More

    ಅಂಬಿಗರ ಚೌಡಯ್ಯ ಸಮಾಜಕ್ಕೆ ಮಾದರಿ

    ಚಿತ್ರದುರ್ಗ: ಅಂಬಿಗರ ಚೌಡಯ್ಯ ವಚನಗಳು ಅರ್ಥಪೂರ್ಣವಾಗಿದ್ದು, ಅವರಲ್ಲಿದ್ದ ಜ್ಞಾನ ಹಾಗೂ ಸಮಾಜದ ಬಗೆಗಿನ ತತ್ಪರತೆ ಎಲ್ಲರಿಗೂ ಮಾದರಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

    ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಗಂಗಾಂಬಿಕ ಬೆಸ್ತರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದರು.

    ಕಾಯಕ, ಭಕ್ತಿ, ದಾಸೋಹ ಬಸವಾದಿ ಶರಣರ ಪ್ರಮುಖ ತತ್ವಗಳು. ಅಂಬಿಗ ವೃತ್ತಿ ಮಾಡುತ್ತಿದ್ದ ಚೌಡಯ್ಯ ಕೂಡ ಇವರಲ್ಲಿ ಪ್ರಮುಖರು. ನೇರ ನಿಷ್ಠುರಿ ಎಂದೇ ಎಲ್ಲರೂ ಕರೆಯುತ್ತಿದ್ದರು. ತಳ ಸಮುದಾಯಗಳ ಮೇಲೆ ಅಪಾರ ಕಾಳಜಿ ಹೊಂದಿದ್ದ ಅವರು, ನಿಜಶರಣರೂ ಹೌದು ಎಂದು ಬಣ್ಣಿಸಿದರು.

    ವಿಭೂತಿ, ರುದ್ರಾಕ್ಷಿ ಧರಿಸಿದ ತಕ್ಷಣ ಶಿವಶರಣರು ಆಗುವುದಿಲ್ಲ. ತತ್ವಾದರ್ಶ ಮೈಗೂಡಿಸಿಕೊಂಡು ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಬೇಕು. 800 ವರ್ಷಗಳ ಹಿಂದಿನ ಶಿವಶರಣರ ವಚನಗಳಲ್ಲಿನ ಉತ್ತಮ ಸಂದೇಶಗಳು ಇಂದಿಗೂ ಪ್ರಸ್ತುತ ಎನಿಸುತ್ತ್ತಿವೆ. ಸಂಪತ್ತನ್ನು ಸಮನಾಗಿ ಹಂಚುವ ಸಂಸ್ಕೃತಿ ಅವರದ್ದಾಗಿತ್ತು. ಹೀಗಾಗಿ ಸಮಾಜದ ಬದಲಾವಣೆಗೂ ಸಹಕಾರಿಯಾಗಿವೆ ಎಂದರು.

    ಆಧುನಿಕ ಭರಾಟೆದಲ್ಲಿ ಕುಲಕಸುಬು ಕಣ್ಮರೆಯಾಗುತ್ತಿವೆ. ಬೆಸ್ತ ಸಮುದಾಯದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಬೇಕು. ಜಿಲ್ಲೆಯಲ್ಲಿ ಗಂಗಾಂಬಿಕ ಬೆಸ್ತ ಸಮುದಾಯದಿಂದ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾಡಳಿತದಿಂದ ನಿವೇಶನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

    ಉಪನ್ಯಾಸಕ ಡಾ.ಬಿ.ಎಂ.ಗುರುನಾಥ ಮಾತನಾಡಿ, ಅಂಬಿಗರ ಚೌಡಯ್ಯ ಕಲ್ಯಾಣದ ಧೃವತಾರೆ, ತತ್ವಜ್ಞಾನಿಯಾಗಿದ್ದರು. ರಾಜ್ಯದ ಮಂಗಳೂರು, ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಚೌಡಯ್ಯ ಅವರ ಅಧ್ಯಯನ ಪೀಠಗಳಿವೆ. ಹಂಪಿ ವಿಶ್ವವಿದ್ಯಾಲಯ ಬೆಸ್ತರ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸಿದೆ. ಈ ಮೂರು ವಿಶ್ವವಿದ್ಯಾಲಯದ ಅಧ್ಯಯನ ವರದಿಗಳು ಈ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಶಿಫಾರಸು ಮಾಡಿವೆ. ರಾಜ್ಯ ಸರ್ಕಾರ ಅಂಗೀಕರಿಸಿ, ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ ಎಂದು ತಿಳಿಸಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಎಸ್.ಕೆ.ಮಲ್ಲಿಕಾರ್ಜುನ್, ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ನಿವೃತ್ತ ಪಿಯುಡಿಡಿ ನಾಗರಾಜ, ಸಂಘದ ಅಧ್ಯಕ್ಷ ಎಚ್.ಡಿ.ರಂಗಯ್ಯ, ಉಪಾಧ್ಯಕ್ಷ ಕೃಷ್ಣಮೂರ್ತಿ, ಖಜಾಂಚಿ ರಂಗನಾಥ, ಮುಖಂಡರಾದ ಶಿವಕುಮಾರ್, ರವಿಚಂದ್ರ, ಎಂ.ಆರ್.ನಾಗರಾಜ, ದೊರೆಸ್ವಾಮಿ, ಮಹೇಶ್, ಲೀಲಾವತಿ, ಜಯಣ್ಣ, ರಾಮಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts