More

    ಇಂದು ಅಂತಾರಾಷ್ಟ್ರೀಯ ಯೋಗ ದಿನ: ಯೋಗದಿಂದ ಆರೋಗ್ಯ, ಸಾಮರಸ್ಯ, ಶಾಂತಿ

    ಇಂದು ಅಂತಾರಾಷ್ಟ್ರೀಯ ಯೋಗ ದಿನ: ಯೋಗದಿಂದ ಆರೋಗ್ಯ, ಸಾಮರಸ್ಯ, ಶಾಂತಿ

    ಪ್ರಧಾನಿ ನರೇಂದ್ರ ಮೋದಿ 2014 ರ ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಮಹಾಧಿವೇಶನದ ತಮ್ಮ ಭಾಷಣದಲ್ಲಿ ಯೋಗ ದಿನ ಕುರಿತು ಪ್ರಸ್ತಾಪಿಸಿದ್ದರು. ಇದಕ್ಕೆ ಅನುಸಾರವಾಗಿ ವಿಶ್ವಸಂಸ್ಥೆಯು ಜೂನ್ 21 ನ್ನು ಅಂತಾರಾಷ್ಟ್ರೀಯ ಯೋಗ ದಿನ ಅಥವಾ ವಿಶ್ವ ಯೋಗ ದಿನವೆಂದು ಘೊಷಿಸುವ ನಿರ್ಣಯವನ್ನು 2014 ರ ಡಿಸೆಂಬರ್ 11 ಕೈಗೊಂಡಿತು. ಈ ನಿರ್ಣಯವನ್ನು ಜಾಗತಿಕವಾಗಿಸಿದ್ದು ಮತ್ತು ಅದ್ಭುತವಾಗಿಸಿದ್ದು ಯೋಗದ ಸಾರ್ವತ್ರಿಕತೆ ಮತ್ತು ಸ್ವೀಕಾರಾರ್ಹತೆ. ಜಗತ್ತು ಭೌಗೋಳಿಕವಾಗಿ ವಿಂಗಡಿಸಲ್ಪಟ್ಟಿದೆ ಮತ್ತು ಯೋಗದಿಂದ ಒಂದಾಗಿದೆ. 177 ಕ್ಕೂ ಹೆಚ್ಚು ದೇಶಗಳು ಅಂತಾರಾಷ್ಟ್ರೀಯ ಯೋಗ ದಿನವನ್ನು ಬೆಂಬಲಿಸಿದವು. ಅಲ್ಲದೇ 175 ದೇಶಗಳು ಈ ನಿರ್ಣಯವನ್ನು ಸಹ-ಪ್ರಾಯೋಜಿಸಿದವು. ವಿಶ್ವಸಂಸ್ಥೆಯಲ್ಲಿ ಈ ಉಪಕ್ರಮವನ್ನು ಪ್ರಸ್ತಾಪಿಸಿ, ಜಾರಿಗೆ ತರಲು ತೆಗೆದುಕೊಂಡ ಅವಧಿ 90 ದಿನಗಳಿಗಿಂತ ಕಡಿಮೆ. ಇದು ವಿಶ್ವಸಂಸ್ಥೆಯ ಮಹಾಧಿವೇಶನದ ಇತಿಹಾಸದಲ್ಲಿ ಪ್ರಥಮ. ಸ್ವಾತಂತ್ರಾ್ಯನಂತರದ 73 ವರ್ಷಗಳಲ್ಲಿ ಸಾಧಿಸಲು ಸಾಧ್ಯವಾಗದ್ದನ್ನು ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಸಾಧಿಸಿದರು. ಇದರಿಂದಾಗಿ ‘5000 ವರ್ಷಗಳಷ್ಟು ಹಳೆಯದಾದ ನಮ್ಮ ಯೋಗ ಪರಂಪರೆಗೆ ನಿಜವಾದ ಮಾನ್ಯತೆ’ ದಕ್ಕಿತು. ‘ಯೋಗವು ಆರೋಗ್ಯ ಮತ್ತು ಯೋಗಕ್ಷೇಮದ ಸಾರ್ವತ್ರಿಕ ಆಕಾಂಕ್ಷೆಯ ಸಂಕೇತವಾಗಿದೆ. ಇದೊಂದು ಶೂನ್ಯ ಬಜೆಟ್​ನ ಆರೋಗ್ಯದ ಭರವಸೆಯಾಗಿದೆ. ಜಗತ್ತು ಅನಾರೋಗ್ಯದಿಂದ ಸ್ವಾಸ್ಥ್ಯದೆಡೆಗೆ ಸಾಗಲು ಯೋಗವು ದಾರಿ ತೋರಿಸುತ್ತದೆ’ ಎಂದು ಪ್ರಧಾನಿಯವರು ಸಂಕ್ಷಿಪ್ತವಾಗಿ ಯೋಗದ ಬಗ್ಗೆ ವಿವರಿಸಿದ್ದಾರೆ. ‘ಯೋಗ’ ಒಂದು ಧರ್ಮವಲ್ಲ. ಇದು ಸ್ವಾಸ್ಥ್ಯದಿಂದ ಕೂಡಿದ, ತಾರುಣ್ಯಭರಿತ

    ವಾದ ಮತ್ತು ಮನಸ್ಸು, ದೇಹ ಹಾಗೂ ಆತ್ಮದ ನಡುವಿನ ಸಮನ್ವಯದ ವಿಜ್ಞಾನವಾಗಿದೆ. ಯೋಗ ಮಾನವ ಸಂಕುಲಕ್ಕೆ ಸಾಮರಸ್ಯ ಮತ್ತು ಶಾಂತಿಯನ್ನು ನೀಡುತ್ತದೆ.

    ಪತಂಜಲಿ ಮಹರ್ಷಿಯ ‘ಪತಂಜಲಿ ಯೋಗಸೂತ್ರ’ ಗ್ರಂಥ ಹೆಸರುವಾಸಿ. ಭಗವದ್ಗೀತೆ ಮತ್ತು ಉಪನಿಷತ್ತುಗಳಂತಹ ಹಿಂದೂ ಧರ್ಮಗ್ರಂಥಗಳಿಂದ ಯೋಗ ಮತ್ತು ಯೋಗಾಭ್ಯಾಸಗಳ ಸಾರವನ್ನು ಭಾಷಾಂತರಿಸಿದ ಕೀರ್ತಿ ಶ್ರೀ ಅರಬಿಂದೋ ಅವರಿಗೆ ಸಲ್ಲುತ್ತದೆ. ಬಿ.ಕೆ.ಎಸ್. ಅಯ್ಯಂಗಾರ್ ಮತ್ತು ಪರಮಹಂಸ ಯೋಗಾನಂದ ಮುಂತಾದವರು ಯೋಗದ ಜ್ಞಾನವನ್ನು ವಿಶ್ವದಾದ್ಯಂತ ಪಸರಿಸಿದ್ದಾರೆ. ಸ್ವಾಮಿ ವಿವೇಕಾನಂದರು ಪಾಶ್ಚಿಮಾತ್ಯದಲ್ಲಿ ಯೋಗದ ಶ್ರೇಷ್ಠ ಪ್ರತಿಪಾದಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ವೇದಾಂತ ಮತ್ತು ಯೋಗದ ಭಾರತೀಯ ತತ್ತ್ವಚಿಂತನೆಗಳನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದ ಪ್ರಮುಖರು.

    ಇಂದು ಯೋಗವನ್ನು ಜಾಗತೀಕರಣದ ಅತ್ಯಂತ ಯಶಸ್ವಿ ಉತ್ಪನ್ನವೆಂದು ಪರಿಗಣಿಸಲಾಗಿದೆ. ಯಾವುದೇ ಪ್ರದೇಶ ಮತ್ತು ಧರ್ಮವನ್ನು ಪರಿಗಣಿ ಸದೇ ಜಗತ್ತಿನಾದ್ಯಂತ ಯೋಗ ಉತ್ಸವಗಳನ್ನು ಆಯೋಜಿಸ ಲಾಗುತ್ತದೆ. ಯೋಗವು ವಿಭಜಿತ ಜಗತ್ತನ್ನು ಆರೋಗ್ಯ ಮತ್ತು ಸಂತೋಷದ ಕೇಂದ್ರಬಿಂದುವಿನೊಂದಿಗೆ ಬೆಸೆಯುವ ಜಾತ್ಯತೀತ ಸ್ವರವಾಗಿದೆ. ಪ್ರಪಂಚವು ಚದುರಿಹೋದಾಗ ಯೋಗವು ಜನರು, ಕುಟುಂಬ, ಸಮಾಜ ಮತ್ತು ರಾಷ್ಟ್ರಗಳನ್ನು ಒಟ್ಟಾಗಿಸುತ್ತದೆ. ಪಾಶ್ಚಿಮಾತ್ಯ ರಲ್ಲಿ ಯೋಗವು ಸಾಮಾನ್ಯ ಪೂರಕ ಆರೋಗ್ಯ ವಿಧಾನವಾಗಿರುವುದು ಮತ್ತು ಯೋಗದ ಪ್ರಯೋಜನಗಳನ್ನು ಜಗತ್ತು ತಿಳಿದುಕೊಳ್ಳುತ್ತಿರುವುದು ನಮ್ಮನ್ನು ಪುಳಕಗೊಳಿಸುತ್ತದೆ. ಧ್ಯಾನ ಮತ್ತ ಯೋಗಗಳ ಸಮ್ಮಿಳನವು ವಯಸ್ಸಾಗುವ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ ಮತ್ತು ಅನೇಕ ರೋಗಗಳಿಂದ ರಕ್ಷಣೆ ಪಡೆಯಲು ಸಹಾಯ ಮಾಡುತ್ತದೆ ಎಂದು ಅಮೆರಿಕಾದ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ವರದಿಯಲ್ಲಿ ಹೇಳಲಾಗಿದೆ. ಯೋಗವು ಭಾವನಾತ್ಮಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೂ ಸಹಾಯ ಮಾಡುತ್ತದೆ. ಇದು ನಮ್ಮ ಜೀವಮಾನಕ್ಕೆ ವರ್ಷಗಳನ್ನಷ್ಟೇ ಸೇರಿಸುವುದಿಲ್ಲ, ಜೀವವನ್ನೂ ತುಂಬುತ್ತದೆ. ಯೋಗಾಭ್ಯಾಸದಿಂದ ರೋಗನಿರೋಧಕ ಕೋಶಗಳ ಪ್ರಸರಣವನ್ನು ಉತ್ತೇಜಿಸುವ ಆಣ್ವಿಕ ಬದಲಾವಣೆಗಳು ಉಂಟಾಗುತ್ತವೆ ಎಂದು ಸಂಶೋಧನೆಗಳು ತೋರಿಸಿವೆ. ಯೋಗ ಯಾವಾಗಲೂ ಆರೋಗ್ಯ ಮತ್ತು ದೈಹಿಕ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಅಮೆರಿಕಾವು ಯೋಗವನ್ನು ಅಧಿಕೃತ ಕ್ರೀಡೆಯೆಂದು ಪರಿಗಣಿಸಿದ ನಂತರ ಒಲಿಂಪಿಕ್ಸ್ ನಲ್ಲಿ ಯೋಗವು ಸ್ಪರ್ಧಾತ್ಮಕ ಕ್ರೀಡೆಯಾಗಬಹುದು ಎಂಬ ಮಾತು ಕೂಡ ಕೇಳಿಬರುತ್ತಿವೆ.

    ಸದ್ಯದ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹಾಲಿವುಡ್​ನಿಂದ ಹರಿದ್ವಾರದವರೆಗೆ, ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರೂ ಯೋಗಾಭ್ಯಾಸದ ಪ್ರಯೋಜನ ಗಳನ್ನು ಗಂಭೀರವಾಗಿ ತಿಳಿದಿದ್ದಾರೆ. ನಾನು ಯೋಗ ಮತ್ತು ಆಯುರ್ವೇದದ ತೊಟ್ಟಿಲಾಗಿರುವ ಹಿಮಾಲಯದ ರಾಜ್ಯ ದೇವಭೂಮಿ ಉತ್ತರಾಖಂಡಕ್ಕೆ ಸೇರಿದವನು. ಕರೊನಾ ಸಂಕಟದ ಸನ್ನಿವೇಶದಲ್ಲಿ ಇಡೀ ಜಗತ್ತು ನಮ್ಮತ್ತ ನೋಡುತ್ತಿದೆ. ಇಡೀ ಪ್ರಪಂಚವು ನಾಲ್ಕು ಗೋಡೆಗಳೊಳಗೆ ಸೀಮಿತಗೊಂಡಿರುವಾಗ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಜೀವನದ ಸಮತೋಲನವನ್ನು ಕಾಪಾಡಿಕೊಳ್ಳಲು ಯೋಗವು ಅತ್ಯಂತ ಪರಿಣಾಮಕಾರಿ ಆರೋಗ್ಯ ಸಾಧನವಾಗಿ ಹೊರಹೊಮ್ಮಿದೆ. ನಾವು ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರತೀ ವರ್ಷವೂ ಉತ್ಸಾಹದಿಂದ ಆಚರಿಸುತ್ತಿದ್ದೆವು. ಆದರೆ ಕೋವಿಡ್-19ರ ಕಾರಣದಿಂದಾಗಿ, ಈ ಸಲ ದೈಹಿಕ ಅಂತರವನ್ನು ಅಳವಡಿಸಿಕೊಂಡು, ನಮ್ಮ ಕುಟುಂಬದೊಂದಿಗೆ ಯೋಗ ದಿನವನ್ನು ನಿರ್ಬಂಧಿತ ಸ್ಥಳಗಳಲ್ಲಿ ಆಚರಿಸಬೇಕಾಗಿದೆ. ಕಳೆದ ಐದು ವರ್ಷಗಳಲ್ಲಿ ನಾವು ಸಾಧಿಸಿರುವ ವಿಶ್ವ ಯೋಗ ದಿನದ ಉತ್ಸಾಹವನ್ನು ಕೋವಿಡ್- 19 ಕುಗ್ಗಿಸಲು ಬಿಡಬಾರದು ಎಂದು ನಾನು ಸಮಸ್ತ ದೇಶಗಳಿಗೆ ಮತ್ತು ವಿಶ್ವ ಸಮುದಾಯಕ್ಕೆ ಮನವಿ ಮಾಡುತ್ತೇನೆ. ಕರೊನಾದ ಮಾನಸಿಕ-ಸಾಮಾಜಿಕ ಪರಿಣಾಮವನ್ನು ಎದುರಿಸಲು ಯೋಗ ಮತ್ತು ಧ್ಯಾನ ಅತ್ಯುತ್ತಮ ಚಿಕಿತ್ಸೆಯಾಗಿದೆ ಎಂದು ವಿವಿಧ ವರದಿಗಳು ಮತ್ತು ಅಧ್ಯಯನಗಳು ಸಾಬೀತುಪಡಿಸಿವೆ. ಯೋಗವು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುವ ವಿವಿಧ ಪ್ರಾಣಾಯಾಮಗಳನ್ನೂ ಹೊಂದಿದೆ. ಕರೊನಾ ವೈರಸ್ ಪರಿಣಾಮಗಳನ್ನು ಪ್ರಾಣಾಯಾಮ ಹೇಗೆ ಎದುರಿಸಬಲ್ಲದು ಎಂಬ ಬಗ್ಗೆ ಅಧ್ಯಯನಗಳನ್ನು ನಡೆಸ ಬೇಕಾಗಿದೆ. ಯೋಗವು ನಿಜವಾಗಿಯೂ ಸಮುದಾಯಕ್ಕೆ, ರೋಗ ನಿರೋಧಕತೆಗೆ ಮತ್ತು ಏಕತೆಗೆ ಸಂಜೀವಿನಿಯಾಗಿದೆ. ಯುಗಯುಗಗಳಿಂದಲೂ ಯೋಗ, ಆಯುರ್ವೇದ ಮತ್ತು ಅಧ್ಯಾತ್ಮವು ಜಾಗತಿಕ ಸಮುದಾಯಕ್ಕೆ ನಮ್ಮ ಸಂದೇಶವಾಗಿದೆ ಮತ್ತು ಇಂದು ಹೆಚ್ಚು ಪ್ರಸ್ತುತವಾಗಿದೆ. ಯೋಗ ನಿಸ್ಸಂದೇಹವಾಗಿ ಜಾಗತಿಕ ಶಾಂತಿ ಮತ್ತು ಸಾಮರಸ್ಯದ ಹೆಬ್ಬಾಗಿಲೇ ಸರಿ.

    (ಲೇಖಕರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts