More

    ಅತಿಥಿ ಉಪನ್ಯಾಸಕರ ಪ್ರತಿಭಟನೆ

    ವೇತನ, ಇತರ ಸೌಲಭ್ಯ ಕಲ್ಪಿಸಲು ಆಗ್ರಹ

    ಹಾಸನ: ಕರೊನಾ ಲಾಕ್‌ಡೌನ್‌ನಿಂದ ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರು ಸಂಕಷ್ಟಕ್ಕೆ ಸಿಲುಕಿದ್ದು, ಶೀಘ್ರ ವೇತನ ಹಾಗೂ ಇತರ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
    ಕಳೆದ ಮೂರು ತಿಂಗಳಲ್ಲಿ ಉದ್ಯೋಗ ಭದ್ರತೆ ಇಲ್ಲದೆ, ಸಕಾಲಕ್ಕೆ ಸಂಬಳ ದೊರೆಯದೆ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಇಬ್ಬರು ಉಪನ್ಯಾಸಕರು ಪ್ರಾಣ ಕಳೆದುಕೊಂಡಿದ್ದಾರೆ. ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ದೇವದುರ್ಗ ಸೇರಿ ಇತರ ಭಾಗಗಳಲ್ಲೂ ಮಾನಸಿಕವಾಗಿ ಜಿಗುಪ್ಸೆಗೊಂಡ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಮಸ್ಯೆ ಇಷ್ಟೆಲ್ಲ ಬಿಗಡಾಯಿಸಿದರೂ ಸರ್ಕಾರ ಏನೂ ಆಗಿಲ್ಲವೆಂಬಂತೆ ವರ್ತಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಪಾಠ ಮಾಡಿಲ್ಲ ಎಂಬ ಕಾರಣದಿಂದ ಮಾರ್ಚ್‌ನಿಂದ ಇಲ್ಲಿವರೆಗಿನ ವೇತನ ಪಾವತಿಸಿಲ್ಲ. ಪದವಿ ಕಾಲೇಜುಗಳ ಕಾಯಂ ಉಪನ್ಯಾಸಕರೂ ಪಾಠ ಮಾಡಿಲ್ಲವಾದರೂ ಅವರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಸಲಾಗಿದೆ. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ಅತಿಥಿ ಉಪನ್ಯಾಸಕರ ಬಾಕಿ ವೇತನ ಬಿಡುಗಡೆಗೆ ಸೂಚಿಸಬೇಕು ಎಂದು ಆಗ್ರಹಿಸಿದರು.
    ಲಾಕ್‌ಡೌನ್ ಅವಧಿಯನ್ನು ಕರ್ತವ್ಯ ಅವಧಿಯೆಂದು ಪರಿಗಣಿಸಿ 12 ತಿಂಗಳ ವೇತನವನ್ನು ಒಂದೇ ಬಾರಿಗೆ ಕಲ್ಪಿಸಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಆತ್ಮಹತ್ಯೆ ಪ್ರಕರಣ ತನಿಖೆಗೆ ಉನ್ನತ ಮಟ್ಟದ ತಂಡ ರಚಿಸಬೇಕು ಹಾಗೂ ಪರಿಹಾರ ಕ್ರಮ ಕೈಗೊಳ್ಳಬೇಕು. 2020ನೇ ಸಾಲಿಗೆ ಅನಗತ್ಯವಾಗಿ ಸಹಾಯಕ ಪ್ರಾಧ್ಯಾಪಕರನ್ನು ಮೂಲ ಕಾಲೇಜಿನಲ್ಲಿ ಕಾರ್ಯಭಾರವಿದ್ದರೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಕಾರ್ಯಭಾರವಿಲ್ಲದ ಕಾಲೇಜುಗಳಿಗೆ ನಿಯೋಜನೆಗೊಳಿಸಿರುವ ಆದೇಶ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
    ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು. ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಕೆ.ಎನ್.ಯತೀಶ್, ಗೌರವಾಧ್ಯಕ್ಷ ಸಿ. ಶಿವಪ್ಪ, ಆನಂದ್‌ಕುಮಾರ್, ತಿಮ್ಮಪ್ಪ ಗೌಡ, ಶ್ರೀನಿವಾಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts