More

    ಅಂಕಣ, ಅನುಭಾವದ ಬೆಳಗು: ಮಾಯಾಮಿಥ್ಯಾತ್ವ ಸ್ವರೂಪ 

    ಅಂಕಣ, ಅನುಭಾವದ ಬೆಳಗು: ಮಾಯಾಮಿಥ್ಯಾತ್ವ ಸ್ವರೂಪ ಮಹಲಿಂಗರಂಗನು ಪ್ರಸ್ತುತ ಎಂಟನೆಯ ಅಧ್ಯಾಯದಲ್ಲಿ ‘ಮಾಯಾಮಿಥ್ಯಾತ್ವ’ವನ್ನು ಹೇಳುತ್ತಿದ್ದಾನೆ. ಇದು ಮೂವತ್ತೆಂಟು ಪದ್ಯಗಳಿರುವ ಚಿಕ್ಕ ಪ್ರಕರಣ. ಪ್ರಾರಂಭದ ನಾಲ್ಕು ಹಾಗೂ ಕೊನೆಯ ಎರಡು ಪದ್ಯಗಳನ್ನು ಹೊರತುಪಡಿಸಿದರೆ, ಉಳಿದ ಪದ್ಯಗಳು ‘ಮಾಯೆ’ಯ ಸ್ವರೂಪವನ್ನು ವಿವರಿಸುತ್ತವೆ. ನಾವು ಸ್ಥೂಲವಾಗಿ ‘ಮಾಯೆ’ ಎಂದರೇನು ಎಂಬುದನ್ನು ಮೊದಲಿಗೆ ತಿಳಿಯೋಣ:

    ಮಾಯೆ ಎಂಬುದಕ್ಕೆ ಸಂವಾದಿಯಾಗಿ ಪ್ರಕೃತಿ, ಅವಿದ್ಯೆ, ಅಜ್ಞಾನ, ಈಶ್ವರಶಕ್ತಿ ಎಂಬಿವುಗಳನ್ನು ಬಳಸುತ್ತೇವೆ. ‘ಮಾಯಾ’ ಎಂಬುದರ ಅವಯವಾರ್ಥವನ್ನು ಈಗ ಗಮನಿಸೋಣ ‘ಮಾ’ ಎಂದರೆ ತಾಯಿಯಾಗಿ – ಸಮಸ್ತ ಜೀವಾತ್ಮಗಳ ತಾಯಿಯಾಗಿ – ಎಂದಾದರೆ; ‘ಯಾ’ ಎಂಬುದಕ್ಕೆ ಹೋಗು, ವರ್ತಿಸುವವಳು ಎಂದು ಅರ್ಥ. ‘‘ಮಹಾಮಾಯೆಯಾಗಿ ಜಗತ್ತನ್ನು ನಡೆಸುವವಳೆ’’ಂದು ಈ ಪದದ ಅವಯವಾರ್ಥ.

    ಜೀವಾತ್ಮದ ಕರ್ಮಫಲಗಳನ್ನು ಅಳತೆ ಮಾಡುತ್ತ, ಜೀವನ-ಮರಣ-ಪುನರ್ಜನ್ಮಗಳ ನೀಡುತ್ತ ಹೋಗುವ ಮೂಲಪ್ರಕೃತಿ ಏನುಂಟೋ ಅದು ಮಾಯೆ. ಈ ಮಾಯೆಯು ‘ಪ್ರಕೃತಿ’ರೂಪದಲ್ಲಿ ಇರುತ್ತಾಳೆ; ಈಕೆ ಪರಮಾತ್ಮನ ಅಧೀನಳಾಗಿರುತ್ತಾಳೆ. ಭಗವದ್ಗೀತೆಯ ಒಂಬತ್ತನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನ ಮಾತು ಹೀಗುಂಟು:

    ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ

    ಭೂತಗ್ರಾಮಮಮಿದಂ ಕೃತ್ಸ ್ನುವಶಂ ಪ್ರಕೃತೇರ್ವಶಾತ್ || (9.8)

    ‘‘ನನ್ನದೇ ಆದ ಶಕ್ತಿಯನ್ನು ಪ್ರಯೋಗಿಸಿ ಮತ್ತೆಮತ್ತೆ ಈ ಎಲ್ಲ ಪಂಚಭೂತ ಪರಂಪರೆಗಳನ್ನು ಸೃಜಿಸುತ್ತೇನೆ’’ ಎಂಬ ವಾಕ್ಯವನ್ನು ಸಾಧಕರು ಮೊದಲು ಅವಧರಿಸಬೇಕಾಗುತ್ತದೆ. ಇಲ್ಲಿ ಪರಮಾತ್ಮನ ಶಕ್ತಿಯೇ ‘ಪ್ರಕೃತಿ’ ಎಂಬುದು ಸ್ಪಷ್ಟವಾಗುತ್ತದೆ.

    ಮಾಯೆ ಎಂಬುದಕ್ಕೆ ಅವಿದ್ಯೆ ಅಥವ ಅಜ್ಞಾನ ಎಂಬ ಅರ್ಥ ಉಂಟು. ವ್ಯಾಸರು ಗೀತೆಯಲ್ಲಿ ಶ್ರೀಕೃಷ್ಣನ ಮೂಲಕ ‘‘ಅಜ್ಞಾನೇನ ಆವೃತಂ ಜ್ಞಾನಂ ತೇನ ಮುಹ್ಯಂತಿ ಜಂತವಃ’’ ಎಂದು ಹೇಳಿಸಿದ್ದಾರೆ. ಈ ಮಾಯೆಯು ಅಜ್ಞಾನವಾಗಿ ಅವಿದ್ಯೆಯಾಗಿ ಜ್ಞಾನವನ್ನು ಆವರಿಸಿದೆ ಮಾತ್ರವಲ್ಲ; ಎಲ್ಲ ಜೀವಿಗಳನ್ನು ಮೋಹಕ್ಕೆ ಈಡಾಗುವಂತೆ ಮಾಡಿದೆ – ಎಂದು ಹೇಳಿದೆ. ಇದಕ್ಕೆ ಪೂರಕವಾಗಿ ಅನೇಕ ಋಷಿ-ಮುನಿಗಳ ಕಥೆಯುಂಟು! ಉಪನಿಷತ್ತುಗಳ ಪ್ರಕಾರ ಅವಿದ್ಯೆಯೆಂದರೆ, ಆತ್ಮವಿದ್ಯೆಗೆ ವಿಮುಖವಾದದ್ದೆಂದೇ ಅರ್ಥ.

    ಕೃಷಿ, ವಾಣಿಜ್ಯ, ವೈದ್ಯಕೀಯ, ಭೌತವಿಜ್ಞಾನ – ಇವೆಲ್ಲವೂ ಅವಿದ್ಯೆಯೇ ಆಗಿವೆ. ಈ ಎಲ್ಲ ವಿದ್ಯೆಗಳು ವರ್ತಮಾನದಲ್ಲಿ ಮಾತ್ರ ಬಳಕೆಗೆ ಬರುತ್ತವೆ. ಅನಂತರ ಅವು ನಮ್ಮ ನೆನಪಿನಿಂದ ಮರೆಯಾಗುತ್ತವೆ. ಆದರೆ, ಆತ್ಮವಿದ್ಯೆ ಮಾತ್ರ ಅವಿನಾಶಿ ಎಂಬುದನ್ನು ನಾವು ಮರೆಯುವಂತಿಲ್ಲ. ಹೀಗಾಗಿ, ಮಾಯೆಯು ಉಪಾದಾನಕಾರಣ. ಇದು ನಾಶವಾಗುವುದರಿಂದ ಸದ್ರೂಪವಲ್ಲ.

    ಕಾರ್ಯವನ್ನು ಉಂಟು ಮಾಡುವುದರಿಂದ ಅಸದ್ರೂಪವಲ್ಲ. ಬ್ರಹ್ಮವು ಅದ್ವಯವಾದುದರಿಂದ ಭಿನ್ನವಲ್ಲ. ಇದು ತ್ರಿಗುಣಾತ್ಮಕ ಆಗಿರುವುದರಿಂದ ಸಾವಯವ. ಇದಕ್ಕೆ ಅವಯವಗಳೇ ಇಲ್ಲದುದರಿಂದ ನಿರವಯವ. ಈ ಸಂಗತಿಗಳನ್ನು ಗಮನಿಸಿದರೆ ‘ಅವಿದ್ಯೆ’ ಎಂದರೆ ಆತ್ಮನನ್ನು ದೇಹವನ್ನಾಗಿಯೂ ದೇಹವನ್ನು ಆತ್ಮನನ್ನಾಗಿಯೂ ತಿಳಿಯುವ ತಪ್ಪುಕಲ್ಪನೆ. ಇದನ್ನು ಆಚಾರ್ಯ ಶಂಕರ ಭಗವತ್ಪಾದರು ಅಧ್ಯಾಸವೆಂದೂ ಮಿಥ್ಯಾಜ್ಞಾನವೆಂದೂ ಕರೆದಿದ್ದಾರೆ. ‘‘ತಮೇಕಂ ಏವಂ ಲಕ್ಷಣಮಧ್ಯಾಸಂ ಪಂಡಿತಾ ಅವಿದ್ಯೇತಿ ಮನ್ಯನ್ತೇ’’ ಹೀಗೆಂದು ಸೂತ್ರಭಾಷ್ಯದಲ್ಲಿ (4.1.2) ಹೇಳಿದ್ದಾರೆ.

    ಈ ಅಂಶವನ್ನು ಗಮನಿಸಿಕೊಂಡು ‘ಮಾಯೆ’ಯ ಬಗೆಗೆ ಆಚಾರ್ಯ ಶಂಕರರು ‘‘ಅವಿದ್ಯಾಕಲ್ಪಿತೇ ನಾಮರೂಪೇ ಸಂಸಾರ ಪ್ರಪಂಚ ಬೀಜಭೂತೇ ಸರ್ವಜ್ಞಸ್ಯೇ ಸ್ವರಸ್ಯ, ಮಾಯಾ, ಶಕ್ತಿಃ, ಪ್ರಕೃತಿರಿತಿ ಚ

    ಶ್ರುತಿಸ್ಮಧಿತ್ಯೋರಭಿಲಪ್ಯೇತೇ’’ ಎಂದಿದ್ದಾರೆ. ಮಾಯೆಯೆಂಬುದು ಪ್ರಪಂಚಕ್ಕೆ ಉಪಾದಾನಕಾರಣವಾದ, ಅವಿದ್ಯಾಕಲ್ಪಿತ ಪ್ರಪಂಚ – ಬೀಜ-ವಸ್ತು ಎಂದು ತಿಳಿದರೆ ಸಾಕು! ಹೀಗಾಗಿ ಮಾಯೆ, ಅವಿದ್ಯೆ, ಶಕ್ತಿ, ಮೂಲಾವಿದ್ಯೆ ಇವೆಲ್ಲವೂ ಮಾಯೆಯ ಪರ್ಯಾಯ ಪದಗಳು. ಮಹಲಿಂಗರಂಗನು ಈ ಪ್ರಕರಣದ ಪ್ರಾರಂಭಕ್ಕೆ ಶ್ರೀಶೈಲಪತಿಯನ್ನು ನೆನೆಯುತ್ತಾನೆ.

    ಬರಿದೆ ನಿಂದಿಸಿ ದಕ್ಷ ಹರನನು

    ಕೊರೆಸಿಕೊಂಡನು ಕೊರಳ; ಮನ್ಮಥ

    ದುರುಳತನದಲಿ ಸರಳ ತೊಟ್ಟವನುರಿದನಾ ಕ್ಷಣಕೆ; |

    ಮರುಳು ಮಾನವಪಶುಗಳರಿಯದೆ

    ಜರಿವರೀ ಶ್ರೀಶೈಲಪತಿಯನು;

    ಪರಮ ಪಾತಕರುರುಳ್ವರಂಧತಮಿಸ್ರ ನರಕದಲಿ || 8.1 ||

    ‘‘ಆ ದಕ್ಷಬ್ರಹ್ಮನು ವಿನಾಕಾರಣ ಶಿವನನ್ನು ನಿಂದಿಸಿ ಕತ್ತನ್ನು ಕಳೆದುಕೊಂಡನು. ಮನ್ಮಥನು ಕೆಟ್ಟತನದಿಂದ ಶಿವನ ಮೇಲೆ ಬಾಣ ಬಿಟ್ಟು ಆ ಕ್ಷಣವೇ ಭಸ್ಮೀಭೂತನಾದನು. ಪಶುಸಮಾನರಾದ ಮರುಳುಮಾನವರು ಶ್ರೀಶೈಲಪತಿಯಾದ ಈಶ್ವರನನ್ನು ಹೀಯಾಳಿಸಿ ಕಗ್ಗತ್ತಲೆಯಿಂದ ಕೂಡಿದ ನರಕದಲ್ಲಿ ಬೀಳುತ್ತಾರೆ.’’ ಎಂಬುದು ಈ ಪ್ರಾರ್ಥನಾಪದ್ಯದ ಅರ್ಥ. ಅನಂತರ ಮಹಲಿಂಗರಂಗನು ಈ ಪರಮ ಬ್ರಹ್ಮಬೋಧೆಯನ್ನು ನೀಚರಿಗೆ ಹೇಳಕೂಡದೆಂದೂ ಗುರುಗಳಲ್ಲಿ ಅತಿಶಯವಾದ ವಿಶ್ವಾಸ ಯಾರಿಗುಂಟೋ ಅಂಥವರಿಗೆ ಮಾತ್ರ ಮುಕ್ತ ಮನಸ್ಸಿನಿಂದ ಹೇಳಬೇಕೆಂದೂ ತಿಳಿಸುತ್ತಾನೆ.

    ಮಹಲಿಂಗರಂಗ ಬರೆಯುತ್ತಿರುವ ಅನುಭವಾಮೃತವು ಸಾಧಕರಿಗೆ ಮಾತ್ರ ಅತ್ಯುಪಯುಕ್ತ. ಇದು ಶುದ್ಧ ‘ಬ್ರಹ್ಮವಿದ್ಯೆ’ಯ ಮಹತ್ತ ್ವನ್ನು ನಮಗೆ ತಿಳಿಸಿಕೊಡುತ್ತದೆ. ಬ್ರಹ್ಮವಿದ್ಯೆಯು ಶಾಶ್ವತವಾದುದು; ಅವಿನಾಶಿಯಾದುದು. ಈ ವಿಚಾರವು ಉಪನಿಷತ್ತುಗಳಲ್ಲಿ ತತ್ತ್ವಪೂರ್ಣವಾಗಿ ಬೋಧವಾಗಿದೆ. ಆದುದರಿಂದ ಆತ್ಮವಿದ್ಯೆ ಅಥವ ಬ್ರಹ್ಮವಿದ್ಯೆಯನ್ನು ಮನಸ್ಸಿಟ್ಟು ನಾವು ತಿಳಿಯಬೇಕು. ಆಗ ಇದು ತತ್ತ್ವಕ್ಕೆ ಸೋಪಾನವೆನಿಸುತ್ತದೆ. ಸಾಧಕನು ಮಾಯೆಯ ಮಿಥ್ಯೆಯ ಸ್ವರೂಪವನ್ನು ತಿಳಿಯಲು ಇದರಿಂದ ಸಾಧಕರಿಗೆ ಸಾಧ್ಯವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts