More

    ಅಕ್ರಮ ಮರಳು ಸಾಗಣೆ ಅವ್ಯಾಹತ

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ತಾಲೂಕಿನ ಕೋಟಿಹಾಳ, ಮುಷ್ಟೂರು, ನಿಟ್ಟೂರು ಸೇರಿ ವಿವಿಧ ಗ್ರಾಮಗಳ ಬಳಿ ತುಂಗಭದ್ರಾ ಹಾಗೂ ಕುಮುದ್ವತಿ ನದಿಯಲ್ಲಿ ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಮರಳು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ.

    ಅಕ್ರಮ ಮರಳು ದಂಧೆಯನ್ನು ತಡೆಗಟ್ಟಲು ದಾವಣಗೆರೆ ಐಜಿ ಸ್ಕಾ್ವಡ್​ನವರು ಬಂದು ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಹೊರತು ಈ ಗ್ರಾಮಗಳ ವ್ಯಾಪ್ತಿಯ ಹಲಗೇರಿ ಠಾಣೆ ಪೊಲೀಸರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಇದಕ್ಕೆ ಸಾಕ್ಷಿಯಂಬಂತೆ ಮುಷ್ಟೂರು ಗ್ರಾಮದ ಬಳಿ ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾಗ ಐಜಿ ಸ್ಕಾ್ವಡ್​ನವರು ಮರಳು ಸಮೇತ ಟ್ರ್ಯಾಕ್ಟರ್ ವಶಕ್ಕೆ ಪಡೆದು, ಹಲಗೇರಿ ಠಾಣೆಗೆ ಒಪ್ಪಿಸಿದ್ದಾರೆ.

    ನಿಷೇಧವಿದ್ದರೂ ಟ್ರ್ಯಾಕ್ಟರ್ ಬಳಕೆ: ಕೃಷಿ ಸಾಧನವಾಗಿರುವ ಟ್ರ್ಯಾಕ್ಟರ್ ಅನ್ನು ಮರಳು ಸಾಗಾಟಕ್ಕೆ ಬಳಸಬಾರದು ಎಂದು ಜಿಲ್ಲಾಡಳಿತ ಆದೇಶಿಸಿದೆ. ಜತೆಗೆ, ಪರಿಸರ ಹಾನಿಯಾಗುವ ದೃಷ್ಟಿಯಿಂದ ಹಿಟಾಚಿಯಿಂದ ನದಿಯಲ್ಲಿ ಮರಳು ತೆಗೆಯಬಾರದು ಎಂದು ಸರ್ಕಾರ ಸೂಚಿಸಿದೆ. ಆದರೆ, ಕೋಟಿಹಾಳ, ಮುಸ್ಟೂರು ಭಾಗದಲ್ಲಿ ಟ್ರ್ಯಾಕ್ಟರ್​ಗಳನ್ನು ತೆಗೆದುಕೊಂಡು ರಾತ್ರೋರಾತ್ರಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಹಲಗೇರಿ ಠಾಣೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಕೃಷಿಗೆ ಟ್ರ್ಯಾಕ್ಟರ್ ಸಿಗುತ್ತಿಲ್ಲ: ಇದೀಗ ಮಳೆಗಾಲ ಆರಂಭವಾಗಿದೆ. ಭತ್ತದ ಗದ್ದೆ ಹದಗೊಳಿಸಬೇಕಿದೆ. ಜಮೀನು ಹಸನು ಮಾಡಲು ಹಾಗೂ ಇತರ ಕೃಷಿ ಕಾರ್ಯಗಳಿಗೆ ಟ್ರ್ಯಾಕ್ಟರ್​ಗಳು ಬೇಕಿವೆ. ಆದರೆ, ಈಗ ಬಾಡಿಗೆಗೆ ಟ್ರ್ಯಾಕ್ಟರ್ ಕೇಳಲು ಹೋದರೆ, ‘ಎಲ್ಲರೂ ಮರಳು ಹೊಡೆಯಲು ಹೋಗುತ್ತಿದ್ದೇವೆ. ಮರಳಿನಲ್ಲಿ ದಿನಕ್ಕೆ ಸಾವಿರಾರು ರೂ. ದುಡಿಯುವ ಸಮಯದಲ್ಲಿ ಜಮೀನಿನ ಕೆಲಸಕ್ಕೆ ಯಾರು ಬರುತ್ತಾರೆ’ ಎಂದು ಟ್ರ್ಯಾಕ್ಟರ್​ಗಳ ಮಾಲೀಕರು ಹೇಳಿ ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ.

    ಅಕ್ರಮ ತಡೆಯಿರಿ: ಟ್ರ್ಯಾಕ್ಟರ್, ಲಾರಿ ಮೂಲಕ ಅಕ್ರಮವಾಗಿ ಮರಳು ಸಾಗಿಸುತ್ತಿರುವುದನ್ನು ತಡೆಯುವ ಕುರಿತು ಈಗಾಗಲೇ ಪೊಲೀಸರ, ಕಂದಾಯ ಅಧಿಕಾರಿಗಳ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ. ಆದರೆ, ಯಾವೊಬ್ಬ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿಲ್ಲ. ಅಕ್ರಮವಾಗಿ ಮರಳು ಸಾಗಿಸುವ ಸಮಯದಲ್ಲಿ ಮಾಹಿತಿ ನೀಡಿದರೂ ಪೊಲೀಸರು ಬರುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಜನತೆಯ ಆಗ್ರಹವಾಗಿದೆ.

    ಕೋಟಿಹಾಳ ಗ್ರಾಮ ಸೇರಿ ಈ ಭಾಗದ ವಿವಿಧ ಗ್ರಾಮಗಳ ಬಳಿ ತುಂಗಭದ್ರಾ ಹಾಗೂ ಕುಮುದ್ವತಿ ನದಿ ಪಾತ್ರದಲ್ಲಿ ಹಿಟಾಚಿ, ಟ್ರ್ಯಾಕ್ಟರ್, ಲಾರಿಗಳ ಮೂಲಕ ನಿತ್ಯವೂ ರಾತ್ರಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ. ಈ ಕುರಿತು ಹಲಗೇರಿ ಠಾಣೆ ಪೊಲೀಸರಿಗೆ, ಜಿಲ್ಲಾಧಿಕಾರಿ ದೂರು ನೀಡಿದ್ದೇವೆ. ಆದರೆ, ಈವರೆಗೂ ಯಾರೊಬ್ಬರೂ ಅಕ್ರಮ ಮರಳುಗಾರಿಕೆ ದಂಧೆ ತಡೆದಿಲ್ಲ. ಅಧಿಕಾರಿಗಳಿಗೆ ದೂರು ಸಲ್ಲಿಸಿ ಸಾಕಾಗಿ ಹೋಗಿದೆ. ಆದ್ದರಿಂದ ನಾವೇ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

    | ಗಿರೀಶ ಮಾಗನೂರ, ಕೋಟಿಹಾಳ ಗ್ರಾಮದ ಮುಖಂಡ

    ಹಲಗೇರಿ ಠಾಣೆ ವ್ಯಾಪ್ತಿಯ ಗ್ರಾಮಸ್ಥರು ಮರಳಿನ ಅಭಾವ ಎಂದು ಡಿಸಿಗೆ ಹಾಗೂ ಶಾಸಕರಿಗೆ ಮನವಿ ಮಾಡಿದ್ದಾರೆ. ಎಲ್ಲರೂ ಅಕ್ರಮವಾಗಿ ಮರಳು ಹೊಡೆಯುತ್ತಿದ್ದಾರೆ. ಅವರ್ಯಾರು ಪ್ರಾಮಾಣಿಕವಾಗಿಲ್ಲ. ಸ್ಥಳೀಯರು ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾಗ ಕೂಡಲೇ ನಮಗೆ ಮಾಹಿತಿ ನೀಡಿದರೆ, ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಎಚ್ಚೆತ್ತುಕೊಳ್ಳಲು ಹಲಗೇರಿ ಠಾಣೆಯವರಿಗೆ ಸೂಚಿಸುತ್ತೇನೆ.

    | ಕೆ.ಜೆ. ದೇವರಾಜ್, ಹಾವೇರಿ ಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts