More

    ಅಂಬೇಡ್ಕರ್ ಸ್ಥಾಪಿತ ಶಾಲೆ ಅಭಿವೃದ್ಧಿ

    ವಿಕ್ರಮ ನಾಡಿಗೇರ ಧಾರವಾಡ

    ದೇಶಕ್ಕೆ ಸಂವಿಧಾನ ನೀಡಿರುವ ಡಾ. ಬಾಬಾಸಾಹೇಬ ಅಂಬೇಡ್ಕರರಿಗೂ ಧಾರವಾಡಕ್ಕೂ ಅವಿನಾಭಾವ ನಂಟಿದೆ. ಬ್ರಿಟಿಷರು ಆರಂಭಿಸಿದ ಶಾಲೆಯಲ್ಲಿ ದಲಿತ ವಿದ್ಯಾರ್ಥಿಗೆ ಪ್ರವೇಶ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಅವರು ಇಲ್ಲಿ ಶಾಲೆ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ.

    ಇಲ್ಲಿನ ಮರಾಠಾ ಕಾಲನಿಯ ‘ಬುದ್ಧ ರಕ್ಕಿತ’ ಶಾಲೆಯನ್ನು ಅಂಬೇಡ್ಕರ್ ಅವರು ಸ್ಥಾಪಿಸಿದ್ದು. ಇದರ ಇತಿಹಾಸ ರೋಚಕವಾಗಿದೆ. ಧಾರವಾಡದಲ್ಲಿ ಸ್ಥಾಪನೆಯಾದ ಶಾಲೆಯಲ್ಲಿ ತಮ್ಮ ಮಗನಿಗೆ ಪ್ರವೇಶ ನೀಡುವಂತೆ ದಲಿತ ವ್ಯಕ್ತಿಯೊಬ್ಬರು ಕೇಳುತ್ತಾರೆ. ಆದರೆ, ಪ್ರವೇಶ ನಿರಾಕರಿಸಲಾಗುತ್ತದೆ. ಪಾಲಕ ಸಾಕಷ್ಟು ಹೋರಾಟ ನಡೆಸುತ್ತಾರೆ. 1927ರಲ್ಲಿ ಅಂಬೇಡ್ಕರ್ ಅವರು ಇಂಡಿಯನ್ ಸ್ಟ್ಯಾಚ್ಯುಟರಿ ಕಮಿಷನ್​ಗೆ ಮನವಿ ನೀಡುವಾಗ ದಾಖಲೆಗಳನ್ನು ಶೋಧಿಸುತ್ತಾರೆ. ಆಗ ಧಾರವಾಡ ಹೋರಾಟದ ದಾಖಲೆ ಸಿಗುತ್ತದೆ. ಧಾರವಾಡಕ್ಕೆ ಆಗಮಿಸಿದ ಅಂಬೇಡ್ಕರ್ ಅವರು ಆ ದಲಿತ ಕುಟುಂಬಕ್ಕಾಗಿ ಹುಡುಕಾಟ ನಡೆಸುತ್ತಾರೆ. ಬಳಿಕ 1929ರಲ್ಲಿ ವಸತಿ ಶಾಲೆ ಆರಂಭಿಸುತ್ತಾರೆ. ಅಂಬೇಡ್ಕರ್ ಅವರು ವಸತಿ ಶಾಲೆ ನೋಡಿಕೊಳ್ಳಲು ಪತ್ನಿ ರಮಾಬಾಯಿಗೆ ಸೂಚಿಸುತ್ತಾರೆ. ಪತಿಯ ಆದೇಶದಂತೆ ಅವರು ಧಾರವಾಡಕ್ಕೆ ಆಗಮಿಸುತ್ತಾರೆ. ವಸತಿ ಶಾಲೆ ಹುಡುಗರ ಬಾಡಿದ ಮುಖಗಳನ್ನು ಕಂಡು ಸರಿಯಾಗಿ ಊಟ ಸಿಗುತ್ತಿಲ್ಲ ಎಂಬ ಅರಿವಾಗುತ್ತದೆ. ಕೂಡಲೆ ತಮ್ಮ ಚಿನ್ನಾಭರಣ ಮಾರಿ, ರೇಷನ್ ತಂದು ತಾವೇ ಅಡುಗೆ ಮಾಡಿ ಬಡಿಸುತ್ತಾರೆ…

    ಹೀಗೆ 1935ರವರೆಗೆ ವ್ಯವಸ್ಥಿತವಾಗಿ ವಸತಿ ನಿಲಯ ನೋಡಿಕೊಂಡಿದ್ದರು. ಈ ಅವಧಿಯಲ್ಲಿ ಅಂಬೇಡ್ಕರ್ ನಿರಂತರವಾಗಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದರು.

    1929ರಲ್ಲಿ ಶೋಷಿತ ವರ್ಗಗಳ ಶೈಕ್ಷಣಿಕ ಸಂಘವಾಗಿ ಆರಂಭವಾದ ಶಾಲೆ, ಡಾ. ಬಿ.ಆರ್. ಅಂಬೇಡ್ಕರ್ ಎಜುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಎಂದು ನಾಮಕರಣವಾಗುತ್ತದೆ. ಬಳಿಕ 1984ರಲ್ಲಿ ಬುದ್ಧ ರಕ್ಕಿತ ವಸತಿ ಪ್ರೌಢಶಾಲೆ ಎಂದು ಮರುನಾಮಕರಣ ಮಾಡಲಾಗಿದೆ. ಈ ಸಂಸ್ಥೆಗೆ ಸದ್ಯ ಬಿ.ಆರ್. ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಅಧ್ಯಕ್ಷರಾಗಿದ್ದರೆ, ಹುಬ್ಬಳ್ಳಿಯ ಎಫ್.ಎಚ್. ಜಕ್ಕಪ್ಪನವರ ಕಾರ್ಯದರ್ಶಿಯಾಗಿದ್ದಾರೆ. ಸರ್ಕಾರ ಈ ಶಾಲೆಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ 36 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಶಾಲೆ ಆವರಣದಲ್ಲಿ ಅಂಬೇಡ್ಕರ್ ಸ್ಮಾರಕ ಭವನ, ಸುಸಜ್ಜಿತ ವಸತಿ ಶಾಲೆ, ಅತಿಥಿಗೃಹ, ಪ್ರಾರ್ಥನೆ ಮಂದಿರ, ಸಭಾಭವನದ ಕಾಮಗಾರಿ ನಡೆಸಲಾಗುತ್ತಿದ್ದು, ಸದ್ಯದಲ್ಲೇ ಪೂರ್ಣವಾಗುವ ನಿರೀಕ್ಷೆ ಇದೆ.

    ಸ್ವತಃ ಅಂಬೇಡ್ಕರ್ ಪ್ರಾರಂಭಿಸಿದ ಈ ಶಾಲೆ ಅಂಬೇಡ್ಕರ್​ವಾದಿಗಳಿಗೆ ಪುಣ್ಯಕ್ಷೇತ್ರವಾಗಿದೆ. ಅಂಬೇಡ್ಕರ್ ವಾಸವಾಗಿದ್ದ ಸ್ಥಳ ವೀಕ್ಷಣೆಗೆ ಅನೇಕರು ಆಗಮಿಸುತ್ತಾರೆ. ಈ ಶಾಲೆಯನ್ನು ಸರ್ಕಾರದ ವತಿಯಿಂದ ಅಭಿವೃದ್ಧಿಪಡಿಸುತ್ತಿರುವುದು ಸಂತಸದ ಸಂಗತಿ.
    |ಎಫ್.ಎಚ್. ಜಕ್ಕಪ್ಪನವರ, ಬುದ್ಧ ರಕ್ಕಿತ ಶಾಲೆ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts