More

    ಅಡಕೆ ಬೆಳೆಗೆ ಕೋತಿಗಳ ಕಾಟ

    ಸಿದ್ದಾಪುರ: ಪ್ರಮುಖ ಆರ್ಥಿಕ ಬೆಳೆಯಾದ ಅಡಕೆಗೆ ಮಂಗನ ಕಾಟ ಶುರುವಾಗಿದೆ. ಬೆಳೆಯುತ್ತಿರುವ ಅಡಕೆ ಮಿಳ್ಳೆಗಳ ರಸ ಹೀರಿ ನಾಶಪಡಿಸುತ್ತಿರುವುದರಿಂದ ಬೆಳೆ ಉಳಿಸಿಕೊಳ್ಳುವುದಕ್ಕೆ ಹರಸಾಹಸ ಪಡಬೇಕಾಗಿದೆ.

    ಅಡಕೆ ಮರದಲ್ಲಿ ಶಿಂಗಾರ ಒಡೆದಾಗಿನಿಂದ ಅಡಕೆ ಕೊನೆ ಕೊಯ್ಲು ಮುಗಿಯುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ಮಂಗನ ಉಪಟಳವಿರುತ್ತದೆ. ಅದರಲ್ಲೂ ಮುಖ್ಯವಾಗಿ ಈಗ ಅಡಕೆ ಮಿಳ್ಳೆಯನ್ನು ಚೀಪಿ ಉದುರಿಸಿ ಹಾಕುತ್ತಿವೆ. ಜತೆಗೆ ಕೊನೆಯ ಹುಸಿಗಳನ್ನು ಹಿಸಿದು ಬಿಸಾಡುತ್ತಿವೆ. ಮಂಗಗಳನ್ನು ಓಡಿಸುವುದಕ್ಕೆ ಮಾಡಿದ ತಂತ್ರಗಾರಿಕೆಗಳೆಲ್ಲ ನಿಷ್ಪ್ರಯೋಜಕವಾಗುತ್ತಿವೆ. ‘ಹೆದರಿಸಿದರೂ ಓಡುವುದಿಲ್ಲ. ಕೆಲವೊಮ್ಮೆ ಅವುಗಳೇ ನಮ್ಮನ್ನು ಹೆದರಿಸುತ್ತವೆ’ ಎಂದು ಬೆಳೆಗಾರರು ಹತಾಶೆ ವ್ಯಕ್ತಪಡಿಸುತ್ತಾರೆ.

    ಒಂದು ಮಂಗ ನಿತ್ಯ ಅಂದಾಜು ಮೂರ್ನಾಲ್ಕು ಕೊನೆಗಳಲ್ಲಿನ ಮಿಳ್ಳೆಯ ರಸವನ್ನು ಹೀರಿ ಹಾನಿ ಮಾಡುತ್ತಿವೆ. ಇದರಿಂದ ಬೆಳೆ ಉಳಿಸಿಕೊಳ್ಳುವುದು ಹೇಗೆ ಸಾಧ್ಯ ಎಂದು ಹಲಗೇರಿ, ಸೋವಿನಕೊಪ್ಪ, ದೊಡ್ಮನೆ, ಕ್ಯಾದಗಿ, ವಾಜಗೋಡ, ನಿಲ್ಕುಂದ, ಅಣಲೇಬೈಲ್, ಹೆಗ್ಗರಣಿ, ತಂಡಾಗುಂಡಿ, ಹಾರ್ಸಿಕಟ್ಟಾ, ಬಿದ್ರಕಾನ ಮತ್ತಿತ್ತರ ಗ್ರಾ.ಪಂ. ವ್ಯಾಪ್ತಿಯ ಬೆಳೆಗಾರರು ಹೇಳುತ್ತಾರೆ.

    ಪರಿಹಾರ ಇಲ್ಲ: ಮಂಗಗಳು ಅಡಕೆ ಮಿಳ್ಳೆಗಳನ್ನು ಚೀಪಿ ಬೆಳೆ ನಾಶ ಮಾಡುತ್ತಿವೆ. ಅಡಕೆ ಬೆಳೆ ಹಾನಿಗೆ ಯಾವುದೇ ಪರಿಹಾರ ಇಲ್ಲ. ಈ ಕುರಿತು ಬೆಳೆಗಾರರು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ, ಬೆಳೆಹಾನಿಗೆ ಹೆಚ್ಚು ಪರಿಹಾರ ನೀಡುತ್ತೇವೆ ಎಂದು ಹೇಳುವ ಸ್ಥಳೀಯ ಶಾಸಕರು, ಸಂಸದರು ಅಡಕೆ ಬೆಳೆಗಾರರನ್ನು ಕಡೆಗಣಿಸಿದಂತೆ ಕಂಡು ಬರುತ್ತಿದೆ ಎನ್ನುವ ಆಕ್ಷೇಪ ಅಡಕೆ ಬೆಳೆಗಾರರದ್ದಾಗಿದೆ.

    ನಿತ್ಯ ಹತ್ತಾರು ಮಂಗಗಳು ತೋಟಕ್ಕೆ ದಾಳಿ ನಡೆಸಿ ಅಡಕೆ ಮಿಳ್ಳೆಗಳನ್ನು ನಾಶಪಡಿಸುತ್ತಿವೆ. ಅಡಕೆ ಗಿಡ ಹಾನಿ ಪಡಿಸಿದರೆ ಮಾತ್ರ ಸರ್ಕಾರ ಪರಿಹಾರ ನೀಡುತ್ತಿದೆ. ಅಡಕೆ ಮಿಳ್ಳೆ, ಬಾಳೆಗೊನೆ, ತೆಂಗಿನಕಾಯಿ ಹಾನಿಗೂ ಸರ್ಕಾರ ಪರಿಹಾರ ನೀಡಬೇಕು. ಈ ಕುರಿತು ಜನಪ್ರತಿನಿಧಿಗಳು ಬೆಳೆಗಾರರ ಪರವಾಗಿ ಸರ್ಕಾರಕ್ಕೆ ಆಗ್ರಹಿಸಬೇಕು. ಕೇವಲ ಪರಿಹಾರ ನೀಡುತ್ತೇವೆ ಎಂದು ಆಶ್ವಾಸನೆ ನೀಡುವುದಲ್ಲ.
    | ಸುಬ್ರಾಯ ಕೃಷ್ಣ ಗೌಡ ಹಾಗೂ ಧರ್ಮ ಹನುಮಂತ ಗೌಡ ಮಾದ್ಲಮನೆ

    ಮಂಗಗಳು ಅಡಕೆ ಮಿಳ್ಳೆ, ಬಾಳೆಕಾಯಿ, ತೆಂಗಿನಕಾಯಿ ಹಾನಿ ಪಡಿಸಿದರೆ ಪರಿಹಾರ ನೀಡುವುದಕ್ಕೆ ಸರ್ಕಾರದಿಂದ ಆದೇಶ ಇಲ್ಲ. ಗಿಡಗಳನ್ನು ಹಾನಿಪಡಿಸಿದರೆ ಪರಿಹಾರ ನೀಡಲಾಗುತ್ತದೆ. ಬೆಳೆ ಹಾನಿ ಕುರಿತು ಪರಿಹಾರ ನೀಡುವಂತೆ ಸರ್ಕಾರ ಆದೇಶ ನೀಡಿದರೆ ಅರಣ್ಯ ಇಲಾಖೆ ಅದನ್ನು ಪಾಲಿಸುತ್ತದೆ.
    | ಅಜೀಜ್ ಶೇಖ್, ಎಸಿಎಫ್ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts