More

    ಅಂಗನವಾಡಿ ಬಳಿ ಕಿಡಿಗೇಡಿಗಳಿಂದ ವಾಮಾಚಾರ

    ಅರಕಲಗೂಡು: ತಾಲೂಕಿನ ತೇಜೂರು ಗ್ರಾಮದ ಅಂಗನವಾಡಿ ಕಾಂಪೌಂಡ್ ಬಳಿ ದುಷ್ಕರ್ಮಿಗಳು ವಾಮಾಚಾರ ನಡೆಸಿದ್ದ ಪರಿಣಾಮ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬಾರದೆ ಹೊರಗುಳಿದಿದ್ದಾರೆ.

    ಗ್ರಾಮದ ಅಂಗನವಾಡಿ ಕಾಂಪೌಂಡ್ ಬಳಿ ಬುಧವಾರ ರಾತ್ರಿ ವಾಮಾಚಾರ ಕೈಗೊಂಡಿರುವ ಯಾರೋ ದುಷ್ಕರ್ಮಿಗಳು ಅಲಂಕೃತ ಗೊಂಬೆ ಮಾಡಿ ಎಳನೀರು ಇಟ್ಟು ಅರಿಶಿಣ-ಕುಂಕುಮ ಹಚ್ಚಿ ಬೆಕ್ಕಿನ ಮರಿ ಬಲಿ ನೀಡಿದ್ದಾರೆ. ಅಲ್ಲದೇ ಅಂಗನವಾಡಿ ಬಾಗಿಲಿಗೆ ಕೋಳಿ ಮೊಟ್ಟೆ ಒಡೆದು ಅರಿಶಿಣ-ಕುಂಕುಮ ಚೆಲ್ಲಿ ಅಮಾನುಷ ಕೃತ್ಯ ಎಸಗಿದ್ದಾರೆ.

    ಬೆಳಗ್ಗೆ 9 ಗಂಟೆಗೆ ಎಂದಿನಂತೆ ಅಂಗನವಾಡಿ ಬಳಿ ಆಗಮಿಸಿದ ಕಾರ್ಯಕರ್ತೆ ವಿಜಯಾ ಅವರು ವಾಮಾಚಾರ ನಡೆಸಿರುವ ಕುರುಹುಗಳನ್ನು ಕಂಡು ಬೆಚ್ಚಿದ್ದಾರೆ. ತಕ್ಷಣ ವಿಷಯ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಹೀಗಾಗಿ 13 ಮಕ್ಕಳನ್ನು ಪಾಲಕರು ಅಂಗನವಾಡಿಗೆ ಕಳುಹಿಸಿಲ್ಲ. ಯಾರೋ ಕಿಡಿಗೇಡಿಗಳು ವಾಮಾಚಾರ ನಡೆಸಿದ್ದಾರೆ. ಕಳೆದ ತಿಂಗಳು ಗೇಟ್ ಬಳಿ ಬೆಂಕಿಯಲ್ಲಿ ಪೊರಕೆ ಸುಟ್ಟಿದ್ದರು. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅರಕಲಗೂಡು ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಅಂಗನವಾಡಿ ಕಾರ್ಯಕರ್ತೆ ವಿಜಯಾ ತಿಳಿಸಿದರು.
    ಅಂಗನವಾಡಿ ಚಿಕ್ಕ ಮಕ್ಕಳು ಬರುತ್ತಾರೆ. ಈ ರೀತಿ ವಾಮಾಚಾರ ಮಾಡಿರುವುದರಿಂದ ಮಕ್ಕಳಲ್ಲಿ ಭಯ ಮೂಡುತ್ತದೆ. ವಾಮಾಚಾರಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts