More

    ಅತಿಥಿ ಉಪನ್ಯಾಸಕರ ಕಾಯಂಗೆ ಒತ್ತಾಯ -ದಾವಣಗೆರೆಯಲ್ಲಿ ಪ್ರತಿಭಟನೆ

    ದಾವಣಗೆರೆ: ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಕಾಯಂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಜಯದೇವ ವೃತ್ತದವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ಅತಿಥಿ ಉಪನ್ಯಾಸಕರು ಸರ್ಕಾರ ಹಂತ ಹಂತವಾಗಿ ಉಪನ್ಯಾಸಕರ ಕಾಯಂ ಮಾಡಿಕೊಳ್ಳುವ ಮೂಲಕ ಆಧುನಿಕ ಜೀತ ಪದ್ಧತಿಗೆ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು.
    14 ಸಾವಿರದಷ್ಟು ಅತಿಥಿ ಉಪನ್ಯಾಸಕರು ಕಾಯಂ ಆಗಬಹುದು ಎಂಬ ವಿಶ್ವಾಸದಿಂದಲೇ ಹಲವಾರು ವರ್ಷದಿಂದ ಗೌರವಧನದ ಹೆಸರಿನಲ್ಲಿ ಅತಿ ಕಡಿಮೆ ವೇತನದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಹುದ್ದೆ ಕಾಯಂ ಬಗ್ಗೆ ಎಲ್ಲ ಸರ್ಕಾರಗಳು ನೀಡಿದ್ದ ಭರವಸೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲೂ ಅತಿಥಿ ಉಪನ್ಯಾಸಕರ ಕುರಿತ ಅಂಶ ಇದೆ. ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
    ಇರುವ ಅತಿಥಿ ಉಪನ್ಯಾಸಕರನ್ನೇ ಕಾಯಂ ಮಾಡ ಬೇಕು. ಯಾವುದೇ ಕಾರಣಕ್ಕೂ ತೆಗೆದುಹಾಕದೆ ಇತರೆ ರಾಜ್ಯಗಳಲ್ಲಿ ಮಾದರಿ ಅನುಸರಿಸಬೇಕು ಎಂದು ಒತ್ತಾಯಿಸಿದರು.
    ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯಲ್ಲಿ ಡಿ. 7ರಂದು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸ್ಪಂದಿಸದಿದ್ದಲ್ಲಿ ತರಗತಿ ಬಹಿಷ್ಕಾರ ಸೇರಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

    ಪ್ರತಿಭಟನೆಯಲ್ಲಿ ಡಾ.ಕೋಸಗಿ ಶ್ಯಾಮ್ ಪ್ರಸಾದ್, ಎಸ್.ಶುಭಾ, ಎಂ.ಜಗದೀಶ್, ಎಂ.ಕೆ.ಶೀತಲ್, ಯತೀಶ್, ಸುಜಾತಾ, ಸಿದ್ದೇಶಪ್ಪ, ಎಸ್.ವೆಂಕಟೇಶ್, ಬೋರೇಶ್, ಜಿ.ಬಿ.ಮಂಜುಳಾ, ಮಾನಸಾ, ಸ್ಮಿತಾ, ರವೀಂದ್ರ, ಅನಂತಾಚಾರಿ, ಡಾ.ಪ್ರವೀಣ್ ಕುಮಾರ್, ಸಂತೋಷ್ ಕುಮಾರ್, ರಾಘವೇಂದ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts