ಯಲಬುರ್ಗಾ: ಪಟ್ಟಣದ ತಾಲೂಕು ಕ್ರೀಡಾಂಗಣಕ್ಕೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿಗೆ ಮಂಗಳವಾರ ಕ್ರೀಡಾಪಟುಗಳು ಮನವಿ ಸಲ್ಲಿಸಿದರು.
ಕ್ರೀಡಾಪಟುಗಳಾದ ಪ್ರಕಾಶ ಛಲವಾದಿ, ಶಂಕರ ಬಣಕಾರ ಮಾತನಾಡಿ, ಸಾರ್ವಜನಿಕರು, ಕ್ರೀಡಾಪಟುಗಳ ಅನುಕೂಲಕ್ಕಾಗಿ ತಾಲೂಕು ಕ್ರೀಡಾಂಗಣಕ್ಕೆ ಮೂಲ ಸೌಕರ್ಯ ಒದಗಿಸಬೇಕು. ಕ್ರೀಡಾಂಗಣ ಅಭಿವೃದ್ಧಿಪಡಿಸಿ ಸರ್ದಾರ್ ಪಟೇಲ್ ಹೆಸರು ನಾಮಕರಣ ಮಾಡಿದ್ದರೆ, ಶೋಭೆ ತರುತ್ತಿತ್ತು. ಕೂಡಲೇ ಕ್ರೀಡಾಂಗಣ ಸುತ್ತ ಕಾಂಪೌಂಡ್ ನಿರ್ಮಾಣ, ಶುದ್ಧ ನೀರಿನ ವ್ಯವಸ್ಥೆ, ಸಸಿ ನೆಡುವುದು, ಸ್ವಚ್ಛತೆ ನಿರ್ವಹಿಸಲು ಸಿಬ್ಬಂದಿ ನೇಮಕ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ರನ್ನಿಂಗ್ ಟ್ರ್ಯಾಕ್ ನಿರ್ಮಾಣ, ಒಳಾಂಗಣ, ಹೊರಾಂಗಣ ಮೈದಾನ ವ್ಯವಸ್ಥೆ, ಶೌಚಗೃಹ, ಸಾರ್ವಜನಿಕರಿಗೆ ಆಸನ ವ್ಯವಸ್ಥೆ, ವಿದ್ಯುತ್ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಮಾತನಾಡಿ, ಕೂಡಲೇ ಕ್ರೀಡಾಂಗಣ ಅಭಿವೃದ್ಧಿ ಪಡಿಸಿ, ಸಾರ್ವಜನಿಕರು, ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕ್ರೀಡಾಪಟುಗಳಾದ ಲೋಹಿತ್ ಬಣಕಾರ, ಮಲ್ಲು ಬಂಡ್ರಿ, ಮಹಾಂತೇಶ, ಖಲೀಮ್ ಹಿರೇಮನಿ, ಜನಾರ್ದನ ಬಣಕಾರ, ಶಹಜಾನ್ ಅತ್ತಾರ, ರಮೇಶ ದಂಡಿನ್, ಸಿದ್ದು ತಳುವಗೇರಿ ಇತರರಿದ್ದರು.