More

    ಅಕ್ರಮವಾಗಿ ನಡೆಸುವ ಎಲ್ಲಾ ವೆಚ್ಚಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಿ:ವೆಚ್ಚ ವೀಕ್ಷಕರು

    ಹಾಸನ: ಹಾಸನ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸಂಪೂರ್ಣ ಖರ್ಚುವೆಚ್ಚಗಳನ್ನು ನಿಯಮಾನುಸಾರವೇ ಮಾಡಬೇಕು. ಅಕ್ರಮವಾಗಿ ನಡೆಸುವ ಎಲ್ಲಾ ವೆಚ್ಚಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗದ ವೆಚ್ಚ ವೀಕ್ಷಕರಾದ ವಿಕಾಸ್ ಸಿಂಗ್ ಭಗ್ರಿ ಹಾಗೂ ವೈಭವ್ ಅಗರವಾಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ನೋಡಲ್ ಅಧಿಕಾರಿಗಳು ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ವಿವಿಧ ಚುನಾವಣಾ ತಂಡಗಳ ಮುಖ್ಯಸ್ಥರ ಸಭೆ ನಡೆಸಿ ಅವರು ಮಾತನಾಡಿ ಅವರು, ಚುನಾವಣಾ ಸಂದರ್ಭದಲ್ಲಿ ಪ್ರತಿಯೊಂದು ಖರ್ಚುವೆಚ್ಚಗಳೂ ಚುನಾವಣಾ ಆಯೋಗದ ನಿಯಮಾನುಸಾರವೇ ನಡೆಯಬೇಕು. ಪ್ರತಿಯೊಬ್ಬ ಅಭ್ಯರ್ಥಿಯ ಬ್ಯಾಂಕ್ ಖಾತೆಯ ಮೂಲಕವೇ ಪಾವತಿಯಾಗಬೇಕು. ಯಾವುದೇ ಕಾರಣಕ್ಕೂ ಅಕ್ರಮವಾಗಿ ಪಾವತಿ ಮತ್ತು ವೆಚ್ಚ ಮಾಡಲು ಅವಕಾಶ ನೀಡಬಾರದು. ಚುನಾವಣಾ ಆಯೋಗದ ಕೈಪಿಡಿಯನುಸಾರ ಎಲ್ಲ ತಪಾಸಣಾ ತಂಡಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
    ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಹಣಕಾಸು ವ್ಯವಹಾರಗಳ ಮೇಲೆ ನಿಗಾ ಇಡಬೇಕು. ಸಂಶಯಾಸ್ಪದ ವ್ಯವಹಾರ ಕಂಡುಬಂದಲ್ಲಿ ತಕ್ಷಣವೇ ಮಾಹಿತಿ ನೀಡಬೇಕು. ಆದಾಯ ತೆರಿಗೆ ಇಲಾಖೆಯೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸಬೇಕು ಎಂದು ವೆಚ್ಚ ವೀಕ್ಷಕ ವಿಕಾಸ್ ಸಿಂಗ್ ಭಗ್ರಿ ತಿಳಿಸಿದರು.
    ವಿವಿಧ ಚುನಾವಣಾ ಸಭೆ, ಸಮಾರಂಭಗಳ ಸಂಪೂರ್ಣ ಚಿತ್ರೀಕರಣ ನಡೆಸಿ, ವೆಚ್ಚ ಲೆಕ್ಕ ನಿರ್ವಹಿಸಬೇಕು. ಅನುಮತಿ ಪಡೆದುಕೊಂಡಿರುವಷ್ಟೇ ವ್ಯವಸ್ಥೆಗಳು ಇರುವ ಬಗ್ಗೆ ಪರಿಶೀಲಿಸಬೇಕು. ಯಾವುದೇ ಚುನಾವಣಾ ಸಭೆಗಳಲ್ಲಿ ಅಭ್ಯರ್ಥಿಯ ಫೋಟೋ ಕಂಡುಬಂದರೆ ಅಥವಾ ಭಾಷಣಗಳಲ್ಲಿ ಹೆಸರು ಪ್ರಸ್ತಾಪವಾದರೆ, ಆ ಸಭೆಯ ಸಂಪೂರ್ಣ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ತೆಗೆದುಕೊಳ್ಳಲು ಅವರು ನಿರ್ದೇಶಿಸಿದರು.
    ವಾಹನಗಳಲ್ಲಿ ಯಾವುದೇ ರಾಜಕೀಯ ನಾಯಕರ ಅಥವಾ ಅಭ್ಯರ್ಥಿಯ ಫೋಟೋ ಅಥವಾ ಚಿಹ್ನೆ ಪ್ರದರ್ಶಿಸಲು ಅನುಮತಿ ಅಗತ್ಯ. ಇಲ್ಲದಿದ್ದರೆ ಅಂತಹ ವಾಹನ ಮಾಲಕರ ವಿರುದ್ಧ ಕೇಸು ದಾಖಲಿಸುವಂತೆ ವೀಕ್ಷಕರು ಸೂಚಿಸಿದರು. ಮದ್ಯ ಮಾರಾಟ ಅಂಗಡಿಗಳಲ್ಲಿ ಮಾರಾಟದಲ್ಲಿ ಒಮ್ಮಲೇ ಏರಿಕೆಯಾಗುವ ವ್ಯವಹಾರದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ನಿಗಾ ಇಡಬೇಕು. ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ತಡೆಗಟ್ಟಲು ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ನಿರಂತರ ತಪಾಸಣೆ ನಡೆಸಬೇಕು. ಚೆಕ್‌ಪೋಸ್ಟ್‌ಗಳು ಒಂದೇ ಸ್ಥಳದಲ್ಲಿ ಕಾರ್ಯಾಚರಿಸುವ ಬದಲು ನಿರಂತರವಾಗಿ ಸ್ಥಳ ಬದಲಾಯಿಸಿ ತಪಾಸಣೆ ನಡೆಸಲು ವೀಕ್ಷಕರು ತಿಳಿಸಿದರು.
    ರೈಲು ಟಿಕೇಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾದಿರಿಸುವ ಪ್ರಕರಣಗಳ ಮೇಲೆ ನಿಗಾ ಇಡಬೇಕು. ರೈಲುಗಳಲ್ಲಿ ಸಾಗಾಟ ಮಾಡುವ ಸರಕುಗಳ ದಾಖಲೆ ಸರಿಯಾಗಿ ಪರಿಶೀಲಿಸುವಂತೆ ಅವರು ರೈಲ್ವೇ ಅಧಿಕಾರಿಗಳಿಗೆ ಸೂಚಿಸಿದರು. ಪೆಟ್ರೋಲ್ ಪಂಪ್‌ಗಳಲ್ಲಿ ಕೂಪನ್ ನೀಡಿ ಪೆಟ್ರೋಲ್,ಡೀಸೆಲ್ ಹಾಕಿಸುವ ಪ್ರಕರಣಗಳ ಸಾಧ್ಯತೆ ಇದ್ದು, ಅಂತಹ ವ್ಯವಹಾರಗಳ ಮೇಲೆ ನಿರಂತರವಾಗಿ ನಿಗಾ ಇಡಬೇಕು ಎಂದರು.
    ಸಭೆಯಲ್ಲಿ ವೆಚ್ಚ ವೀಕ್ಷಕರು ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ತಪಾಸಣಾ ತಂಡಗಳ ಕಾರ್ಯಾಚರಣೆಗಳ ಮಾಹಿತಿ ಪಡೆದರು.
    ಜಿಲ್ಲಾ ಚುನಾವಣಾಧಿಕಾರಿ ಸಿ.ಸತ್ಯಭಾಮಾ ಅವರು ಕೇಂದ್ರ ವೀಕ್ಷಕರಿಗೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಚುನಾವಣಾ ಸಿದ್ಧತೆಗಳ ಮಾಹಿತಿ ನೀಡಿದರು.
    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಆದಾಯ ತೆರಿಗೆ ಇಲಾಖೆ ಅಧಿಕಾರಿ ದರ್ಶನ್ ಕುಮಾರ್, ಅಬಕಾರಿ ಅಧಿಕಾರಿ ಮೋತಿಲಾಲ್, ಲೀಡ್ ಬ್ಯಾಂಕ್ ಮೆನೇಜರ್ ಗಾಯತ್ರಿ ದೇವಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts