More

    ಮಹಾಜನ ಕಾಲೇಜಿನಲ್ಲಿ ರಾಷ್ಟ್ರೀಯ ಯೋಗೋತ್ಸವ

    ನಗರದ ಜಯಲಕ್ಷ್ಮೀಪುರಂನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಮಂಗಳವಾರ ‘ರಾಷ್ಟ್ರೀಯ ಯೋಗೋತ್ಸವ’ ಕಾರ್ಯಕ್ರಮ ನೆರವೇರಿತು.

    ಅಂತಾರಾಷ್ಟ್ರೀಯ ಯೋಗ ದಿನದ ಪೂರ್ವಭಾವಿ ಚಟುವಟಿಕೆಯಾಗಿ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ, ಮುರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ಮಹಾಜನ ಶಿಕ್ಷಣ ಸಂಸ್ಥೆ ಹಾಗೂ ವೇದವ್ಯಾಸ ಯೋಗ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರದ ನೂರಾರು ಯೋಗಪಟುಗಳು ಯೋಗ ಪ್ರದರ್ಶನ ನೀಡಿದರು.

    ಮೇಯರ್ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ನೀಗಿಸುವಲ್ಲಿ ಯೋಗ ಪರಿಣಾಮಕಾರಿಯಾಗಿದೆ. ಮೈಸೂರು ಅರಮನೆ ನಗರಿ, ಸಾಂಸ್ಕೃತಿಕ ನಗರಿ ಎಂದು ಪ್ರಸಿದ್ಧಿಯಾಗಿರುವಂತೆ ‘ಯೋಗ ನಗರಿ’ ಎಂಬ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಮೂಲ ಕಾರಣಕರ್ತರು ನಾಲ್ವಡಿ ಕೃಷ್ಣರಾಜ ಒಡೆಯರ್. ಅವರು ಮೈಸೂರಿಗೆ ನೀಡಿದ ಅಪಾರ ಕೊಡುಗೆಗಳಲ್ಲಿ ಯೋಗ ತರಬೇತಿ ಕೂಡ ವಿಶ್ವವಿಖ್ಯಾತವಾಗಿದೆ. ಅವರು ಚಿತ್ರದುರ್ಗದ ಕೃಷ್ಣಮಾಚಾರ್ಯರನ್ನು ಆಹ್ವಾನಿಸಿ ಮೈಸೂರಿನಲ್ಲಿ ಯೋಗ ಪ್ರದರ್ಶನ ಮಾಡಿಸಿ ಸಂಸ್ಕೃತ ಶಾಲೆಯನ್ನು ತೆರೆದು ಸಂಸ್ಥಾನದಲ್ಲಿದ್ದ ಶಾಲಾ ಮಕ್ಕಳಿಗೆ ಉಚಿತ ಯೋಗ ತರಬೇತಿ ನೀಡಿದ್ದು ಇತಿಹಾಸ. ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು, ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಲು ಯೋಗಾಭ್ಯಾಸ ಪೂರಕವಾಗಿದೆ ಎಂದರು.

    ಯೋಗ ಹಾಗೂ ಪ್ರಾಣಾಯಾಮ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ದೃಢತೆ ಹೆಚ್ಚುತ್ತದೆ. ವಿದ್ಯಾರ್ಥಿಗಳು ತಮಗೆ ಎದುರಾದ ಸನ್ನಿವೇಶಗಳನ್ನು ಸಮಚಿತ್ತವಾಗಿ ನಿಭಾಯಿಸಲು ಹಾಗೂ ಅವರ ಎಲ್ಲ ಯಶಸ್ಸಿಗೆ ಯೋಗಾಭ್ಯಾಸ ಅತ್ಯಗತ್ಯ ಎಂದರು.

    ವೇದವ್ಯಾಸ ಯೋಗ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ.ಕೆ.ರಾಘವೇಂದ್ರ ಪೈ ಮಾತನಾಡಿ, ಭಾರತದ ಅನರ್ಘ್ಯ ಕೊಡುಗೆಗಳಲ್ಲಿ ಯೋಗ ಸಹ ಒಂದು. ವಿಶ್ವದ ಸಾಮಾನ್ಯ ಸಭೆಯಲ್ಲಿ 179 ರಾಷ್ಟ್ರಗಳ ಪೈಕಿ 177 ದೇಶಗಳು ಭಾಗವಹಿಸಿ ಭಾರತ ಪ್ರಧಾನಿ ನರೇಂದ್ರ ಮೋದಿಯವರು ಯೋಗ ಕುರಿತು ಮಂಡಿಸಿದಾಗ ಯೋಗಕ್ಕೆ ವಿಶ್ವ ಮಾನ್ಯತೆಯನ್ನು ಅವಿರೋಧವಾಗಿ ನೀಡಿದರು. ಅದರಂತೆ ಜೂನ್ 21ನೇ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ದೊಡ್ಡದು. ಭಾರತದಲ್ಲಿ ಯೋಗಕ್ಕೆ ನೂರಾರು ವರ್ಷಗಳಷ್ಟು ಇತಿಹಾಸವಿದೆ. ಕಳೆದ ವರ್ಷ ನಡೆದ 8ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತದ ಪ್ರಧಾನಿ ಮೈಸೂರಿಗೆ ಆಗಮಿಸಿ ಅರಮನೆ ಆವರಣದಲ್ಲಿ ಯೋಗದ ವಿವಿಧ ಆಸನಗಳನ್ನು ಸಾರ್ವಜನಿಕರೊಂದಿಗೆ ಪ್ರದರ್ಶಿಸಿ ಇತಿಹಾಸ ಸೃಷ್ಟಿಸಿದರು. ಭಾರತದ 5 ಪ್ರಮುಖ ಯೋಗ ಕೇಂದ್ರಗಳಲ್ಲಿ ಮೈಸೂರು ಒಂದು ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ ಎಂದರು.

    ಇದೇ ವೇಳೆ ‘ಶಿಕ್ಷಣದಲ್ಲಿ ಯೋಗದ ಮಹತ್ವ’ ವಿಷಯ ಕುರಿತಂತೆ ವಿಶೇಷ ಉಪನ್ಯಾಸ ಮತ್ತು ಸಂವಾದ ನೆರವೇರಿತು. ವಿದ್ಯಾರ್ಥಿ ಜೀವನದಲ್ಲಿ ಯೋಗದ ಮಹತ್ವ ಕುರಿತು ಸ್ವಾಮಿ ಮಹಮೇದಾನಂದಜೀ ಮಹಾರಾಜ್ ಮಾತನಾಡಿದರು. ‘ ಓದಿನಲ್ಲಿ ಎದುರಾಗುವ ಸವಾಲುಗಳಿಗೆ ಯೋಗೋಪಾಯಗಳು’ ಕುರಿತು ಯೋಗಾಚಾರ್ಯ ಡಾ. ಪಿ.ಎನ್.ಗಣೇಶ್ ಕುಮಾರ್ ಮಾತನಾಡಿದರು. ‘ಉತ್ತಮ ವಿದ್ಯಾರ್ಥಿ ಜೀವನಕ್ಕೆ ಭಗವದ್ಗೀತೆಯ ಪಾಠಗಳು ವಿಷಯ’ ಕುರಿತು ಪಿ.ಡಿ.ಜಿ.ರಂಗ ಕೃಷ್ಣ(ನಿವೃತ್ತ) ಅವರು ಉಪನ್ಯಾಸ ನೀಡಿದರು.

    ಮಹಾಜನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಟಿ.ಮುರಳೀಧರ ಭಾಗವತ್, ಗೌರವ ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ಮುರಳೀಧರ್, ಪ್ರಾಚಾರ್ಯ ಡಾ.ಬಿ.ಆರ್.ಜಯಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಡೀನ್ ಡಾ.ಶ್ರೀಧರ, ಪ್ರಾಧ್ಯಾಪಕಿ ಶಮಿಕಾ ಶ್ರೀಹರಿ ಇತರರಿದ್ದರು.
    ಕಾರ್ಯಕ್ರಮದಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಎನ್‌ಸಿಸಿ, ಕೆಡೆಟ್ಸ್, ಎನ್‌ಎಸ್‌ಎಸ್ ಸ್ವಯಂ ಸೇವಕರು, ಕಾಲೇಜಿನ ಸ್ವಯಂ ಸೇವಕರು ಇತರ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts