More

    ಯೋಗ ಕ್ಷೇಮ; ಸಾಷ್ಟಾಂಗ ನಮಸ್ಕಾರದಿಂದ ಭಾವಶುದ್ಧಿ ಸಾಧ್ಯ

    ಶಾಸ್ತ್ರವು ಹೇಳುತ್ತದೆ- ನಾವು ಪರಸ್ಪರ ಮಾಡುವ ನಮಸ್ಕಾರ- ಪ್ರತಿನಮಸ್ಕಾರವು ನಮ್ಮೊಳಗಿನ ಭಗವಚ್ಚಕ್ತಿಗೆ ಮಾಡುವ ಗೌರವಾಗಿದೆ ಎಂದು. ಭಾಗವತದಲ್ಲಿ ಅಭಿವಾದನ, ಅಭಿವಂದನ ದಲ್ಲಿ ನಮಿಸುವುದು ಎದುರಿನ ದೇಹಧಾರಿಗಲ್ಲ, ಅವನ ಹೃದಯಾಂತರಂಗದೊಳಗಿರುವ ಪರಮಪುರುಷನಿಗೆ ಎಂದು ತಿಳಿಸುತ್ತದೆ.

    ಶ್ರೀ ಕೃಷ್ಣನು ‘ಸರ್ವಭೂತಾನಾಂ ಹೃದ್ದೇಶೇ ಈಶ್ವರಃ ತಿಷ್ಠತಿ’- ‘ಎಲ್ಲರ ಹೃದಯದಲ್ಲಿ ಭಗವಂತನಿದ್ದಾನೆ’ ಎಂಬ ತತ್ತ್ವವನ್ನು ಹೇಳಿ ಭಗವದ್ಗೀತೆಯ ಸಾರವನ್ನು ತಿಳಿಸಿದ್ದಾನೆ. ದೇವಾಲಯ ಕಂಡಾಗ ಹೇಗೆ ತಲೆ ಬಾಗುತ್ತದೋ ಹಾಗೆ ದೇಹವೆಂಬ ದೇವಾಲಯ ಕಂಡಾಗಲೂ ಶಿರಸ್ಸು ಬಾಗಲು ಶುರುವಾಗುತ್ತದೆ. ನಮ್ಮ ಸಂಸ್ಕೃತಿ-ಸಂಸ್ಕಾರದಲ್ಲಂತೂ ಸಾಕ್ಷಾತ್ ಪ್ರತ್ಯಕ್ಷ ದೇವರಾದ ಸೂರ್ಯನಾರಾಯಣನನ್ನು ನಿತ್ಯ ದಿನಚರಿಯಲ್ಲಿ ನಮಸ್ಕರಿಸುವುದು ಪರಂಪರೆಯೇ ಆಗಿದೆ.

    ನಮಸ್ಕಾರದಲ್ಲಿ ಮೂರು ವಿಧಗಳು: ಕಾಯಿಕ, ವಾಚಕ ಮತ್ತು ಮಾನಸಿಕ, ಈ ಮೂರರ ಸಮಷ್ಟಿಯೇ ನಮಸ್ಕಾರ ಪುಷ್ಟಿ. ಕಾಯಿಕದಲ್ಲೂ ಮತ್ತೆ ಅನೇಕ ವಿಧ. ಪ್ರದಕ್ಷಿಣೆ ನಮಸ್ಕಾರ, ಕೈ ಜೋಡಿಸಿ ನಮಸ್ಕಾರ, ಅರ್ಧಚಂದ್ರ ನಮಸ್ಕಾರ, ದುರ್ಗಾ ನಮಸ್ಕಾರ, ಶಿವನಮಸ್ಕಾರ, ಗುರು ನಮಸ್ಕಾರ, ಭೂ ನಮಸ್ಕಾರ ಮುಂತಾದವು. ವಾಚಿಕ ನಮಸ್ಕಾರದಲ್ಲಿ ಸಾಮಾನ್ಯ ಶಬ್ದ ವ್ಯತ್ಯಾಸ ಮಾತ್ರ. ಮಾನಸಿಕ ನಮಸ್ಕಾರ ಮುಖ್ಯವಾದದ್ದು. ಇಲ್ಲಿ ಶ್ರದ್ಧೆ, ಭಕ್ತಿ ಒಳಗೊಂಡ ದಂಡವತ್ ಪ್ರಣಾಮ ದೀಕ್ಷಾದಂಡಪ್ರಣಾಮ, ಮಾತೃ ಪ್ರಣಾಮ, ಅನಂತ ಪ್ರಣಾಮಗಳಾಗಿವೆ. ಸಾಷ್ಟಾಂಗ ನಮಸ್ಕರಿಸುವಾಗ ದೇಹವು ಮಲಗಿಸಿಟ್ಟ ದಂಡದಂತೆ ಕಾಣುತ್ತದೆ. ಅದಕ್ಕೆ ಸಾಷ್ಟಾಂಗ ಪ್ರಣಾಮವನ್ನು ದಂಡಪ್ರಣಾಮ ಅನ್ನುವುದು.

    ಸಾಷ್ಟಾಂಗ ಅಂದರೆ ಏನು?

    ಅಷ್ಟ ಅಥವಾ ಎಂಟು ಅಂಗಗಳಿಂದ ಸಹಿತವಾದ ನಮಸ್ಕಾರ ಎಂದರ್ಥ. ಅವು
    ಉರಸಾ, ಶಿರಸಾ, ದೃಷ್ಟ್ಯಾ, ಮನಸಾ, ವಚಸಾ ತಥಾ |
    ಪದ್ಭ್ಯ ಕರಾಭ್ಯಂ ಜಾನುಭ್ಯಾಂ ಪ್ರಣಾಮೋಷ್ಟಾಂಗ ಉಚ್ಯತೆ || ಎಂದು

    ಸಾಷ್ಟಾಂಗ ನಮಸ್ಕಾರ ಕುರಿತು ಶಾಸ್ತ್ರದ ವಚನ. ಅಂದರೆ ಎರಡು ಪಾದ, ಮಂಡಿ, ಕೈಗಳೆರಡು ಶಿರಸ್ಸು, ಇವು ಐದು ಅಂಗಗಳು ಭೂಸ್ಪರ್ಶವಾಗಬೇಕು. ದೃಷ್ಟಿಯು ದೇವರ ಚರಣದಲ್ಲೂ, ಮನಸ್ಸು, ನಮನ ಕಾರ್ಯದಲ್ಲೂ ತನ್ಮಯವಾಗಿರಬೇಕು. ಮಾತು ಇಷ್ಟದೇವರನ್ನು ಸ್ತುತಿಸುತ್ತಿರಬೇಕು. ಹೀಗೆ ಇಲ್ಲಿ ಎಂಟು ಅಂಗಗಳು ಭಾಗವಹಿಸಬೇಕು. ಆಗ ಇದು ಪೂರ್ಣ ನಮಸ್ಕಾರವಾಗುತ್ತದೆ.

    ಈ ಸಾಷ್ಟಾಂಗ ನಮಸ್ಕಾರಕ್ಕೆ ಬಹಳಷ್ಟು ಅರ್ಥವಿದೆ. ಈ ನಮಸ್ಕಾರದಲ್ಲಿ ಮಾತ್ರ ಪೂರ್ಣ ಸಮರ್ಪಣೆಯ ಭಾವ ವ್ಯಕ್ತವಾಗುತ್ತದೆ. ಸರ್ವಭಾರವನ್ನೂ ಭೂಮಿಯ ಮೇಲೆ ಹಾಕಿ ಏಕಾಗ್ರಮನಸ್ಸಿನಿಂದ ದೇವರನ್ನು ಧ್ಯಾನಿಸುವಾಗ ಯಾವುದೂ ನನ್ನದಲ್ಲ ಎಲ್ಲವೂ ನಿನ್ನದೆ, ನಿನ್ನ ಮೇಲೆಯೇ ಸರ್ವ ಭಾರವನ್ನೂ ಒಪ್ಪಿಸಿದ್ದೇನೆ ಎಂಬ ನಿರಹಂಕಾರ ಪೂರ್ವಕ ಸಮರ್ಪಣೆಯ ಭಾವನೆಗೆ, ಪೂರ್ಣಶರಣಾಗತಿಯ ಭಾವನೆಗೆ ಈ ನಮಸ್ಕಾರದಲ್ಲಿ ಅವಕಾಶವಿದೆ. ಈ ಸಮಯದಲ್ಲಿ ವಿನಯವಂತಿಕೆ ಭಾವಶುದ್ಧಿ ಮೂಡಿ ಬರಲು ಅನುವಾಗುತ್ತದೆ. ಇದು ಸಾಷ್ಟಾಂಗ ನಮಸ್ಕಾರದ ವೈಶಿಷ್ಟ್ಯ. ಹೀಗೆ ಪ್ರತಿ ನಮಸ್ಕಾರವೂ ಇನ್ನೊಬ್ಬನೊಳಗಿನ ಭಗವಂತನಿಗೆ ಸಲ್ಲುವುದು.

    ‘ಆಕಾಶಾತ್ ಪತಿತಂ ತೋಯಂ ಯಥಾಗಚ್ಛತಿ ಸಾಗರಂ | ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿಃ- ಆಕಾಶದಿಂದ ಮಳೆ ಬೀಳುತ್ತೆ, ನದಿ ಹರಿಯುತ್ತದೆ. ಅವೆಲ್ಲಾ ಸಾಗರದಲ್ಲಿ ಸೇರುತ್ತದೆ. ಹಾಗೆಯೇ ನಮ್ಮೆಲ್ಲರ ನಮಸ್ಕಾರ ಆ ಕೇಶವನಿಗೆ ತಲುಪುತ್ತದೆ.

    ಸೂರ್ಯ ನಮಸ್ಕಾರ ಸ್ತವ ಸ್ಥಿತಿ: ಸ್ತವ ಎಂದರೆ ಪ್ರಾರ್ಥನೆ. ಸೂರ್ಯ ಮಂತ್ರದೊಂದಿಗೆ ನಮಸ್ಕರಿಸುವ ಸಿದ್ಧತೆ. ನೇರವಾಗಿ ಸ್ಥಿರವಾಗಿ ನಿಲ್ಲಿ. ಅಂಗುಷ್ಠದಿಂದ ಹಿಡಿದು ಶಿರಸ್ಸಿನವರೆಗೆ ದೇಹವು ಒಂದೇ ಸಮರೇಖೆಯಲ್ಲಿರಲಿ. ಎದೆ ಎತ್ತಿರಲಿ. ಭುಜ ಅಗಲಿಸಿ. ಹೊಟ್ಟೆಯನ್ನು ಒಳಕ್ಕೆಳೆದುಕೊಳ್ಳಬೇಕು.

    ಶರೀರದ ಯಾವುದೇ ಭಾಗಗಳು ಬಿಗಿತಗಳಿಲ್ಲದ ಸ್ಥಿತಿಯಲ್ಲಿರಲಿ. ಮುಖದಲ್ಲಿ ಪ್ರಸನ್ನತೆಯಿರಲಿ. ನಿರಾಳ, ದೀರ್ಘ ಶ್ವಾಸೋಚ್ಛ್ವಾಸ ನಡೆಸುತ್ತಿರಿ. ಈಗ ಶ್ವಾಸವನ್ನು ಎರಡೂ ಮೂಗಿನ ಹೊಳ್ಳೆಗಳಿಂದ ಒಳಕ್ಕೆ ಎಳೆದುಕೊಳ್ಳುತ್ತ ಎರಡೂ ಕೈಗಳನ್ನೆತ್ತಿ ಎದೆಯ ಮುಂದೆ ಅಂಗೈಗಳನ್ನು ಪರಸ್ಪರ ಒಂದಕ್ಕೊಂದು ಒತ್ತುತ್ತ ಹನುಮನ ನಮನ ಸ್ಥಿತಿಯಂತೆ ನಮಸ್ಕರಿಸಬೇಕು. ದೃಷ್ಟಿಯು ಮುಂದೆ ಉದಯಿಸುತ್ತಿರುವ ಸೂರ್ಯನಲ್ಲಿ ನೆಟ್ಟಿರಬೇಕು. ಮನಸ್ಸಿನಲ್ಲೂ ಸೂರ್ಯಬಿಂಬದ ಮನನ ನಡೆಯುತ್ತಿರಬೇಕು.

    ಲಾಭಗಳು: ಪರಸ್ಪರ ಕೈಗಳ ಒತ್ತುವಿಕೆಯಿಂದ ಹಸ್ತಗಳಲ್ಲಿರುವ ಪ್ರತಿಕ್ರಿಯಾತ್ಮಕ ಬಿಂದುಗಳ ಒತ್ತಡದಿಂದ ಇಡೀ ಶರೀರ ಸಚೇತನಗೊಳ್ಳುತ್ತದೆ. ಎದೆಯುಬ್ಬುವಿಕೆ ಹಾಗೂ ನೇರ ಸ್ಥಿರವಾಗಿ ಬಾಗುವಿಕೆಯಿಂದ ಧೈರ್ಯ ಎದುರಿಸುವ ಹಾಗೂ ನಿರ್ಧಾರ ಸಾಮರ್ಥ್ಯ ಹೆಚ್ಚುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts