More

    ಅಗಲಿದ ಆರಕ್ಷರಿಗೆ ಭಾವಪೂರ್ಣ ನಮನ, ಬ್ಯಾಡರಹಳ್ಳಿ ಡಿಎಆರ್ ಮೈದಾನದಲ್ಲಿ ಪೊಲೀಸ್ ಸಂಸ್ಮರಣಾ ದಿನಾಚರಣೆ

    ಬೆಂಗಳೂರು ಗ್ರಾಮಾಂತರ: ಪೊಲೀಸರ ಶಿಸ್ತುಬದ್ಧ ಪರೇಡ್, ಕಿವಿಗಡಕಚ್ಚುವ ಕುಶಾಲತೋಪುಗಳ ಸದ್ದು, ಗಗನಕ್ಕೇರಿ ಇಳಿದ ಪೊಲೀಸ್ ಧ್ವಜ, ಪೊಲೀಸ್ ವರಿಷ್ಠಾಧಿಕಾರಿಗಳ ಸೆಲ್ಯೂಟ್, ತಲೆಭಾಗಿ ಶ್ರದ್ಧಾಂಜಲಿ ಅರ್ಪಣೆಯಂತಹ ಭಾವಪೂರ್ಣ ವಾತಾವರಣಕ್ಕೆ ಗುರುವಾರ ಬ್ಯಾಡರಹಳ್ಳಿಯ ಡಿಎಆರ್ ಕವಾಯತು ಮೈದಾನ ಸಾಕ್ಷಿಯಾಯಿತು.

    ಪೊಲೀಸ್ ಸಂಸ್ಕರಣಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ, ಪೊಲೀಸ್ ಕುಟುಂಬದ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡು ಅಗಲಿದ ಆರಕ್ಷಕರಿಗೆ ಗೌರವ ನಮನ ಸಲ್ಲಿಸಿದರು. ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಹಾಗೂ ಅಪರ ಪೊಲೀಸ್ ವರಿಷ್ಠಾಧಿಕಾರಿ ಕೆ.ಲಕ್ಷ್ಮೀಗಣೇಶ್ ಹಾಗೂ ಜಿಲ್ಲೆಯ ನಾಲ್ಕೂ ತಾಲೂಕುಗಳ ಹಿರಿಯ ಪೊಲೀಸ್ ಅಧಿಕಾರಿಗಳು ಹುತಾತ್ಮರಿಗೆ ಗೌರವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

    ಸಿಡಿದ ಕುಶಾಲತೋಪು: ರಾಜ್ಯ ಹಾಗೂ ದೇಶದ ಹುತಾತ್ಮ ಪೊಲೀಸರ ಸ್ಮರಣಾರ್ಥ ಪೊಲೀಸ್ ಪಡೆ ಕುಶಾಲತೋಪು ಸಿಡಿಸಿ ಗೌರವ ಅರ್ಪಿಸಿತು. ಪರೇಡ್ ಕಮಾಂಡರ್ ಭಾನುಪ್ರಕಾಶ್ ಪೊಲೀಸ್ ಪಡೆಯ ಪರೇಡ್ ನಡೆಸಿ ಗಮನ ಸೆಳೆದರು. ಕಾರ್ಯಕ್ರಮದ ಆರಂಭದಲ್ಲಿ ಧ್ವಜಕಂಭಕ್ಕೆ ಏರಿಸಿದ್ದ ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.

    ಎಸ್‌ಪಿ ಅವರಿಂದ ಹುತಾತ್ಮರ ಸ್ಮರಣೆ: ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಅಗಲಿದ 340 ಪೊಲೀಸರ ಹೆಸರನ್ನು ಓದುವ ಮೂಲಕ ಹುತಾತ್ಮರನ್ನು ಸ್ಮರಿಸಿದರು. ಪೊಲೀಸರ ಕರ್ತವ್ಯನಿಷ್ಠೆ, ಎದುರಿಸುವ ಸವಾಲುಗಳು, ಸಾರ್ವಜನಿಕರೊಂದಿಗಿನ ಒಡನಾಟ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ವಹಿಸುವ ಪಾತ್ರ, ಕುಟುಂಬದೊಂದಿಗೆ ಸಮಯ ಕಳೆಯಲಾಗಂದಥ ಕರ್ತವ್ಯದ ಒತ್ತಡ ಸೇರಿ ಇಲಾಖೆಯ ಮತ್ತಿತರ ವಿಷಯಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು. ಅಷ್ಟೂ ಹೆಸರುಗಳನ್ನು ಉಚ್ಚರಿಸುವವರೆಗೆ ಇಡೀ ಸಭಾಂಗಣ ಮೌನಕ್ಕೆ ಜಾರಿತ್ತು.

    ಇದೊಂದು ಕರಾಳ ದಿನ: ಇದೊಂದು ಕರಾಳ ದಿನವೆಂದೇ ಮಾತು ಆರಂಭಿಸಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಪೊಲೀಸ್ ಸಂಸ್ಮರಣಾ ದಿನಾಚರಣೆ ಇತಿಹಾಸ ಬಿಚ್ಚಿಟ್ಟರು. 1959ರ ಅಕ್ಟೋಬರ್ 21ರಂದು ಲಡಾಕ್‌ನಲ್ಲಿ ಸುಮಾರು 20 ಪೊಲೀಸರ ಮೇಲೆ ಹಲ್ಲೆ ನಡೆಯಿತು. ಈ ವೇಳೆ 10 ಪೊಲೀಸರು ಸಾವನ್ನಪ್ಪಿದರು. ಎಷ್ಟೋ ದಿನಗಳ ಬಳಿಕ ಹುತಾತ್ಮ ಪೊಲೀಸರ ಪಾರ್ಥೀವ ಶರೀರ ಹಸ್ತಾಂತರವಾಯಿತು. ಅಂದು ಹುತಾತ್ಮರಾದ ಪೊಲೀಸರ ನೆನಪಿನಾರ್ಥ ಅಂದಿನಿಂದ ಪೊಲೀಸ್ ಸಂಸ್ಕಾ ರಣಾ ದಿನ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

    ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜೀವವನ್ನೇ ಪಣಕ್ಕಿಡುವ ಪೊಲೀಸರ ಸಾವಿಗೆ ಬೆಲೆಕಟ್ಟಲಾಗದು. ಈ ನಿಟ್ಟಿನಲ್ಲಿ ಪೊಲೀಸ್ ಸಂಸ್ಕರಣಾ ದಿನ ಅರ್ಥಪೂರ್ಣವಾಗಿದೆ ಎಂದರು. 2018ರಲ್ಲಿ ದೇಹಲಿಯಲ್ಲಿ ಹುತಾತ್ಮ ಪೊಲೀಸರ ಸ್ಮರಣಾರ್ಥ ಮ್ಯೂಸಿಯಂ ಆರಂಭಿಸಲಾಯಿತು. ಆ ಮೂಲಕ ಅಗಲಿದ ಚೇತನಕ್ಕೆ ಭಾರತ ಸರ್ಕಾರ ಗೌರವ ಅರ್ಪಣೆ ಮಾಡುತ್ತಿದೆ. 1947ರಿಂದ ಇದುವರೆಗೆ ದೇಶದಲ್ಲಿ 34844 ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ನೆನಪು ಮಾಡಿಕೊಂಡರು.

    ಡಿಸಿ ಕಾರ್ಯಕ್ಕೆ ಖಾಕಿ ಮೆಚ್ಚುಗೆ: ಕರೊನಾ ಸೋಂಕು ತೀವ್ರಗೊಂಡ ಸಮಯದಲ್ಲಿ ವ್ಯಾಕ್ಸಿನ್ ಕೊರತೆ ಎದುರಾಗಿತ್ತು. ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಖುದ್ದು ಆಸಕ್ತಿ ವಹಿಸಿ ಗ್ರಾಮಾಂತರ ಜಿಲ್ಲೆಯ ಸಾವಿರಾರು ಪೊಲೀಸ್ ಕುಟುಂಬಕ್ಕೆ ಕರೊನಾ ವ್ಯಾಕ್ಸಿನ್ ಕೊಡಿಸುವಲ್ಲಿ ಶ್ರಮಿಸಿದರು ಎಂದು ದೊಡ್ಡಬಳ್ಳಾಪುರ ಇನ್‌ಸ್ಪೆಕ್ಟರ್ ನವೀನ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

    ಅನುಕಂಪ ನೌಕರಿ ಶೀಘ್ರ ಸಿಗಬೇಕು: ಸೇವಾನಿರತ ಪೊಲೀಸರು ಮೃತಪಟ್ಟರೆ ಕೂಡಲೇ ಅವರ ಸಂಬಂಧಿಕರಿಗೆ ಅನುಕಂಪದ ನೌಕರಿ ಸಿಗುವಂತೆ ಸಂಬಂಧಪಟ್ಟವರು ತಕ್ಷಣ ಕ್ರಮವಹಿಸಬೇಕು, ಈ ಮೂಲಕ ಅಗಲಿದ ಆರಕ್ಷಕರ ಕುಟುಂಬದ ನೆರವಿಗೆ ನಿಲ್ಲಬೇಕು ಎಂದು ಡಿಸಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts