More

    ಮಕ್ಕಳಲ್ಲಿ ಉತ್ಸಾಹ ತುಂಬಿ, ನೈರಾಶ್ಯವನ್ನಲ್ಲ…

    ಮಕ್ಕಳಲ್ಲಿನ ಅತಿ ಮುಖ್ಯವಾದ ದುರ್ಲಕ್ಷಣವೆಂದರೆ ಸೋಮಾರಿತನ. ಹೀಗೆಂದರೆ ಅಗತ್ಯವಾದ ಕೆಲಸವನ್ನು ಬಿಟ್ಟು ಇಷ್ಟವಾದ ಕೆಲಸವನ್ನು ಮಾಡುವುದು. ಸೋಮಾರಿತನಕ್ಕೆ ಉತ್ಸಾಹ ಮೊದಲ ಶತ್ರುವಾದರೆ, ನಿದ್ರೆ ಮೊದಲ ಮಿತ್ರ. ಹಾಗಾಗಿ ಮಕ್ಕಳಿಗೆ ಶಿಸ್ತಿನ, ಸೃಜನಾತ್ಮಕ ಚಟುವಟಿಕೆಗಳನ್ನು ಪಾಲಕರು ಕಲಿಸಿ ಕೊಡಬೇಕು.

    ಬಾಲ್ಯಕ್ಕಿಂತಲೂ ಟೀನೇಜ್​ನಲ್ಲೇ ಮಕ್ಕಳಿಗೆ ಹಿರಿಯರ ಅಗತ್ಯ ಹೆಚ್ಚಾಗಿರುತ್ತದೆ. ಹದಿನಾಲ್ಕು ದಾಟಿದ ಮಕ್ಕಳಲ್ಲಿ ಶೇಕಡ 30 ಮಕ್ಕಳು ಒಂಟಿತನ, ಕೆಟ್ಟಸ್ನೇಹ, ಅತಿಯಾದ ಆತ್ಮವಿಶ್ವಾಸ ಅಥವಾ ಹೇಡಿತನ, ಸಿಟ್ಟು, ಸೋಮಾರಿತನ, ಅತಿಮಾತು, ಹೈಪರ್ ಆಕ್ಟಿವಿಟಿಗಳಲ್ಲಿ ಯಾವುದಾದರೂ ಎರಡು ಇಲ್ಲವೇ ಮೂರರಿಂದ ಬಾಧೆ ಪಡುತ್ತಾರೆ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ತಾಯಿ ಮಾತು ಕೇಳದೆ ಡಾಮಿನೇಟ್ ಮಾಡುವವರು ಹತ್ತರಲ್ಲಿ ಮೂವರಾದರೂ ಇರುತ್ತಾರಂತೆ. ಶೇ.30 ಮಕ್ಕಳು ತಂದೆ ಜತೆ ಸರಿಯಾಗಿ ಮಾತನಾಡುವುದಿಲ್ಲವಂತೆ.

    ಮಕ್ಕಳಲ್ಲಿ ಉತ್ಸಾಹ ತುಂಬಿ, ನೈರಾಶ್ಯವನ್ನಲ್ಲ...ಮಕ್ಕಳ ಮೇಲೆ ತಂದೆಯ ಪ್ರಭಾವ: ಯುಕ್ತ ವಯಸ್ಸಿನ ಹುಡುಗಿಗೆ ಅತಿ ಮುಖ್ಯವಾದ ವ್ಯಕ್ತಿಯೆಂದರೆ ಅವಳ ತಂದೆ, ಗೆಳತಿ ಅವಳ ತಾಯಿ. ತಂದೆ ರಕ್ಷಣೆ ಕೊಡುತ್ತಿರುವಾಗ, ತಾಯಿ ಮಾರ್ಗದರ್ಶನ ಮಾಡುತ್ತಿರುವಾಗ ಅವಳಿಗೆ ತನ್ನಲ್ಲಾಗುತ್ತಿರುವ ದೈಹಿಕ, ಮಾನಸಿಕ ಬದಲಾವಣೆಗಳನ್ನು ಅಂಗೀಕರಿಸುವ ಧೈರ್ಯ ಬರುತ್ತದೆ. ಎಲ್ಲಿ ತಂದೆ ಸ್ನೇಹದಿಂದಲೂ, ಅಣ್ಣತಮ್ಮಂದಿರು ಅಭಿಮಾನದಿಂದಲೂ, ತಾಯಿ ದಯಾಪೂರಿತಳಾಗಿಯೂ, ಮನೆಯ ವಾತಾವರಣ ಆಹ್ಲಾದಕರವಾಗಿಯೂ ಇರುವುದೋ ಅಲ್ಲಿ ಬೆಳೆದ ಹುಡುಗಿಯರು ಹೊರಗಿನ ಪ್ರೀತಿಗೆ ಹಂಬಲಿಸುವುದಿಲ್ಲ. ಆಹ್ಲಾದಕರ ಎಂದರೆ ವೈಭವದಿಂದ, ಶ್ರೀಮಂತಿಕೆಯಿಂದ, ಸುಖದಿಂದ ಎಂದರ್ಥವಲ್ಲ. ಐಡೆಂಟಿಟಿ ಕ್ರೖೆಸಿಸ್, ಕೆಟ್ಟ ಸ್ನೇಹದ ಪ್ರಭಾವ ಮುಂತಾದವುಗಳ ಕಾಟವಿಲ್ಲದ ವಾತಾವರಣ!

    ಮಗಳು ಪ್ರೇಮದಲ್ಲಿ ಬಿದ್ದಿದ್ದಾಳೆ ಎಂದು ತಿಳಿದ ತಕ್ಷಣ ಮನೆಯವರು ಸಮಾಜವನ್ನು, ಸಿನಿಮಾಗಳನ್ನು ಬೈಯುತ್ತಾರೆ. ಅದಕ್ಕೆ ಕಾರಣ ತಾವೇ ಎಂದು ಮಾತ್ರ ಒಪ್ಪಿಕೊಳ್ಳುವುದಿಲ್ಲ. ಮಕ್ಕಳು ಬೆಳೆದಾಗ ಮೊದಲಿನ ಹಾಗೆ ಸ್ನೇಹದಿಂದ ಇರುವುದಿಲ್ಲ ಕೆಲ ಹಿರಿಯರು. ದೊಡ್ಡವರು ಮಕ್ಕಳನ್ನು ದಿನಕ್ಕೆ ಮೂರು ಬಾರಿ (ಸರಾಸರಿ) ಬೈಯುತ್ತಾರೆಂದೂ, ವಾರಕ್ಕೆ ಹತ್ತು ಬಾರಿ ನೆಗೆಟಿವ್ ಕಾಮೆಂಟ್ಸ್ ಮಾಡುತ್ತಾರೆಂದೂ, ಕೇವಲ ಐದು ಬಾರಿ ಹೊಗಳುತ್ತಾರೆಂದೂ ತಿಳಿದುಬಂದಿದೆ. ಹೊರಗಿನ ಆಕರ್ಷಣೆಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಿಂತ ಮನೆಯಲ್ಲಿ ಆಕರ್ಷಣೆ ಬೆಳೆಸಬೇಕು. ಯಾವಾಗ ತಮಗೆ ಬೇಕಾಗಿರುವುದು ಮನೆಯಲ್ಲಿ ಸಿಗುವುದಿಲ್ಲ ಎಂದು ಮಕ್ಕಳು ಭಾವಿಸುತ್ತಾರೋ, ಆಗ ಅನ್ಯ ಮಾರ್ಗ ಹುಡುಕುತ್ತಾರೆ. ಸಿನಿಮಾ, ಸ್ನೇಹಿತರ ಪ್ರಭಾವವನ್ನು ಪಕ್ಕಕ್ಕಿಟ್ಟರೆ ಈ ಮನೆಯಿಂದ ಎಷ್ಟು ಬೇಗ ಪಾರಾಗಲಿ ಎನ್ನುವ ಯೋಚನೆಯು ಹೆಣ್ಣುಮಕ್ಕಳನ್ನು ಸಣ್ಣ ವಯಸ್ಸಿನಲ್ಲಿಯೇ ಪ್ರೇಮಪಾಶಕ್ಕೆ ಸಿಲುಕಿಸುತ್ತದೆ.

    ಪ್ರೇಮ, ಮದುವೆ-ನಂತರ ಒಂದೇ ವರ್ಷದಲ್ಲಿ ವಿಚ್ಛೇದನ… ಇದಕ್ಕೆ ಕಾರಣ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ತಿಳಿವಳಿಕೆ ಮಕ್ಕಳಲ್ಲಿ ಇಲ್ಲದಿರುವುದು. ಪ್ರೀತಿಯಲ್ಲಿ ಬಿದ್ದಾಗ ತಿಳಿವಳಿಕೆ ಹೋಗುತ್ತದೆ. ವಿದ್ಯೆಯನ್ನು ಶಾಲೆಗಳಲ್ಲಿ ಕಲಿಸುತ್ತಾರೆ. ತಿಳಿವಳಿಕೆಯನ್ನು ಮನೆಯಲ್ಲಿ ಹಿರಿಯರೇ ಕಲಿಸಬೇಕು. ಆಗ ಅವರು ದೊಡ್ಡವರಾದಾಗ ವಸ್ತುಗಳ/ವ್ಯಕ್ತಿಗಳ ಮೌಲ್ಯವನ್ನು ಗುರುತಿಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ಸಮಾಜ ಉತ್ತಮವಾಗಿ ಇರಬೇಕೆಂದು ಬಯಸುವವರು ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ಬೆಳೆಸಬೇಕು. ಅದವರ ಜವಾಬ್ದಾರಿ.

    ತಾಯಿ ಎಂದರೆ…: ಇತ್ತೀಚೆಗೆ ಬಹಳ ಪ್ರಸಿದ್ಧವಾಗಿರುವ ಒಂದು ಉದಾಹರಣೆ. ಒಬ್ಬ ಹೆಂಗಸು ಡ್ರೖೆವಿಂಗ್ ಲೈಸೆನ್ಸ್, ವೀಸಾ ಅಪ್ಲಿಕೇಶನ್ ಒಟ್ಟಿಗೇ ಸಲ್ಲಿಸಿದಳು. ಆಗ ಡ್ರೖೆವಿಂಗ್ ಲೈಸೆನ್ಸ್ ಕೊಡುವ ಅಧಿಕಾರಿ ಅರ್ಜಿ ಭರ್ತಿ ಮಾಡುತ್ತ ‘ನೀವೇನು ಕೆಲಸ ಮಾಡುತ್ತೀರಿ?’ ಎಂದು ಕೇಳಿದ. ‘ನಾನೊಬ್ಬ ತಾಯಿ’ ಎಂದಳು ಆಕೆ. ಅಧಿಕಾರಿ ಗೊಂದಲಗೊಂಡು, ‘ಇಲ್ಲಿ ತಾಯಿ ಅನ್ನುವ ಆಪ್ಶನ್ ಇಲ್ಲ ಮೇಡಂ. ಹೌಸ್​ವೈಫ್ ಎಂದು ಬರೆಯುತ್ತೇನೆ’ ಎಂದು ಹೇಳಿ ಉಳಿದ ವಿವರಗಳನ್ನು ಪೂರ್ತಿ ಮಾಡಿ ಕಳಿಸಿದ. ಆ ನಂತರ ಆಕೆ ವೀಸಾಗಾಗಿ ಹೋದಳು. ಅಲ್ಲಿನ ಅಧಿಕಾರಿಯೊಬ್ಬಳು, ‘ನಿಮ್ಮ ವೃತ್ತಿ ಏನು’ ಎಂದು ಕೇಳಿದಾಗ ಆಕೆ ‘ನಾನು ಮಕ್ಕಳ ಅಭಿವೃದ್ಧಿಗಾಗಿ ಆಹಾರ, ವ್ಯಕ್ತಿತ್ವ, ಮಾನವ ಸಂಬಂಧಗಳು ಎಂಬ ಅಂಶಗಳ ಮೇಲೆ ರೀಸರ್ಚ್ ಸ್ಕಾಲರ್’ ಎಂದು ಉತ್ತರಿಸಿದಳು. ಅಧಿಕಾರಿಗೆ ಅರ್ಥವಾಗದೆ ‘ಆ ನಾಲ್ಕು ಕ್ಷೇತ್ರಗಳಲ್ಲಿ ಒಟ್ಟಿಗೆ ರೀಸರ್ಚ್ ಮಾಡುತ್ತಿದ್ದೀರಾ?’ ಎಂದು ಕೇಳಿದಳಂತೆ. ಆಗ ಗೃಹಿಣಿ ನಗುತ್ತ ತಲೆಯಾಡಿಸಿದಳು. ಅರ್ಜಿ ಪೂರ್ತಿ ಮಾಡಿಕೊಡುತ್ತ, ‘ನನಗೆ ಸರಿಯಾಗಿ ಅರ್ಥವಾಗಲಿಲ್ಲ ಮೇಡಂ. ನೀವು ಈ ರೀಸರ್ಚ್ ಎಲ್ಲಿ ಮಾಡುತ್ತಿದ್ದೀರಿ?’ ಎಂದು ಕೇಳಿದಳು.

    ‘ನಮ್ಮ ಮನೆಯಲ್ಲಿ’ ಎಂದು ಚುಟುಕಾಗಿ ಉತ್ತರಿಸಿದಳು ಆ ಗೃಹಿಣಿ. ಆಗ ಆ ಅಧಿಕಾರಿಣಿ ಮತ್ತಷ್ಟು ಗಲಿಬಿಲಿಗೊಂಡು ನೋಡಿದಳು. ಆಗ ಗೃಹಿಣಿ ನಗುತ್ತ, ‘ನಾನು ಈ ರೀಸರ್ಚ್​ನ್ನು

    ಬಹಳ ವರ್ಷಗಳಿಂದ ಮಾಡ್ತಾ ಇದ್ದೇನೆ. ಈ ರೀಸರ್ಚ್​ಗೆ ನನಗಿಬ್ಬರು ಗೈಡ್ಸ್. ಒಬ್ಬರು ಭಗವಂತ, ಇನ್ನೊಬ್ಬರು ನನ್ನ ಗಂಡ. ಇಲ್ಲೀವರೆಗೆ ನನಗೆ ಎರಡು ಡಿಗ್ರಿಗಳು ಸಿಕ್ಕಿವೆ. ಒಬ್ಬ ಮಗ, ಒಬ್ಬಳು ಮಗಳು. ಎಲ್ಲಕ್ಕಿಂತ ಕಷ್ಟವಾದ ರೀಸರ್ಚ್ ಸ್ಕಾಲರ್ ನಮ್ಮತ್ತೆ. ನಮ್ಮ ಅಮ್ಮ ಆಗಾಗ ನನ್ನ ಪೇಪರ್ಸ್ ತಿದ್ದುತ್ತಾರೆ. ನಮ್ಮ ತಾತ, ಅಮ್ಮಮ್ಮ, ಅಜ್ಜ, ಅಜ್ಜಿ ಇವರೆಲ್ಲ ನನ್ನ ವಿಶ್ವವಿದ್ಯಾಲಯದ ಡೈರೆಕ್ಟರ್’ ಎಂದಳು.

    ಅಧಿಕಾರಿಣಿ ಪೇಪರ್ಸ್ ಪೂರ್ತಿ ಮಾಡಿ ಅವಳ ಜೊತೆ ಬಾಗಿಲವರೆಗೆ ಬಂದು ಕೈಕುಲುಕಿ, ನಗುತ್ತ ‘ತಾಯಿಗೆ ಇದಕ್ಕಿಂತ ದೊಡ್ಡ ವಿವರಣೆಯನ್ನು ನಾನು ಯಾವತ್ತೂ ಕೇಳಿರಲಿಲ್ಲ ಮೇಡಂ… ಥ್ಯಾಂಕ್ಸ್’ ಎಂದಳು.

    ಸೋಮಾರಿತನ: ಮಕ್ಕಳಲ್ಲಿನ ಅತಿ ಮುಖ್ಯವಾದ ದುರ್ಲಕ್ಷಣವೆಂದರೆ ಸೋಮಾರಿತನ. ಸೋಮಾರಿತನ ಎಂದರೆ, ಅಗತ್ಯವಾದ ಕೆಲಸವನ್ನು ಬಿಟ್ಟು ಇಷ್ಟವಾದ ಕೆಲಸವನ್ನು ಮಾಡುವುದು. ಬೆಳಗ್ಗೆ ಎದ್ದ ಕೂಡಲೇ ಹಾಸಿಗೆ ಸುತ್ತಿಟ್ಟರೆ ಕೋಣೆ ನೀಟ್ ಆಗಿ ಕಾಣುತ್ತದೆ. ಅದು ಅಗತ್ಯವಾದ ಕೆಲಸ. ಆ ಸಮಯದಲ್ಲಿ ಬ್ರೇಕ್​ಫಾಸ್ಟ್ ಮಾಡುವುದು ಇಷ್ಟವಾದ ಕೆಲಸ. ಸಿನಿಮಾಗೆ ಹೋಗಬೇಕೆಂದರೆ ‘ಆಹಾ ನನ್ನ ಸೌಂದರ್ಯ..ಒಹೋ ನನ್ನ ಸೌಂದರ್ಯ’ ಅಂತ ಒಂದು ತಾಸು ರೆಡಿಯಾಗುವ ಹುಡುಗಿ ಡ್ರೆಸ್ಸಿಂಗ್ ಟೇಬಲ್ ಮೇಲೆ ಎಲ್ಲವನ್ನೂ ಹಾಗೇ ಬಿಡುತ್ತಾಳೆ.

    ಬಿಚ್ಚಿದ ಬಟ್ಟೆಗಳನ್ನು ಸರಿಯಾದ ಜಾಗದಲ್ಲಿ ಇಡದೆ ಎಲ್ಲೆಂದರಲ್ಲಿ ಎಸೆಯುವುದು, ಹಾಸಿಗೆ, ಹೊದಿಕೆ ಸರಿಪಡಿಸದೆ ಇರುವುದು ಮುಂತಾದ ಅಭ್ಯಾಸಗಳನ್ನು ಮಕ್ಕಳು ದೊಡ್ಡವರಿಂದ ಕಲಿತುಕೊಳ್ಳುತ್ತಾರೆ. ಬಳಲಿಕೆ, ಬೇಸರ ಎಂದು ಸೋಮಾರಿತನದಲ್ಲಿ ಎರಡು ರೀತಿ. ಬಹಳ ಸಾರಿ ವಿದ್ಯಾರ್ಥಿಗಳು ದೈಹಿಕ ಬಳಲಿಕೆಯಿಂದ ಓದುವುದನ್ನು ಬಿಡುವುದಿಲ್ಲ, ಬೇಸರದಿಂದ ಬಿಡುತ್ತಾರೆ.

    ಸೋಮಾರಿತನಕ್ಕೆ ಉತ್ಸಾಹ ಮೊದಲ ಶತ್ರುವಾದರೆ, ನಿದ್ರೆ ಮೊದಲ ಮಿತ್ರ. ಶನಿವಾರ ತಡರಾತ್ರಿವರೆಗೆ ಎದ್ದಿದ್ದು ಮರುದಿನ ತಡವಾಗಿ ಏಳುತ್ತಾರೆ ಮಕ್ಕಳು. ಹಾಗಾಗಿ ಭಾನುವಾರ ನಿದ್ದೆ ಬರುವುದಿಲ್ಲ. ಸೋಮವಾರ ತರಗತಿಯಲ್ಲಿ ಆಕಳಿಸುತ್ತ ಕುಳಿತಿರುತ್ತಾರೆ. ಮಕ್ಕಳಿಗೆ ಶನಿವಾರವೂ ಎಂದಿನಂತೆ ಅದೇ ಸಮಯಕ್ಕೆ ನಿದ್ದೆ ಮಾಡಲು ಹೇಳಬೇಕು. ಅಷ್ಟು ಸುಲಭವಲ್ಲ, ಆದರೆ ಅದು ಒಳ್ಳೇ ಅಭ್ಯಾಸ.

    ಓದುವುದನ್ನು ಮುಂದಕ್ಕೆ ಹಾಕುವ ಮಕ್ಕಳು ತಮ್ಮ ರೀಡಿಂಗ್ ಟೇಬಲ್ ಹತ್ತಿರ ಈ ಚೀಟಿ ಅಂಟಿಸಿದರೆ ಒಳ್ಳೆಯದು. ‘ಬರುವ ಹುಟ್ಟಿದ ಹಬ್ಬದಿಂದ ಓದಲು ಪ್ರಾರಂಭಿಸುತ್ತೇನೆ’ (ಹಾಗೇನು! ಹಾಗಿದ್ದರೆ ಅಲ್ಲಿಯ ತನಕ ಟಿ.ವಿ. ನೋಡುವುದನ್ನು ಬಿಟ್ಟು ಬಿಡು). ‘ಈಗಲೇ ಸಾಯಂಕಾಲ ಆಗಿಬಿಟ್ಟಿದೆ. ನಾಳೆ ಬೆಳಗ್ಗೆ ಪ್ರಾರಂಭಿಸುತ್ತೇನೆ’ (ನಿಜ… ಆದರೆ ಈಗಲೇ ಓದಿಬಿಟ್ಟರೆ ಆಗ ರಿಲ್ಯಾಕ್ಸ್ ಆಗಬಹುದಲ್ಲ?) ‘ನಾನು ಓದಲು ಪ್ರಾರಂಭಿಸಿದಾಗಲೇ ಯಾರಾದರೂ ಬಂದು ಅಡ್ಡಿಪಡಿಸುತ್ತಾರೆ’. (ಬಿಜಿ ಇದ್ದೇನೆ ಎಂದು ಅವರಿಗೆ ನಿರ್ದಾಕ್ಷಿಣ್ಯವಾಗಿ ಹೇಳು). ‘ವಾತಾವರಣ ಬಹಳ ಬಿಸಿಯಾಗಿದೆ’. (ನಿಜವೇ, ಆದರೆ ನೀನೇನೂ ಬಿಸಿಲಲ್ಲಿ ಕ್ರಿಕೆಟ್ ಆಡುತ್ತಿಲ್ಲ ಮನೆಯಲ್ಲಿ ಕುಳಿತು ಓದುತ್ತಿದ್ದೀಯ.) ವಾತಾವರಣ ಬಹಳ ಚೆನ್ನಾಗಿದೆ (ಓಹೋ! ಚೆನ್ನಾಗಿದೆಯಾ, ಹಾಗಿದ್ದರೆ ಓದು)

    ಶಿಕ್ಷಕರ ದೃಷ್ಟಿಯಲ್ಲಿ ಪಾಲಕರು: ಟೀಚರ್ಸ್ ಜೊತೆ ಸಂಪರ್ಕ ಇಟ್ಟುಕೊಳ್ಳುವುದು ಒಳ್ಳೆಯದು. ಮಕ್ಕಳು ಮನೆಯಲ್ಲಿ ಒಂದು ರೀತಿ, ಕ್ಲಾಸ್​ರೂಂನಲ್ಲಿ ಒಂದು ರೀತಿ ಇರುತ್ತಾರೆ. ಮನೆಯಲ್ಲಿ ಸದಾ ವಟಗುಟ್ಟುವ ಮಕ್ಕಳು ಕ್ಲಾಸಿನಲ್ಲಿ ಮೌನವಾಗಿರಬಹುದು ಅಥವಾ ಇದಕ್ಕೆ ವಿರುದ್ಧವೂ ಆಗಿರಬಹುದು. ಮನೆಯಲ್ಲಿ ತಂದೆ-ತಾಯಿ ಕೇಳುವ ಪ್ರಶ್ನೆಗಳಿಗೆ ಚಕಾಚಕಾ ಉತ್ತರಿಸುವ ಹುಡುಗಿ, ಕ್ಲಾಸ್​ನಲ್ಲಿ ನಿಲ್ಲಲೂ ಅಂಜುತ್ತಿರಬಹುದು. ಇಂತಹ ವೈಪರೀತ್ಯಗಳನ್ನು ಶಿಕ್ಷಕರ ಜೊತೆ ರ್ಚಚಿಸಿದಾಗ ಮಾತ್ರ ಅರಿಯಬಹುದು.

    ನಿಮ್ಮ ಮಕ್ಕಳ ಟೀಚರ್ ದೃಷ್ಟಿಯಲ್ಲಿ ನೀವೆಂತಹ ಪಾಲಕರು? ಅವರ ದೃಷ್ಟಿಯಲ್ಲಿ ಪಾಲಕರಲ್ಲಿ ಹತ್ತು ವಿಧ:

    1) ನನ್ನ ಮಗ ಬಂಗಾರ, ನನ್ನ ಮಗಳು ಪ್ಲಾಟಿನಂ: ಅವರ ಮಕ್ಕಳ ಬಗ್ಗೆ ಯಾವ ದೂರನ್ನೂ ಈ ಗುಂಪಿನ ಪಾಲಕರು ಸಹಿಸುವುದಿಲ್ಲ. ತಮ್ಮ ಮಕ್ಕಳು ಮಹಾ ಮೇಧಾವಿಗಳೆಂದೂ, ಹೋಂವರ್ಕ್ ಮಾಡದಿದ್ದರೂ ಪರವಾಗಿಲ್ಲವೆಂದೂ ಮಕ್ಕಳನ್ನು ವಹಿಸಿಕೊಂಡು ಮಾತಾಡುತ್ತಾರೆ.

    2) ಆಹಾ! ಮಕ್ಕಳೆಂದರೆ ನನ್ನ ಮಕ್ಕಳಯ್ಯಾ!: ‘ನನ್ನ ಮಗನ ಯೋಗ್ಯತೆ ಗುರ್ತಿಸದಿರುವುದು ನಿಮ್ಮ ಕರ್ಮ. ನಮ್ಮ ಹುಡುಗ ಮಿಕ್ಕವರಿಗಿಂತ ಡಿಫರೆಂಟ್, ಯಾವ ಚಾನೆಲ್​ನಲ್ಲಿ ಎಷ್ಟು ಹೊತ್ತಿಗೆ ಯಾವ ಕಾರ್ಯಕ್ರಮ ಬರುತ್ತದೆ ಅಂತ ನಿದ್ದೆಯಲ್ಲಿ ಕೂಡ ಹೇಳಬಲ್ಲ. ಚೈಲ್ಡ್ ಲಾಕ್ ಓಪನ್ ಮಾಡುವುದು ಕೂಡ ಅವನಿಗೆ ಗೊತ್ತಿದೆ. ಅಂತಹ ಮಗ ನನಗಿಲ್ಲವಲ್ಲ ಅಂತ ನಮ್ಮ ಪಕ್ಕದ ಮನೆಯಾಕೆ ನಮ್ಮೆಜಮಾನರ ಹತ್ತಿರ ಎಷ್ಟೋ ಸಾರಿ ಹೇಳಿದ್ದಾಳೆ. ಅವನಿಗೆ ಮಾರ್ಕ್ಸ್ ಬರದಿದ್ದರೆ, ಸರಿಯಾಗಿ ಪಾಠ ಮಾಡದ ನಿಮ್ಮ ತಪ್ಪು. ನೀವು ಉತ್ತರಪತ್ರಿಕೆಗಳನ್ನು ಸರಿಯಾಗಿ ಚೆಕ್ ಮಾಡುತ್ತಿಲ್ಲ! ಅಂತ ನಮ್ಮ ಅಭಿಪ್ರಾಯ.’

    3) ನಾರದರು: ತಮ್ಮ ಮಕ್ಕಳ ಬಗ್ಗೆ ಇವರು ಕ್ಲಾಸ್​ಟೀಚರ್ ಜೊತೆ ಚರ್ಚೆ ಮಾಡುವುದಿಲ್ಲ. ಹಾಗೆ ಮಾಡುವುದು ತಮ್ಮ ಲೆವಲ್​ಗೆ ಕಡಿಮೆ ಎಂದು ಭಾವಿಸುತ್ತಾರೆ. ಪ್ರಾರಂಭದಲ್ಲಿ ಹೇಗೋ ಪ್ರಿನ್ಸಿಪಾಲರ ಪರಿಚಯ ಮಾಡಿಕೊಂಡು ಅವರ ಜೊತೆ ಮಾತ್ರ ಮಾತನಾಡುತ್ತಾರೆ. ಸದಾ ಪ್ರಿನ್ಸಿಪಾಲ್ ರೂಂನಲ್ಲಿಯೇ ಇರುತ್ತಾರೆ. ಅಲ್ಲಿಂದಲೇ ಕ್ಲಾಸ್ ವ್ಯವಸ್ಥೆಯನ್ನು ತಿದ್ದಬೇಕೆಂದುಕೊಳ್ಳುತ್ತಾರೆ.

    4) ಸ್ಕೂಲ್ ಸ್ಪುಟ್ನಿಕ್: ಮಕ್ಕಳನ್ನು ಶಾಲೆಯ ಆವರಣದಲ್ಲಿ ಬಿಟ್ಟ ನಂತರ ಅರ್ಧಗಂಟೆ ಅಲ್ಲೇ ಠಳಾಯಿಸುತ್ತ ಇರುತ್ತಾರೆ. ಲಾಸ್ಟ್​ಬೆಲ್​ಗೆ ಒಂದು ತಾಸು ಮೊದಲೇ ಗೇಟ್ ಬಳಿ ಬಂದು ನಿಲ್ಲುತ್ತಾರೆ. ಸಾಧ್ಯವಾದರೆ ಕಾವಲುಗಾರರಿಗೆ ಪೂಸಿ ಮಾಡಿ ಅಂಗಳಕ್ಕೆ ಬರಲು ಪ್ರಯತ್ನಿಸುತ್ತಾರೆ. ಟೀಚರ್ ಪಾಠ ಮಾಡುತ್ತಿರುವಾಗ ಕಿಟಕಿಯಿಂದ ಇಣುಕಿ ನೋಡುತ್ತಿರುತ್ತಾರೆ. ಪೀರಿಯಡ್, ಪೀರಿಯಡ್​ಗಳ ನಡುವೆ 5 ನಿಮಿಷಗಳ ಬ್ರೇಕ್ ಇದ್ದರೆ 4 ನಿಮಿಷ 59 ಸೆಕೆಂಡ್ಸ್ ಟೀಚರನ್ನು ತಮ್ಮ ಸಂದೇಹಗಳಿಂದ ಎಂಗೇಜ್ ಮಾಡುತ್ತಾರೆ. ಕ್ಲಾಸ್ ಮಗಿದ ನಂತರ ಟೀಚರ್ ಮನೆಗೆ ಹೋಗಲು ಗಡಿಬಿಡಿ ಮಾಡುತ್ತಿದ್ದರೆ, ಸ್ಟಾಫ್​ರೂಂವರೆಗೆ ಅವರ ಹಿಂದೆಯೇ ಬರುತ್ತ ತಮ್ಮ ಪ್ರಶ್ನೆಗಳಿಂದ ಬೇಸರಪಡಿಸುತ್ತಾರೆ.

    ಈ ಕುರಿತು ಇನ್ನಷ್ಟು ವಿಧಗಳನ್ನು ಮುಂದಿನ ಅಂಕಣದಲ್ಲಿ ನೋಡೋಣ.

    ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬೇಕೆಂದೇ ಕರೊನಾ ಅಂಟಿಸಿಕೊಂಡು ಪರಿತಪಿಸಿದ ಜರ್ಮನಿಯ ಮೇಯರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts