಲ. ರಸ್ತೆ ಬದಿ ನಿಂತು ದ್ವಿಚಕ್ರ ವಾಹನಗಳನ್ನು ತಡೆಯುವ ಪ್ರಯತ್ನ ಮಾಡುವಾಗ ಹಲವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಬಿದ್ದು ಕೈಕಾಲು ಮುರಿದುಕೊಳ್ಳುತ್ತಾರೆ. ಕೂಲಿ ಕೆಲಸದವರು ಮತ್ತು ಬಡ ವರ್ಗದವರು ದಂಡ ಭೀತಿಯಿಂದ ಪಟ್ಟಣಕ್ಕೆ ಬರುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಇದರಿಂದ ಕುಶಾಲನಗರದಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆಯಾಗಿದೆ. ಆದ್ದರಿಂದ ಕೂಡಲೇ ಸಂಚಾರ ಠಾಣೆಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಇತರ ಸದಸ್ಯರೂ ಧ್ವನಿಗೂಡಿಸಿದರಲ್ಲದೆ, ಈ ಸಂಬಂಧ ನಡಾವಳಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲು ಪಕ್ಷಾತೀತವಾಗಿ ನಿರ್ಣಯ ಕೈಗೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts