More

    ಅಧಿಕಾರಿಗಳು ಮಾಡುತ್ತಿದ್ದಾರೆ ಪತ್ತೇದಾರಿ ಕೆಲಸ!

    ವಿಜಯವಾಣಿ ವಿಶೇಷ ಕಾರವಾರ

    ಕರೊನಾ ಜಿಲ್ಲೆಯಲ್ಲಿ ದಿನೇ ದಿನೆ ವ್ಯಾಪಿಸುತ್ತಿದ್ದಂತೆ ಸೋಂಕಿತರ ಸಂಪರ್ಕಕ್ಕೆ ಬಂದ ಶಂಕಿತರನ್ನು ಹುಡುಕುವ ನಿಟ್ಟಿನಲ್ಲಿ ಆಡಳಿತ ದೊಡ್ಡ ಸವಾಲು ಎದುರಿಸುತ್ತಿದೆ. ಮೊದಲೆಲ್ಲ ಹೊರ ದೇಶದಿಂದ ಅಥವಾ ಹೊರ ರಾಜ್ಯದಿಂದ ಬಂದು ಕ್ವಾರಂಟೈನ್​ನಲ್ಲಿದ್ದವರಲ್ಲಿ ಕೋವಿಡ್ ಕಾಣಿಸುತ್ತಿತ್ತು. ಅವರ ಸಂಪರ್ಕಕ್ಕೆ ಕೆಲವೇ ಕೆಲವರು ಬರುತ್ತಿದ್ದು, ಹುಡುಕುವುದು ಸುಲಭವಾಗಿತ್ತು. ಈಗ ಸಾದಾ ಜ್ವರ ಕಾಣಿಸಿಕೊಂಡವರಿಗೂ ಕರೊನಾ ಪಾಸಿಟಿವ್ ಬರುತ್ತಿದೆ. ಇದರಿಂದ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರನ್ನು ಹಾಗೂ ಸೋಂಕಿನ ಮೂಲ ಹುಡುಕುವುದು ದಿನ ಹೋದಂತೆ ಕ್ಲಿಷ್ಟವಾಗುತ್ತಿದೆ. ಅಧಿಕಾರಿಗಳು ಡಿಟೆಕ್ಟಿವ್ ಮಾದರಿಯಲ್ಲಿ ತನಿಖೆ ನಡೆಸಬೇಕಾದ ಪರಿಸ್ಥಿತಿ ಬಂದಿದೆ.

    ಮೊಬೈಲ್​ಫೋನ್ ಟ್ರೇಸಿಂಗ್: ಸಾಮಾನ್ಯವಾಗಿ ಆರೋಗ್ಯ ಇಲಾಖೆಯ ತಂಡ ಮೊದಲು ಸೋಂಕಿತರಿಂದ ಕಳೆದ 14 ದಿನಗಳ ಓಡಾಟದ ಮಾಹಿತಿ ಪಡೆಯುತ್ತದೆ. ಆತ ಸತ್ಯ ಹೇಳಿದನೇ ಇಲ್ಲವೆ ಎಂಬುದನ್ನು ತಿಳಿಯಲು ಅಕ್ಕಪಕ್ಕದವರಿಂದ, ಮಾಹಿತಿ ದೃಢೀಕರಿಸಲಾಗುತ್ತದೆ. ನಂತರವೂ ಅನುಮಾನವಿದ್ದರೆ ಪೊಲೀಸರ ಸಹಾಯದಿಂದ ಸೋಂಕಿತರ ಮೊಬೈಲ್ ನೆಟ್​ವರ್ಕ್ ಟ್ರೇಸ್ ಮಾಡಲಾಗುತ್ತದೆ. ನಂತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತದೆ. ಇದೇ ಮಾದರಿಯಲ್ಲಿ ತಂಡ ಅಂಕೋಲಾದ ಸೋಂಕಿತನ ಸೋಂಕಿನ ಮೂಲ ಹುಡುಕುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಕ್ಕೆ ಇಲಾಖೆಯಿಂದ ಅನುಮೋದಿತ ಯಾವುದೇ ಕಾರ್ಯವಿಧಾನವಿಲ್ಲ. ಆದರೆ, ತಂಡ ಎಡವಿ ಒಬ್ಬ ಶಂಕಿತನನ್ನು ಗುರುತಿಸುವುದನ್ನು ಬಿಟ್ಟರೂ ಆತ ಕೆಲವೇ ದಿನದಲ್ಲಿ ಹತ್ತಾರು ಜನರಿಗೆ ಸೋಂಕು ಹರಡಬಲ್ಲ ಸೂಪರ್ ಸ್ಪೆಡ್ಡರ್ ಆಗುವುದರಲ್ಲಿ ಸಂಶಯವಿಲ್ಲ.

    ಹೇಗಿರುತ್ತದೆ ಸಂಪರ್ಕ ಹುಡುಕುವ ಕಾರ್ಯ?: ಲ್ಯಾಬ್​ನಿಂದ ಪ್ರತಿ ದಿನ ಸೋಂಕಿತರ ಮಾಹಿತಿ ಅವರ ವಿಳಾಸ, ಮೊಬೈಲ್​ಫೋನ್ ಸಂಖ್ಯೆ ಇತ್ಯಾದಿ ಪ್ರತಿ ದಿನ ಬೆಳಗ್ಗೆ ಜಿಲ್ಲಾ ಸರ್ವೆಕ್ಷಣಾ ವಿಭಾಗಕ್ಕೆ ಬರುತ್ತದೆ. ಅಲ್ಲಿಂದ ಎಲ್ಲ ತಾಲೂಕು ಆರೋಗ್ಯಾಧಿಕಾರಿಗಳಿಗೆ ರವಾನೆಯಾಗುತ್ತದೆ. ನಂತರ ಇಲಾಖೆ ಅಧಿಕಾರಿಗಳ ಟ್ರೇಸಿಂಗ್ ಕಾರ್ಯ ಶುರುವಾಗುತ್ತದೆ. ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ… ಹೀಗೆ ವಿವಿಧ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ಸೋಂಕಿನ ಮೂಲ ಪತ್ತೆ ಹಚ್ಚಿ, ವೈರಸ್ ಚೈನ್ ತುಂಡು ಮಾಡುವ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಜಿಲ್ಲಾ ಸರ್ವೆಕ್ಷಣಾಧಿಕಾರಿ ವಿನೋದ ಭೂತೆ ನೇತೃತ್ವದಲ್ಲಿ ತಂಡವೊಂದು ಜಿಲ್ಲಾ ಮಟ್ಟದಲ್ಲಿದ್ದರೆ, ಪ್ರತಿ ತಾಲೂಕಿನಲ್ಲಿ ಸುಮಾರು 30 ಜನರ ತಂಡ ಈ ಕಾರ್ಯಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ.

    ರೋಚಕ ಅಂಶ ಬೆಳಕಿಗೆ
    ಸೋಂಕಿನ ಮೂಲ ಹುಡುಕಲು ಹೋದ ಅಧಿಕಾರಿಗಳಿಗೆ ಎಲ್ಲೂ ಬಾಯಿ ಬಿಡಲಾಗದ ಗುಟ್ಟುಗಳು ತಿಳಿದುಬರುತ್ತಿವೆ. ಪತ್ನಿಯ ಎರಡನೇ ಸಂಬಂಧ, ಸೋಂಕಿತನಿಗೆ ಇನ್ನೊಬ್ಬಳೊಂದಿಗೆ ಸಂಬಂಧ, ಮನೆಯ ಅತ್ತೆ- ಸೊಸೆ ಜಗಳ ಇಂಥ ಹಲವು ಬಾಯ್ಬಿಡಲಾಗದ ಅಂಶಗಳು ಕಾಣಿಸುತ್ತಿವೆ. ಇನ್ನು ಶಂಕಿತರಿಗೆ ತಿಳಿ ಹೇಳಿ ಅವರನ್ನು ಆಸ್ಪತ್ರೆಗೆ ಕರೆತರುವುದು ಕೆಲವು ಸಂದರ್ಭಗಳಲ್ಲಿ ಕಷ್ಟವಾಗಿಬಿಡುತ್ತದೆ. ಕೋವಿಡ್​ನಿಂದ ಮೃತರಾದವರ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡುವುದು ಅಧಿಕಾರಿಗಳಿಗೆ ದೊಡ್ಡ ಸವಾಲೇ ಆಗಿದೆ.

    ಲ್ಯಾಬ್​ನಲ್ಲಿ ಹೆಚ್ಚಿದ ಒತ್ತಡ
    ಕಳೆದ ಮೂರ್ನಾಲ್ಕು ದಿನದಿಂದ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 30 ಕ್ಕೂ ಅಧಿಕ ಕರೊನಾ ಪ್ರಕರಣಗಳು ದಾಖಲಾಗುತ್ತಿವೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕ ಸೇರಿ ಪ್ರತಿ ದಿನ 600 ಕ್ಕೂ ಅಧಿಕ ಸ್ವ್ಯಾಬ್​ಗಳು ಕಾರವಾರ ಕ್ರಿಮ್್ಸ ಲ್ಯಾಬ್​ಗೆ ಬರುತ್ತಿವೆ. ತುರ್ತು ಅಗತ್ಯ ನೋಡಿ ಪ್ರಯೋಗಾಲಯದಲ್ಲಿ ಪರೀಕ್ಷಾ ವರದಿ ನೀಡಲಾಗುತ್ತಿದೆ. 600 ರಿಂದ 800ರಷ್ಟು ಸ್ವ್ಯಾಬ್​ಗಳು ಬರುತ್ತಿವೆ. ವೈರಾಲಜಿ ವಿಭಾಗದ ಡಾ. ವೆಂಕಟೇಶ ಅವರ ನೇತೃತ್ವದಲ್ಲಿ ಲ್ಯಾಬ್​ನಲ್ಲಿ ಏಳು ವೈದ್ಯರು, ಇಬ್ಬರು ವಿಜ್ಞಾನಿಗಳು, ಏಳು ಡಾಟಾ ಎಂಟ್ರಿ ಆಪರೇಟರ್​ಗಳು, 6 ಅಟೆಂಡರ್​ಗಳು ಹಗಲೂರಾತ್ರಿ ಬಿಡುವಿಲ್ಲದೆ ಮೂರು ಶಿಫ್ಟ್​ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ದಿನದಿಂದ ದಿನಕ್ಕೆ ಗಂಟಲ ದ್ರವದ ಮಾದರಿ ಹೆಚ್ಚುತ್ತಿರುವುದರಿಂದ ಲ್ಯಾಬ್​ನ ಮೇಲೆ ಒತ್ತಡ ಹೆಚ್ಚಿದೆ.

    ಮೊದಲೆಲ್ಲ ಇಡೀ ತಂಡ ಕಾರ್ಯನಿರ್ವಹಿಸುತ್ತಿತ್ತು. ಈಗ ಸೋಂಕಿತರು, ಶಂಕಿತರ ಸಂಖ್ಯೆ ಜಾಸ್ತಿಯಾಗಿರುವುದರಿಂದ ಒಬ್ಬೊಬ್ಬರು ಒಂದೊಂದು ಕೆಲಸ ಹಂಚಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
    ಡಾ. ವಿನೋದ ಭೂತೆ ಜಿಲ್ಲಾ ಆರೋಗ್ಯ ಸರ್ವೆಕ್ಷಣಾಧಿಕಾರಿ

    ಈಗೀಗ ಜನರೇ ತಮ್ಮ ಗಂಟಲ ದ್ರವ ಮಾದರಿ ಸಂಗ್ರಹಿಸಿ ಎಂದು ಮುಂದೆ ಬರುತ್ತಿದ್ದಾರೆ. ಲ್ಯಾಬ್​ನಲ್ಲಿ ಒತ್ತಡ ಹೆಚ್ಚಿದೆ. ಇದರಿಂದ ತಕ್ಷಣ ವರದಿ ನೀಡಲು ಸಾಧ್ಯವಾಗುತ್ತಿಲ್ಲ. ವಲ್ನರೇಬಲ್ ಗ್ರುಪ್ ಹಾಗೂ ಪ್ರಾಥಮಿಕ ಸಂಪರ್ಕದವರ ಸ್ವ್ಯಾಬ್​ಗಳನ್ನು ಮೊದಲು ಪರಿಶೀಲಿಸಲಾಗುತ್ತದೆ. ಜನ ಇದನ್ನು ಅರ್ಥ ಮಾಡಿಕೊಂಡು ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ತಮ್ಮ ಓಡಾಟ, ಸಂಪರ್ಕದ ವಿವರಗಳನ್ನು ಮುಚ್ಚಿಡದೆ ಸತ್ಯ ಹೇಳಿದರೆ, ನಿಮಗೂ ಎಲ್ಲರಿಗೂ ಅನುಕೂಲ.
    ಡಾ. ಶರದ ನಾಯಕ ಡಿಎಚ್​ಒ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts