More

    ಯೋಗ ಕ್ಷೇಮ | ಮಾನವನ ಬಂಧನಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ

    ಯೋಗ ಕ್ಷೇಮ | ಮಾನವನ ಬಂಧನಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ’- ಜನ್ಮ ಮತ್ತು ಮೃತ್ಯುವಿನ ಬಂಧನದಲ್ಲಿ ಸಿಲುಕಿ ಪೇಚಾಡಲು ಮತ್ತು ಮೋಕವನ್ನು ಹೊಂದಲು ಮನಸ್ಸೇ ಕಾರಣ. ಅನ್ನದಿಂದಲೇ ಮನಸ್ಸಿನ ನಿರ್ವಣವಾಗುತ್ತದೆ. ಯೋಗ ಸಾಧನೆ ಮಾಡಲಪೇಕ್ಷಿಸುವವನ ಮನಸ್ಸು ಬಹಳ ಸಾತ್ವಿಕವಾಗಿರಬೇಕು. ಕಠೋಪನಿಷತ್ತು ಮಾನವನನ್ನು ಯಾತ್ರಿಕನು ಎಂದು ವರ್ಣಿಸುತ್ತಾ ಹೀಗೆ ಹೇಳುತ್ತದೆ : ಜೀವಾತ್ಮನನ್ನು ರಥಿಕನು, ಶರೀರವನ್ನು ರಥ, ಬುದ್ದಿಯನ್ನು ಸಾರಥಿ ಮತ್ತು ಮನಸ್ಸನ್ನು ಕಡಿವಾಣ’ ಎಂದು ತಿಳಿದುಕೊ ಎಂದಿದೆ. ಕಡಿವಾಣವು ಬಲವಾಗಿದ್ದರೆ ಮಾತ್ರ ಕುದುರೆಗಳು ವಶದಲ್ಲಿರಲು ಸಾಧ್ಯ. ಇಲ್ಲದಿದ್ದರೆ ಕುದುರೆಗಳು ಯದ್ವಾತದ್ವಾ ಧಾವಿಸಿ ರಥವನ್ನು ಹಳ್ಳಕ್ಕೆ ಹಾಕುತ್ತದೆ. ರಥದ ಪತನದೊಂದಿಗೆ ರಥಿಯ ಪತನವೂ ಆಗುತ್ತದೆ. ಈ ರಥಿಯೇ ಆತ್ಮ. ಇದರಿಂದ ಆತ್ಮನ ಅಧಃ ಪತನಕ್ಕೆ ಮನಸ್ಸೇ ಕಾರಣವೆಂದು ಸ್ಪಷ್ಟವಾಗುತ್ತದೆ.

    ಯಮ, ನಿಯಮ, ಆಸನ, ಪ್ರಾಣಾ ಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಈ ಏಳು ಸಿದ್ದಿಸಿದ ನಂತರವೇ ಯೋಗಿಗೆ ಸಮಾಧಿ ಸಿದ್ದಿಯು ಲಭಿಸುತ್ತದೆ. ಯೋಗಿಯು ಪೂರ್ಣವಾಗಿ ಅಂತಮುಖಿಯಾಗಿ ತನ್ನಲ್ಲೇ ಪರಮಾತ್ಮನ ಸ್ವರೂಪ, ಬಿಂಬವನ್ನು ಕಂಡುಕೊಳ್ಳುತ್ತಾನೆ. ಪ್ರಾಣವು ಸುಷುಮ್ನಾ ನಾಡಿಯ ಮೂಲಕ ಆರು ಚಕ್ರಗಳನ್ನು ಹಾಗೂ ಏಳನೆಯದಾದ ಸಹಸ್ರಾರ ಚಕ್ರದಲ್ಲಿ ಪ್ರತಿಷ್ಠಿತವಾದೊಡನೆ ಯೋಗಿಗೆ ಸಮಾಧಿ ಸಿದ್ದಿ ಲಭಿಸುತ್ತದೆ.

    ‘ಮುಚ್ಯತೇ ಬಂಧಾದಿತಿ ಮೋಕ್ಷಃ’- ಬಂಧನದಿಂದ ಮುಕ್ತನಾಗುವಿಕೆಯೇ ಮೋಕ್ಷ.’ ಸಾಕ್ಷಾತ್ಕಾರ, ಅಪರೋಕ್ಷಾನುಭೂತಿ ಮುಕ್ತಿ ಎಂದರೂ ಅದೇ ಮೋಕ್ಷ. ಮೋಹದ ಕ್ಷಯವೇ ಮೋಕ್ಷ. ವಿಶೇಷತಃ ದರ್ಶನಕಾರರು ಒಂದೇ ತತ್ತ್ವದ ನಿರ್ದೇಶನಕ್ಕೆ ತಮ್ಮ ತಮ್ಮದೇ ಆದ ಪಾರಿಭಾಷಿಕ ಶಬ್ದಗಳನ್ನು ಬಳಸುತ್ತಾರೆ. ವೈಶೇಷಿಕರು ನಿಃಶ್ರೇಯಸ ಎಂಬ ಪದವನ್ನೂ ಸಾಂಖ್ಯಕಾರರು -ಅತ್ಯಂತ ಪುರುಷಾರ್ಥ ಕೈವಲ್ಯ, ಮುಕ್ತಿ ಎಂಬೀ ಪದವನ್ನು ಉಪಯೋಗಿಸಿದ್ದಾರೆ. ವ್ಯಾಸ ಮಹರ್ಷಿಯು ಮೋಕ್ಷ ಶಬ್ದವನ್ನೇ ಗ್ರಹಿಸಿದ್ದಾರೆ. ಆ ಸ್ಥಿತಿ ಯಲ್ಲಿ ಪರಮಾತ್ಮನಿಗಿರುವ ಸಮಸ್ತ ಭೋಗಗಳೂ ಲಭಿಸುವವು. ಮುಕ್ತರಿಗೆ ಬೇರಾವ ಅಧಿಪತಿಗಳೂ ಇರರು. ಆದರೆ ಸೃಷ್ಟಿ-ಸ್ಥಿತಿ-ಪ್ರಳಯ ಶಕ್ತಿ ಮಾತ್ರ ಇರದು ಎಂದಿದ್ದಾರೆ. ಮಹರ್ಷಿ ಜೈಮಿನಿ ಯಜ್ಞಾದಿ ಕರ್ಮಗಳಿಂದಲೇ ಅಪವರ್ಗದ ಪ್ರಾಪ್ತಿಯನ್ನು ಒಪ್ಪುತ್ತಾರೆ.

    ನ್ಯಾಯದರ್ಶನಕಾರರು ಅಪವರ್ಗ ಎಂದಿದ್ದಾರೆ. ಮಹರ್ಷಿ ಪತಂಜಲಿಯು ‘ಕೈವಲ್ಯ’ ಎಂಬ ಪದ ಬಳಸಿ ಅದಕ್ಕೆ ಅತ್ಯಂತ ವೈಶಿಷ್ಟ್ಯವೀಯಲು ತಮ್ಮ ಕೃತಿಯ ಅಂತಿಮ ಪಾದವನ್ನು ‘ಕೈವಲ್ಯಪಾದ’ ಎಂದೇ ಕರೆದಿದ್ದಾರೆ. ಆದರೂ ಪತಂಜಲಿಯು ಅಪವರ್ಗ ಶಬ್ದಕ್ಕೂ ಬಹಿಷ್ಕಾರ ಹಾಕಿಲ್ಲ. ಅಪರೋಕ್ಷ ಸ್ವರೂಪಜ್ಞಾನಸಿದ್ದಿ ಮುಂತಾದ ಶಬ್ದವು ದ್ವೈತ ಮತದಲ್ಲಿ ಬಳಕೆಯಲ್ಲಿದೆ. ಶಬ್ದಾಂತರದಿಂದ ಉದ್ವೇಶ್ಯಾಂತರವಾದೀತೆಂದು ಯಾರೂ ಭಾವಿಸಬಾರದು. ವಸ್ತುತಃ ಈ ಅಪವರ್ಗ, ಮುಕ್ತಿ-ಮೋಕ್ಷ, ಕೈವಲ್ಯ ನಿಃಶ್ರೇಯಸ, ಅಪರೋಕ್ಷ ಮೊದಲಾದ ಸಮಸ್ತ ತತ್ತ್ವಗಳನ್ನೂ ತನ್ನ ವಿಶಾಲ ಗರ್ಭದಲ್ಲಿ ಅಡಗಿಸಿಕೊಂಡಿದೆ. ವೇದಧರ್ಮವು ‘ಯಾವುದೇ ವಿಘ್ನ ಬಾಧೆಗಳಿಗೂ ಭಾಗದ ಅದಮ್ಯಾತ್ಮನಾಗಿ ವಿದ್ವಾಂಸನು ಪಾಶಗಳನ್ನು ಕಡಿದೆಸೆಯಬೇಕು’ ಎಂದಾಗಲೂ, ಮಾನವನು ಸತ್ಕರ್ಮಗಳನ್ನು ಮಾಡುತ್ತಲೇ ನೂರು ವರ್ಷ ಜೀವಿಸಬೇಕು’ ಎಂದು ಆಶಿಸುತ್ತದೆ.

    ಜೀವನ ಬಂಧನಕ್ಕೆ ಕಾರಣ ವೇನು? ಕೈವಲ್ಯ ಪ್ರಾಪ್ತವಾಗದೆ ಸಿಕ್ಕಿ ಕೊಳ್ಳುವವನೇಕೆ? ಎಂಬುದಕ್ಕೆ ಪತಂಜಲಿಯು ಪಂಚಕೋಶಗಳಿಗೆ ಗುರಿಯಾಗುವುದರಿಂದಲೇ ಎಂದು ಉತ್ತರ ಕೊಡುತ್ತಾರೆ. ಅವಿದ್ಯಾ, ಅಸ್ಮಿತಾ, ರಾಗ, ದ್ವೇಷ, ಅಭಿನಿವೇಶ ಎಂಬ ಈ ಐದು ಕ್ಲೇಶಗಳಿಗೆ ಸೋತಾಗಲೇ ಜೀವನದ ಬದ್ದತ್ವಾವಸ್ಥೆ ಅಭಿವ್ಯಕ್ತವಾಗುತ್ತದೆ.

    ವೇದ ಪ್ರಮಾಣವಾದಿಗಳೆಲ್ಲರ ಅಭಿಪ್ರಾಯವೂ ಒಂದೇ. ಧಾರಣಾ ಧ್ಯಾನ ಸಮಾಧಿಗಳ ಸಂಯುಕ್ತ ರೂಪ ಎಂದರೆ ಸಂಯಮದ ಶೈಥಿಲ್ಯದಿಂದ ಅಲ್ಪಜ್ಞ ಜೀವನಿಗೆ ಹುಟ್ಟುವ ಅಜ್ಞಾನ. ಇದೇ ಅಜ್ಞಾನ ಅವಿದ್ಯೆಯೆಂದರೂ ಆದೀತು. ಜೀವನ ಬಂಧನಕ್ಕೆ ಕಾರಣ. ಕೇವಲ ಈಶ್ವರ ಸ್ತುತಿ, ಪ್ರಾರ್ಥನೆ, ಉಪಾಸನೆಯಿಂದ ಈ ಬಂಧನ ಹರಿಯದು. ಪರಮಾತ್ಮನ ಅನುಗ್ರಹ, ಸಂಯಮ ನಿಯಮಗಳ ಸಾಧನೆ, ಅಭ್ಯಾಸ ವೈರಾಗ್ಯಗಳಿಂದ ಮಾತ್ರ ಸಾಧ್ಯವಾಗುವುದು. ಪ್ರಕೃತಿ-ಪುರುಷ ಸಂಯೋಗವೇ ಬಂಧನ. ಅದರ ವಿಯೋಗವೇ ಮೋಕ್ಷ’ ಎಂಬುದೇ ದಾರ್ಶನಿಕರೆಲ್ಲರ ಮತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts