More

    ಅಕ್ಕಾ ಬಸ್‌ನಾಗ ಫ್ರೀ ಓಡಾಡ್ಲಿಕ್‌ ಹತ್ತೀರಿ…

    ಬಾಗಲಕೋಟೆ: ಅಕ್ಕಾ ಬಸ್‌ನಾಗ ಫ್ರೀ ಓಡಾಡ್ಲಿಕ್‌ ಹತ್ತೀರಿ… ಅವ್ವಾ ನಿಮ್‌ ಬ್ಯಾಂಕ್‌ ಅಕೌಂಟ್‌ಗೆ ತಿಂಗ್ಳಾ ತಿಂಗ್ಳಾ ಎರಡು ಸಾವಿರ ರೂ. ಜಮಾ ಆಗ್ತದಾ…

    ಪ್ರಚಾರಕ್ಕೆ ಹೋದ ಕಡೆ ತಮ್ಮನ್ನು ಮುತ್ತಿಕೊಳ್ಳುವ ಮಹಿಳೆಯರನ್ನು ಹೀಗೆ ಪ್ರಶ್ನೆ ಮಾಡುವ ಮೂಲಕ ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಮನವರಿಕೆ ಮಾಡಿಕೊಡುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು  ಇಂಥ ಇನ್ನೂ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿ ಎಂದು  ಮನವಿ ಮಾಡುತ್ತಿದ್ದಾರೆ.

    ಬರಗಾಲದ ವೇಳೆ ಕರ್ನಾಟಕದ ನೆರವಿಗೆ ಬಾರದಿರುವುದು, ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದ ಬಗ್ಗೆ ಸ್ವಲ್ಪವೂ ಮಮಕಾರ ಹೊಂದದಿರುವುದು, ರೈತರ ಸಾಲ ಮನ್ನಾ ಬೇಡಿಕೆಗೆ ಸ್ಪಂದಿಸದೆ ಉದ್ಯಮಿಗಳ ೧೪ ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿರುವುದು… ಇಂಥ ಹಲವಾರು ವಿಷಯಗಳನ್ನು ಮನವರಿಕೆ ಮಾಡಿಕೊಡುತ್ತಲೇ ಯಾವ ಕಾರಣಕ್ಕೆ ಕಾಂಗ್ರೆಸ್‌ಗೆ ಮತ ಹಾಕಬೇಕು ಎಂದು ಹೇಳುತ್ತಿದ್ದಾರೆ.

    ಭಾನುವಾರ ಬೀಳಗಿ ವಿಧಾನಸಭಾ ಕ್ಷೇತ್ರದ ಫಕೀರಬೂದಿಹಾಳ, ಕೈನಕಟ್ಟಿ ಸೇರಿದಂತೆ ಹಲವೆಡೆ ಮತಯಾಚನೆ ಮಾಡಿ ಮಾತನಾಡಿದ ಅವರು, ಕ್ಷೇತ್ರದ ಶಾಸಕ ಜಿ.ಟಿ. ಪಾಟೀಲರಂತೆ ದಣಿವರಿಯದೆ ನಿಮ್ಮ ಕೆಲಸ ಮಾಡುತ್ತೇನೆ. ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

    ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ರೈತರ ಬದುಕು ಹಸನಾಗಿಲ್ಲ. ಆದಾಯ ಇದ್ದಷ್ಟೇ ಇದೆ. ಆದರೆ ವೆಚ್ಚ ಹೆಚ್ಚಾಗುತ್ತಿದೆ. ಕೃಷಿ ಉಪಕರಣಗಳು, ರಸಗೊಬ್ಬರ, ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು ಎಂಬ ಬೇಡಿಕೆ ಇದುವರೆಗೆ ಈಡೇರಿಲ್ಲ. ಬೆಂಬಲ ಬೆಲೆ ನಿಗದಿ ಬೇಡಿಕೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಅನ್ನದಾತನ ಬದುಕು ಅತಂತ್ರವಾಗಿದೆ. ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತ ನೆಮ್ಮದಿಯ ಬದುಕು ಸಾಗಿಸುವ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದರು.

    ಹಟ್ಟಿ ಗೋಲ್ಡ್‌ ಮೈನ್ಸ್‌ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ರದ್ದುಪಡಿಸುವ ಹುನ್ನಾರ ಬಿಜೆಪಿಯಿಂದ ನಡೆದಿದೆ. ಮತದಾರರು ಇದಕ್ಕೆ ಅವಕಾಶ ಕೊಡಬಾರದು. ಕೇಂದ್ರದಲ್ಲೂ ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ತಂದರೆ ಮತ್ತಷ್ಟು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

    ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ೨೫ ಲಕ್ಷ ರೂ. ಆರೋಗ್ಯ ವಿಮೆ ಯೋಜನೆ, ಮಹಿಳೆಯರ ಬ್ಯಾಂಕ್‌ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂ. ಜಮಾ ಸೇರಿದಂತೆ ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದಂತೆ ಕೇಂದ್ರವೂ ಕೂಡ ನುಡಿದಂತೆ ನಡೆದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿದೆ ಎಂದರು.

    ಬೀಳಗಿ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವ ಕನಸು ನನ್ನದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಕ್ಷೇತ್ರದ ಜನ ಕೈ ಹಿಡಿದಿದ್ದರೆ ಈ ವೇಳೆಗೆ ನೀರಾವರಿಯ ಕನಸು ಪೂರ್ಣವಾಗುತ್ತಿತ್ತು. ಆದರೆ ನೀವು ನನ್ನ ಕೈ ಹಿಡಿಯಲಿಲ್ಲ ಎಂದರು

    ಜಿಪಂ ಮಾಜಿ ಅಧ್ಯಕ್ಷ ಎಂ.ಬಿ. ಸೌದಾಗಾರ್‌ ಮಾತನಾಡಿ ದೀನದಲಿತರು, ಅಲ್ಪಸಂಖ್ಯಾತರು ಹಾಗು ರೈತರ ಪರವಾಗಿ ಇರುವ ಕಾಂಗ್ರೆಸ್‌ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು. ಪಕ್ಷದ ಮುಖಂಡರಾದ ಬಸವಪ್ರಭು ಸರನಾಡಗೌಡ, ಎಸ್‌.ಆರ್.‌ ಮೇಟಿ, ಕಸ್ತೂರಿಬಾಯಿ ನಾಡಗೌಡ, ರಮೇಶ ಯಡಹಳ್ಳಿ, ಬಸವರಾಜ ಸಂಶಿ, ಹನುಮಂತಗೌಡ ಮತ್ತಿತರರು ವೇದಿಕೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts